Advertisement

ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಅದ್ಧೂರಿ ಸ್ವಾಗತ

11:34 AM Jan 20, 2018 | |

ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಅರಮನೆಗೆ ಶುಕ್ರವಾರ ಬಡವರ ಆಹಾರವಾದ ಸಿರಿಧಾನ್ಯಕ್ಕೆ ಅದ್ದೂರಿ ಸ್ವಾಗತ ದೊರೆಯಿತು. ದಾರಿಯುದ್ದಕ್ಕೂ ರತ್ನಗಂಬಳಿ ಹಾಸಿ, ಡೊಳ್ಳುಕುಣಿತ, ಪೂಜಾ ಕುಣಿತದ ಮಧ್ಯೆ ಸಿರಿಧಾನ್ಯವು ಅರಮನೆಯನ್ನು ಪ್ರವೇಶಿಸಿತು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು, ಅಂತಾರಾಷ್ಟ್ರೀಯ ಮಟ್ಟದ ಆಹಾರ ಸಂಸ್ಥೆಗಳ ಮುಖ್ಯಸ್ಥರೆಲ್ಲರೂ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಸಿರಿಧಾನ್ಯಗಳನ್ನು ಬರಮಾಡಿಕೊಂಡರು. ಸಿರಿಧಾನ್ಯಗಳ ಜತೆಗೆ ಅವುಗಳನ್ನು ಬೆಳೆದ ರೈತರಿಗೂ ಅರಮನೆಯ ಆತಿಥ್ಯ ದೊರಕಿತು.

ಮೇಳಕ್ಕೆ ಯಾದಗಿರಿ, ಧಾರವಾಡ, ತುಮಕೂರು, ಮೈಸೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಮೊದಲ ದಿನವೇ ಹತ್ತು ಸಾವಿರ ರೈತರು ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದ್ದು, ಒಟ್ಟಾರೆ 45ರಿಂದ 50 ಸಾವಿರ ಜನ ಮೇಳಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. 

ಮೇಳದಲ್ಲಿ ಸುಮಾರು 350 ಮಳಿಗೆಗಳು ತಲೆಯೆತ್ತಿದ್ದು, ಈ ಪೈಕಿ ನೂರಕ್ಕೂ ಅಧಿಕ ಕಂಪೆನಿಗಳು ರೈತರ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನಗಳನ್ನು ಖರೀದಿಸುವವರಾಗಿದ್ದಾರೆ. 20ಕ್ಕೂ ಹೆಚ್ಚು ಕಂಪೆನಿಗಳ ಮುಖ್ಯಸ್ಥರು ಭಾಗವಹಿಸಿದ್ದು, ರಾತ್ರಿ 8ರವರೆಗೂ ಬಿ2ಬಿ (ಬ್ಯುಸಿನೆಸ್‌ ಟು ಬ್ಯುಸಿನೆಸ್‌) ಮತ್ತು ಬಿ2ಎಫ್ (ಬ್ಯುಸಿನೆಸ್‌ ಟು ಫಾರ್ಮರ್) ಸಭೆಗಳು ನಿರಂತರವಾಗಿದ್ದವು.

ಹರಿಯಾಣ, ಆಂಧ್ರಪ್ರದೇಶ, ತೆಲಂಗಾಣ, ಮೇಘಾಲಯ, ಉತ್ತರಾಖಂಡ, ಛತ್ತೀಸ್‌ಗಡ ಸೇರಿದಂತೆ ಮತ್ತಿತರ ಕಡೆಗಳಿಂದ ಬಂದ ವ್ಯಾಪಾರಿಗಳು ಮಳಿಗೆಗಳನ್ನು ತೆರೆದಿದ್ದಾರೆ. ಅಮೆರಿಕ, ದಕ್ಷಿಣ ಆಫ್ರಿಕ, ಕೋರಿಯ, ಚೈನಾ ಮತ್ತಿತರ ಕಡೆಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದಾರೆ. 

Advertisement

ಗೋಡಂಬಿ, ಬ್ಲಾಕ್‌ ಟೀ ಖರೀದಿಗೆ ಆಸಕ್ತಿ: ಮೇಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಂತರರಾಷ್ಟ್ರೀಯ ಸಾವಯವ ಕೃಷಿ ಆಂದೋಲನ ಒಕ್ಕೂಟ (ಐಎಫ್ಒಎಎಂ)ದ ಉಪಾಧ್ಯಕ್ಷೆ ಜೆನಿಫ‌ರ್‌ ಚಂಗ್‌ ಮಾತನಾಡಿ, “ನಾನು ಇಲ್ಲಿಗೆ 4ನೇ ಬಾರಿ ಭೇಟಿ ನೀಡುತ್ತಿದ್ದೇನೆ. ಒಂದೇ ವೇದಿಕೆಯಲ್ಲಿ ಉತ್ಪಾದಕರು, ಉದ್ಯಮಿಗಳು ಮತ್ತು ಗ್ರಾಹಕರು ಸೇರುವುದರಿಂದ ಅಪರೂಪದ ಮೇಳ ಎಂದರು.

ಇಂದು ಪ್ರಶಸ್ತಿ ಪ್ರದಾನ: ಮೇಳದ ಎರಡನೇ ದಿನವಾದ ಶನಿವಾರ ಸಂಜೆ 4ಕ್ಕೆ ಜೈವಿಕ್‌ ಇಂಡಿಯನ್‌ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 
ಸಾವಯವ ಕೃಷಿ, ರಫ್ತು, ಬ್ರ್ಯಾಂಡಿಂಗ್‌, ರಿಟೇಲ್‌ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಥಮ ಬಹುಮಾನ 50 ಸಾವಿರ ಮತ್ತು ದ್ವಿತೀಯ ಬಹುಮಾನ 25 ಸಾವಿರ ನಗದು ಒಳಗೊಂಡಿದೆ.

ಪ್ರತಿಭಟನೆ: ಸಿರಿಧಾನ್ಯ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ರೈತರ ಪ್ರತಿಭಟನೆಗೂ ಸಾಕ್ಷಿಯಾಯಿತು. ಧಾರವಾಡ, ಶಿವಮೊಗ್ಗ, ಭದ್ರಾವತಿ, ಬಳ್ಳಾರಿ ಸೇರಿದಂತೆ ವಿವಿಧೆಡೆಯಿಂದ ಸುಮಾರು 50ಕ್ಕೂ ಹೆಚ್ಚು ರೈತರು ಸಮಾವೇಶಗೊಂಡು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಿಮೆ ಪಾವತಿ ಭರವಸೆ ನೀಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದು, ಆಕ್ರೋಶ ವ್ಯಕ್ತಪಡಿಸಿದರು. 

ನಂತರ ಮೇಳಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ರೈತರು ಮುಂದಾದರು. ಆಗ, “ಬೆಳೆ ವಿಮೆ ಬಿಡುಗಡೆ ಕೇಂದ್ರ ಸರ್ಕಾರದ ಜವಾಬ್ದಾರಿ’ ಎಂದು ಹೊರಟರು. ಬೆನ್ನಲ್ಲೇ ಬಂದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಮನವಿ ಸಲ್ಲಿಸಿದರು. ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಇಲಾಖೆ ಆಯುಕ್ತ ಸತೀಶ್‌, ರೈತರ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ, ರೈತರು ಪಟ್ಟುಸಡಿಲಿಸಲಿಲ್ಲ. ಶನಿವಾರ ಕೂಡ ಪ್ರತಿಭಟನೆ ಮುಂದುವರಿಸುವುದಾಗಿ ರೈತರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next