Advertisement
ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನ ನೇತೃತ್ವದಲ್ಲಿ ಬಲರಾಮ, ಅಭಿಮನ್ಯು, ಕಾವೇರಿ, ವಿಜಯ ಹಾಗೂ ವರಲಕ್ಷ್ಮೀ ಆನೆಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಟಾಗಿಲು ನಾಗಾಪುರ ಗಿರಿಜನ ಪುನರ್‌ವಸತಿ ಕೇಂದ್ರದಲ್ಲಿ ಶನಿವಾರ ನಡೆದ ಗಜಪಯಣ ಕಾರ್ಯಕ್ರಮದ ನಂತರ ಮೈಸೂರು ತಲುಪಿದರೆ, ಗಜೇಂದ್ರ ಕೆ.ಗುಡಿ ಆನೆ ಶಿಬಿರದಿಂದ ಹಾಗೂ ಭೀಮ ಮತ್ತಿಗೋಡು (ತಿತಿಮತಿ) ಆನೆ ಶಿಬಿರದಿಂದ ನೇರವಾಗಿ ಮೈಸೂರಿಗೆ ಲಾರಿಯ ಮೂಲಕ ಕರೆತರಲಾಯಿತು.
Related Articles
Advertisement
ನಾಗರಹೊಳೆ ಹೆದ್ದಾರಿಯಲ್ಲಿ ಅಲಂಕೃತ ಆನೆಗಳನ್ನು ಸಾಲಾಗಿ ನಿಲ್ಲಿಸಿ ಆನೆಗಳ ಪಾದ ತೊಳೆದು, ಅರಿಶಿಣ-ಕುಂಕುಮ ಹಚ್ಚಿ, ಸುಗಂಧ ದ್ರವ್ಯಗಳನ್ನು ಚಿಮುಕಿಸಿ, ಗರಿಕೆ ಗಣಪತಿ ಇರಿಸಿ ಪೂಜೆ ಸಲ್ಲಿಸಲಾಯಿತು. ಶನಿವಾರ ಬೆಳಗ್ಗೆ 10.35ರಿಂದ ಆರಂಭವಾದ ಪಂಚಮಿತಿಥಿ- ತುಲಾಲಗ್ನದಲ್ಲಿ ಮೈಸೂರಿನ ಅರ್ಚಕ ಎಸ್.ವಿ.ಪ್ರಹ್ಲಾದರಾವ್ ನೇತೃತ್ವದಲ್ಲಿ ವೇದ ಘೋಷಗಳೊಂದಿಗೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಸಿ.ಜಯರಾಮ್, ಮೈಸೂರು ವೃತ್ತದ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಪಿ.ಬಿ.ಕರುಣಾಕರ,
ದಸರಾ ವಿಶೇಷಾಧಿಕಾರಿಗಳಾದ ಜಿಲ್ಲಾಧಿಕಾರಿ ಡಿ.ರಂದೀಪ್, ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ಇತರರ ಸಮ್ಮುಖದಲ್ಲಿ ಮೊದಲಿಗೆ ಗಣಪತಿ ಪೂಜೆ, ವನದೇವಿಗೆ ಪ್ರಾರ್ಥನೆ, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಆನೆಗಳಿಗೆ ಬೆಲ್ಲ, ಕಬ್ಬು, ಬಾಳೆಹಣ್ಣು, ಚಕ್ಕುಲಿ, ಕೋಡುಬಳೆ, ಮೋದಕ, ಕಡುಬು, ತೆಂಗಿನ ಕಾಯಿಗಳ ನೈವೇದ್ಯ ಸಲ್ಲಿಸಿ, ಸಂತುಷ್ಟಗೊಳಿಸಿ ನಾಡಿಗೆ ಒಳ್ಳೆಯ ಮಳೆಯಾಗಿ- ಒಳ್ಳೆ ಬೆಳೆಬರಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ವಿದ್ಯುಕ್ತ ಚಾಲನೆ: ಬೆಳಗ್ಗೆ 11.20ರ ವೇಳೆಗೆ ನಾಗಾಪುರಕ್ಕೆ ಆಗಮಿಸಿದ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ದಸರಾ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಜ್ಯೋತಿ ಬೆಳಗುವ ಮೂಲಕ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಈ ವೇಳೆ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್, ಮೈಸೂರು ಮಹಾ ನಗರಪಾಲಿಕೆ ಮೇಯರ್ ಎಂ.ಜೆ.ರವಿಕುಮಾರ್, ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಹುಣಸೂರು ನಗರಸಭೆ ಅಧ್ಯಕ್ಷ ಲಕ್ಷ್ಮಣ, ಜಿಪಂ ಸದಸ್ಯ ಅನಿಲ್ ಕುಮಾರ್, ಜಿಪಂ ಸದಸ್ಯರಾದ ಜಯಲಕ್ಷ್ಮೀ ಸಿ.ಟಿ.ರಾಜಣ್ಣ, ಡಾ.ಪುಷ್ಪಾ ಅಮರನಾಥ್, ನಿಗಮ-ಮಂಡಳಿ ಅಧ್ಯಕ್ಷರುಗಳಾದ ಬಿ.ಸಿದ್ದರಾಜು, ಡಿ.ಧ್ರುವಕುಮಾರ್, ಮಲ್ಲಿಗೆವೀರೇಶ್, ಜಿ.ವಿ.ಸೀತಾರಾಂ, ಜಿಪಂ ಸಿಇಒ ಪಿ.ಶಿವಶಂಕರ್ ಇತರರು ಹಾಜರಿದ್ದರು.