Advertisement

ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ…

12:00 PM Jan 02, 2017 | |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ನೂತನ ವರ್ಷಾಚರಣೆಯ ಸಂಭ್ರಮ ಮನೆ ಮಾಡಿತ್ತು, ಹೊಸ ವರ್ಷದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಐತಿಹಾಸಿಕ ಪ್ರವಾಸಿ ತಾಣವಾಗಿರುವ ಚಾಮುಂಡಿಬೆಟ್ಟಕ್ಕೆ ಸಹಸ್ರಾರು ಭಕ್ತರದಂಡು ಹರಿದುಬಂತು.

Advertisement

ಹೊಸ ವರ್ಷದ ಮೊದಲ ದಿನವಾದ ಭಾನುವಾರ ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದ ಭಕ್ತರು ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಗರದ ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಚಾಮುಂಡಿಬೆಟ್ಟದಲ್ಲಿ ಸಾಮಾನ್ಯವಾಗಿ ಆಷಾಢ ಶುಕ್ರವಾರ, ದಸರಾ ಸೇರಿದಂತೆ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಬೆಟ್ಟದಲ್ಲಿ ಜನಸ್ತೋಮ ಕಾಣಿಸುತ್ತದೆ. ಆದರೆ ಹೊಸ ವರ್ಷದ ಹಿನ್ನೆಲೆಯಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆಯುವ ಸಲುವಾಗಿ ಸಹಸ್ರಾರು ಜನರು ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದರು.

ದೇವಿಗೆ ವಿಶೇಷ ಅಲಂಕಾರ: ಚಾಮುಂಡಿಬೆಟ್ಟದಲ್ಲಿ ಪ್ರತಿನಿತ್ಯವೂ ವಿವಿಧ ಪೂಜಾಕೈಂಕರ್ಯಗಳು ನಡೆಯುತ್ತದೆ. ಆದರೆ ಹೊಸ ವರ್ಷದ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ದೇವಾಲಯಕ್ಕೆ ಆಗಮಿಸುವುದು ವಾಡಿಕೆ. ಹೀಗಾಗಿ ಚಾಮುಂಡೇಶ್ವರಿ ದೇವಿಯ ಮೂಲವಿಗ್ರಹ ಹಾಗೂ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಇನ್ನೂ ಮೈಸೂರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ತೊಂದರೆಯಾಗದ ರೀತಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು.

ಎಲ್ಲೆಲ್ಲೂ ಜನಸ್ತೋಮ: ಬೆಟ್ಟದ ತುಂಬೆಲ್ಲಾ ಭಕ್ತ ಸಾಗರವೇ ಕಂಡುಬಂತು. ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು, ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸುವ ಮೂಲಕ ದೇವಿಯ ಅನುಗ್ರಹ ಪಡೆದರು. ಇನ್ನೂ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದ ನಂತರ ಬೆಟ್ಟದೆಲ್ಲೆಡೆ ಅಡ್ಡಾಡುವ ಮೂಲಕ ಸಂಭ್ರಮಿಸಿದರು. ಪ್ರಮುಖವಾಗಿ ದೇವಾಲಯದ ರಾಜಗೋಪುರ, ಮಹಿಷಾಸುರ ಪ್ರತಿಮೆ, ನಂದಿ ವಿಗ್ರಹ, ವೀವ್‌ ಪಾಯಿಂಟ್‌ಗಳತ್ತ ತೆರಳಿದ ಭಕ್ತರು ತಮ್ಮ ಕುಟುಂಬ ಸದಸ್ಯರು, ಸ್ನೇಹಿತರು, ಆತ್ಮೀಯರೊಟ್ಟಿಗೆ ಸೆಲ್ಫಿ ಹಾಗೂ ಫೋಟೋ ತೆಗೆಸಿಕೊಂಡು ಖುಷಿಪಟ್ಟರು.

ವಿಶೇಷ ಬಸ್‌ಗಳ ವ್ಯವಸ್ಥೆ: ಭಾನುವಾರ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು. ಜಿಲ್ಲಾಡಳಿತವು ಬೆಟ್ಟಕ್ಕೆ ತೆರಳುವ ಭಕ್ತರಿಗಾಗಿ ವಿಶೇಷ ಬಸ್‌ಗಳ 
ವ್ಯವಸ್ಥೆ ಕಲ್ಪಿಸಿತ್ತು. ಪ್ರವಾಸಿಗರು, ಭಕ್ತರು ಲಲಿತ ಮಹಲ್‌ ಹೆಲಿಪ್ಯಾಡ್‌ನ‌ಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಹೆಲಿಪ್ಯಾಡ್‌ನಿಂದ ಬೆಟ್ಟಕ್ಕೆ ತೆರಳಲು ವೋಲ್ವೋ ಬಸ್ಸಿಗೆ 20 ಹಾಗೂ ಸಾಮಾನ್ಯ ಬಸ್ಸಿಗೆ 15 ರೂ. ಟಿಕೆಟ್‌ ದರ ನಿಗದಿಪಡಿಸಲಾಗಿತ್ತು.

Advertisement

ಎಲ್ಲೆಲ್ಲೂ ಸಂಭ್ರಮ
ನಗರದೆಲ್ಲೆಡೆ ನೂತನ ವರ್ಷಾಚರಣೆಯ ಸಂಭ್ರಮ ಮುಗಿಲು ಮುಟ್ಟಿತ್ತು. ಸಿಹಿ-ಕಹಿ ನೆನಪುಗಳ ನಡುವೆ 2016ನೇ ಸಾಲಿಗೆ ವಿದಾಯ ಹೇಳಿದ ನಗರದ ಜನತೆ ಸಂಭ್ರಮ, ಸಡಗರದೊಂದಿಗೆ 2017ರ ಹೊಸ ವರ್ಷವನ್ನು ಬರಮಾಡಿಕೊಂಡರು. ಪ್ರಮುಖವಾಗಿ ನಗರದ ಹೋಟೆಲ್‌ಗ‌ಳು, ರೆಸಾರ್ಟ್‌ಗಳು, ಕ್ಲಬ್‌ಗಳು, ಮಾಲ್‌ಗ‌ಳಲ್ಲಿ ನೂತನ ವರ್ಷಾಚರಣೆ ಸಂಭ್ರಮ ಜೋರಾಗಿತ್ತು.

ಕುಟುಂಬಸ್ಥರು, ಸ್ನೇಹಿತರು, ಆತ್ಮೀಯರೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಹಲವರು 12 ಗಂಟೆಯಾಗುತ್ತಿದ್ದಂತೆ ಕೇಕ್‌ ಕತ್ತರಿಸಿ, ಹ್ಯಾಪಿ ನ್ಯೂಯರ್‌ ಎಂಬ ಘೋಷಣೆಗಳನ್ನು ಕೂಗಿ ಹೊಸ ವರ್ಷವನ್ನು ಸ್ವಾಗತಿಸಿದರು. ಹೊಸ ವರ್ಷದ ಹಿನ್ನೆಲೆಯಲ್ಲಿ ನಗರದ ಹಲವು ಹೋಟೆಲ್‌ಗ‌ಳಲ್ಲಿ ಮ್ಯೂಜಿಕಲ್‌ ನೈಟ್‌, ಪ್ಯಾಷನ್‌ ಷೋ ಸೇರಿದಂತೆ ಇನ್ನಿತರ ಮನೋರಂಜನೆಯ ಕಾರ್ಯ ಕ್ರಮಗಳನ್ನು ನಡೆಸಲಾಯಿತು. ಇನ್ನೂ ಹೊಷ ವರ್ಷದ ಅಂಗವಾಗಿ ನಗರದ ಪ್ರಮುಖ ರಸ್ತೆಗಳು, ಕಟ್ಟಡಗಳು ಹಾಗೂ ಅಂಗಡಿಗಳಿಗೆ ವಿಶೇಷ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ಅರಮನೆಯಲ್ಲೂ ಸಡಗರ
ನಗರದೆಲ್ಲೆಡೆ ಹೊಸ ವರ್ಷದ ಸಂಭ್ರಮ ನಡೆಯುತ್ತಿದ್ದರೆ, ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯಲ್ಲೂ ಈ ಬಾರಿ ಹೊಸ ವರ್ಷಾಚರಣೆಯ ರಂಗು ಜೋರಾಗಿತ್ತು. ಸಾರ್ವಜನಿಕರು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಅರಮನೆ ಆವರಣದಲ್ಲಿ ನೂತನ ವರ್ಷಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ನ್ಯೂ ಇಯರ್‌ ಸಂಭ್ರಮಕ್ಕೆ ವೇದಿಕೆ ಕಲ್ಪಿಸಿತ್ತು.

ಹೊಸ ವರ್ಷದ ಪ್ರಯುಕ್ತ ಅರಮನೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಂ.ಡಿ.ಪಲ್ಲವಿ ಅವರಿಂದ ಸುಗಮ ಸಂಗೀತ, ವಿಶೇಷ ಪೊಲೀಸ್‌ ಬ್ಯಾಂಡ್‌, ಆಕರ್ಷಕ ವಿದ್ಯುತ್‌ ದೀಪಾಲಂಕಾರದ ಜತೆಗೆ ಮಧ್ಯರಾತ್ರಿ 12ಕ್ಕೆ ಶಬ್ಧರಹಿತ ಪಟಾಕಿಗಳನ್ನು ಸಿಡಿಸಲಾಯಿತು. ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ನಡೆಸಿದ ಈ ಪ್ರಯತ್ನ ಪ್ರವಾಸಿಗರು ಹಾಗೂ ಸಾರ್ವಜನಿಕರ ಮನತಣಿಸಿತು, ಅಲ್ಲದೆ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಯಿತು.

ನಾಗರಹೊಳೆ, ಇರ್ಪುವಿನಲ್ಲಿ ಪ್ರವಾಸಿಗರ ದಂಡು
ಹುಣಸೂರು:
ಹೊಸವರ್ಷದ ಸಂಭ್ರಮಕ್ಕೆ ನಾಗರಹೊಳೆ ಉದ್ಯಾನ, ಇರ್ಪು ಜಲಪಾತಕ್ಕೆ ಪ್ರವಾಸಿಗರ ದಂಡು ಭೇಟಿ ನೀಡಿದ್ದರೆ, ಕೆಲವರಿಗೆ ಸಫಾರಿ ಭಾಗ್ಯ ದೊರೆಯಿತು. ಕೆಲ ವನ್ಯಪ್ರಿಯರು ಬಾರದ ಹೆಜ್ಜೆ ಹಾಕುತ್ತಲೇ ತಮ್ಮ ಊರಿನತ್ತ ತೆರಳಿದರು. ಕಾಂಕ್ರಿಟ್‌ ಕಾಡೆಂದೇ ಪ್ರತೀತಿ ಇರುವ ಬೆಂಗಳೂರು, ಚೆನೈ, ಕೇರಳ ಕಡೆಯಿಂದ ಹೊಸ ವರ್ಷಾಚರಣೆ ಜೊತೆಗೆ ಶನಿವಾರ,  ಭಾನುವಾರದಂದು ರಜೆ ಇರುವುದರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವಾಸಿಗರ ದಂಡೇ ಹರಿದುಬಂದಿತ್ತು.

ಹೊಸದಾಗಿ ಆರಂಭಿಸಲಾಗಿರುವ ಪಾಸ್‌ ಪಡೆಯಲು ಉದ್ಯಾನದ ಮುಖ್ಯದ್ವಾರ ವೀರನಹೊಸಹಳ್ಳಿ ಹೆಬ್ಟಾಗಿಲಿನಲ್ಲಿ ವಾಹನಗಳ ಸಾಲುಗಟ್ಟಿ ನಿಂತಿದ್ದವು. ನಾಗರಹೊಳೆಯಲ್ಲಿ ಸಫಾರಿಗೆ ತೆರಳಲು ಭಾನುವಾರ ಸಂಜೆ ಸಾಕಷ್ಟು ಮಂದಿ ಬಂದಿದ್ದರಾದರೂ ವಾಹನ ಸಿಗದೆ ವಾಪಾಸ್‌ ತೆರಳಿದರು. ಅರಣ್ಯದೊಳಗೆ ಯುವಕರ ಮೋಜು ಮಸ್ತಿಗೆ ಅವಕಾಶ ಸಿಗದಂತೆ ಆರ್‌ಎಫ್ಒ ಶಿವರಾಂ ನೇತೃತ್ವದಲ್ಲಿ ಸಿಬ್ಬಂದಿ ನಿರಂತರ ಗಸ್ತಿನಲ್ಲಿದ್ದರು.

ಯೋಗನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ ಎರಡು ಲಕ್ಷ ಲಾಡು ವಿತರಣೆ
ಮೈಸೂರು:
ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಜಯನಗರ ಒಂದನೇ ಹಂತದಲ್ಲಿರುವ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ 2 ಲಕ್ಷ ಲಾಡುಗಳನ್ನು ವಿತರಣೆ ಮಾಡಲಾಯಿತು. ಹೊಸ ವರ್ಷದ ಪ್ರಯುಕ್ತ ಭಾನುವಾರ ಮುಂಜಾನೆಯಿಂದಲೇ ಅಪಾರ ಸಂಖ್ಯೆಯ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.

ನೂತನ ವರ್ಷಾರಂಭದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಬೆಳಗ್ಗೆ 4ರಿಂದಲೇ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಪ್ರಮುಖವಾಗಿ ಯೋಗ ನರಸಿಂಹಸ್ವಾಮಿಗೆ ಅಲಂಕಾರ, ತೋಮಾಲೆ ಹಾಗೂ ಸ್ವರ್ಣಪುಷ್ಪದಿಂದ ದೇವರಿಗೆ ಸಹಸ್ರನಾಮಾರ್ಚನೆ ಮಾಡಲಾಯಿತು. ಇನ್ನೂ ದೇವಸ್ಥಾನದಲ್ಲಿರುವ ಮಲಯಪ್ಪನ್‌ ಸ್ವಾಮಿ, ಪದ್ಮಾವತಿ ಹಾಗೂ ಮಹಾಲಕ್ಷ್ಮೀ ಮೂರ್ತಿಗಳಿಗೆ ಏಕಾದಶ ಪ್ರಾಕಾರೋತ್ಸವ ಸೇರಿದಂತೆ ಇನ್ನಿತರ ಪೂಜೆಗಳನ್ನು ನೆರವೇರಿಸಲಾಯಿತು.

2 ಲಕ್ಷ ಲಡ್ಡು ವಿತರಣೆ: ಪ್ರತಿ ಬಾರಿಯೂ ಹೊಸ ವರ್ಷದಂದು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಲಾಡು ವಿತರಣೆ ಮಾಡುವುದು ವಿಶೇಷ. ಅದರಂತೆ ಸಾರ್ವಜನಿಕರು ನೂತನ ವರ್ಷದ ಸಂಭ್ರಮದಲ್ಲಿ ದೇವರ ಕೃಪೆಗೆ ಪಾತ್ರವಾಗಲಿ ಎಂಬ ಉದ್ದೇಶದಿಂದ ಭಕ್ತರಿಗೆ 2 ಲಕ್ಷ ತಿರುಪತಿ ಮಾದರಿಯ ಲಾಡುಗಳನ್ನು ವಿತರಿಸಲಾಯಿತು. ಬೆಳಗಿನ ಜಾವ 4ರಿಂದ ಆರಂಭಗೊಂಡ ಲಾಡು ವಿತರಣೆ ಕಾರ್ಯ ತಡರಾತ್ರಿ 12ರವರೆಗೂ ನಡೆಯಿತು.

ಇದಕ್ಕೂ ಮುನ್ನ ಯೋಗನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮೀಜಿ ಲಾಡು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೇವಲ ಮೈಸೂರು ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ವಿವಿಧ ಬಡಾವಣೆಗಳ ಸಾರ್ವಜನಿಕರು ದೇವಸ್ಥಾನಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತಾಧಿಕಾರಿ ಶ್ರೀನಿವಾಸನ್‌ ಹಾಜರಿದ್ದರು.

ಲಾಡು ವಿತರಣೆ ಹಿನ್ನೆಲೆ: ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ಹೊಸ ವರ್ಷದಂದು ಭಕ್ತರಿಗೆ ಲಾಡು ವಿತರಿಸುವ ಕಾರ್ಯಕ್ರಮ 1994ರಂದು ಆರಂಭಿಸಲಾಗಿದೆ. ಅದರಂತೆ 22 ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮದ ಆರಂಭದಲ್ಲಿ ಭಕ್ತರಿಗೆ 1 ಸಾವಿರ ಲಾಡುಗಳನ್ನು ವಿತರಿಸಲಾಗಿತ್ತು. ಇದೀಗ 2 ಲಕ್ಷ ಲಡ್ಡುಗಳನ್ನು ವಿತರಣೆ ಮಾಡುವ ಹಂತಕ್ಕೆ ತಲುಪಿದೆ.

ಲಾಡು ತಯಾರಿಕೆಗಾಗಿ 50 ಕ್ವಿಂಟಾಲ್‌ ಕಡಲೆಹಿಟ್ಟು, 100 ಕ್ವಿಂಟಾಲ್‌ ಸಕ್ಕರೆ, 4000 ಲೀಟರ್‌ ಖಾದ್ಯ ತೈಲ, 100 ಕೆ.ಜಿ.ಗೋಡಂಬಿ, 100 ಕೆ.ಜಿ.ಒಣದ್ರಾಕ್ಷಿ, 50 ಕೆ.ಜಿ.ಬಾದಾಮಿ, 5 0ಕೆ.ಜಿ. ಡೈಮಂಡ್‌ ಸಕ್ಕರೆ, 500 ಕೆ.ಜಿ.ಬೂರಾ ಸಕ್ಕರೆ, 10ಕೆ.ಜಿ. ಪಿಸ್ತಾ, 20 ಕೆ.ಜಿ.ಏಲಕ್ಕಿ, 20 ಕೆ.ಜಿ. ಜಾಕಾಯಿ ಮತ್ತು ಜಾಪತ್ರೆ, 5 ಕೆ.ಜಿ. ಪಚ್ಚೆ ಕರ್ಪೂರ, 50 ಕೆ.ಜಿ.ಲವಂಗಗಳನ್ನು ಬಳಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next