Advertisement

ಮಂಗಳೂರಿನ 20 ಕಡೆ ಬೃಹತ್‌ ಜಲ ಸಂಗ್ರಹಾಗಾರ ಸ್ಥಾವರ

09:22 PM Nov 24, 2020 | mahesh |

ಮಹಾನಗರ: ಮಂಗಳೂರಿನ ಕುಡಿಯುವ ನೀರಿನ ಸರಬರಾಜು ಹಾಗೂ ವಿತರಣ ವ್ಯವಸ್ಥೆಯನ್ನು ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ “ಜಲಸಿರಿ’ ಯೋಜನೆ ಜಾರಿಯಾಗಿದ್ದು, ನಗರದ 20 ಕಡೆಗಳಲ್ಲಿ ಬೃಹತ್‌ ಜಲ ಸಂಗ್ರಹಾಗಾರ ಸ್ಥಾವರ ನಿರ್ಮಾಣವಾಗಲಿದೆ.

Advertisement

ನಗರದ ನಿವಾಸಿಗಳಿಗೆ ಸುಧಾರಿತ ತಂತ್ರಜ್ಞಾನ ಆಧಾರಿತ ಕುಡಿಯುವ ನೀರು ಪೂರೈಕೆ ಯೋಜನೆ ಇದಾಗಿದೆ. ಎಡಿಬಿ ನೆರವಿನಿಂದ ನಡೆಯುವ ಈ ಯೋಜನೆಗೆ ಕೆಯುಐಡಿಎಫ್‌ಸಿ ಯೋಜನೆಯ ಏಜೆನ್ಸಿಯಾಗಿದ್ದು, ಸುಯೆಜ್‌ ಪ್ರಾಜೆಕ್ಟ್ ಸಂಸ್ಥೆ ನಿರ್ವಹಿಸಲಿದೆ. ಸುಮಾರು 792 ಕೋ.ರೂ. ವೆಚ್ಚದಲ್ಲಿ ನಗರದಲ್ಲಿ ಈ ಜಲಸಿರಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಮಂಗಳೂರಿನಲ್ಲಿ ಕುಡಿಯುವ ನೀರು ಪೂರೈಕೆಯ
ವ್ಯವಸ್ಥೆಯನ್ನು ಉನ್ನತೀಕರಣ ಗೊಳಿಸುವ ನಿಟ್ಟಿನಲ್ಲಿ ನಗರದಲ್ಲಿ 20 ಓವರ್‌ಹೆಡ್‌ ಟ್ಯಾಂಕ್‌ಗಳ ನಿರ್ಮಾಣವಾಗಲಿವೆ. ಈ ಪೈಕಿ ನಂದಿಗುಡ್ಡೆ ಮೈದಾನ ಬಳಿಯಲ್ಲಿ ನಿರ್ಮಾಣವಾಗಲಿರುವ ಒಂದು ಓವರ್‌ ಹೆಡ್‌ ಟ್ಯಾಂಕ್‌ಗೆ ಶಾಸಕ ವೇದವ್ಯಾಸ್‌ ಕಾಮತ್‌ ಅವರು ಭೂಮಿಪೂಜೆ ನಡೆಸಿದ್ದಾರೆ.

19 ಟ್ಯಾಂಕ್‌ಗಳು ಎಲ್ಲಿ ?
ಉದಯನಗರ, ಕೋಡಿಪಾಡಿ, ನೆಹರೂ ಮೈದಾನ, ತಿರುವೈಲುವಿನ ಅಮೃತ ನಗರ, ಶಕ್ತಿನಗರ (ಹಾಲಿ ಇರುವ ಜಿಎಲ್‌ಎಸ್‌ಆರ್‌ ಹತ್ತಿರ), ಮೇರಿಹಿಲ್‌ (ಹಾಲಿ ಇರುವ ಜಿಎಲ್‌ಎಸ್‌ಆರ್‌), ಕೃಷ್ಣಾಪುರ (ಸರಕಾರಿ ಶಾಲೆ ಹತ್ತಿರ), ಮೋರ್ಗನ್ಸ್‌ಗೆàಟ್‌ (ಮಂಗಳೂರು ಕ್ಲಬ್‌ ಹತ್ತಿರ), ಪಣಂಬೂರಿನ ಮೀನಕಳಿಯ, ಕಂಕನಾಡಿ ವೆಲೆನ್ಸಿಯದ ಸಿಮೆಟ್ರಿ, ಕುಂಜತ್ತಬೈಲು, ಪಚ್ಚನಾಡಿಯ ಸಂತೋಷ್‌ನಗರ, ಎನ್‌ಐಟಿಕೆ ಹತ್ತಿರ (ಹಾಲಿ ಇರುವ ಟ್ಯಾಂಕ್‌ ಹತ್ತಿರ), ಲೋಹಿತ್‌ನಗರದ ನೆಕ್ಕಿಲಗುಡ್ಡ, ಜಯನಗರದ ಹೋಲಿಹಿಲ್‌, ಬಜಾಲ್‌ನ ಜೆ.ಎಂ. ರೋಡ್‌ ಹತ್ತಿರ, ಕುಳಾಯಿಯ ಕಾನಾ, ಕಾವೂರಿನ ಎಂ.ವಿ. ಶೆಟ್ಟಿ ಕಾಲೇಜ್‌ ಸಮೀಪ ಹಾಗೂ ಕೋಡಿಕಲ್‌ನಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣವಾಗಲಿದೆ.

ಎರಡು ನೆಲಮಟ್ಟದ ಜಲಸಂಗ್ರಹ ಸ್ಥಾವರ
ಪಾಲಿಕೆ ವ್ಯಾಪ್ತಿಯ ಲೇಡಿಹಿಲ್‌ ಸಮೀಪದ ಅಫೀಸರ್ ಕ್ಲಬ್‌ ಬಳಿ ಹಾಗೂ ಬಾಳದಲ್ಲಿ ತಲಾ 10 ಲಕ್ಷ ಲೀಟರ್‌ ಸಾಮರ್ಥ್ಯದ ಎರಡು ನೆಲ ಹಂತದ ಜಲಸಂಗ್ರಹ ಸ್ಥಾವರಗಳು ನಿರ್ಮಾಣವಾಗಲಿವೆ. ಲೇಡಿಹಿಲ್‌ ಬಳಿ ಜಲಸಂಗ್ರಹ ಸ್ಥಾವರಕ್ಕೆ 35 ಸೆಂಟ್ಸ್‌ ಜಾಗ ಗುರುತಿಸಲಾಗಿದೆ. ಈ ಜಲಸ್ಥಾವರದಿಂದ ಚಿಲಿಂಬಿ ಹಾಗೂ ಆಶೋಕನಗರ ಪ್ರದೇಶ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿ ಹಾರವಾಗಲಿದೆ. ಬಾಳದಲ್ಲಿ ಈಗಾಗಲೇ ಕರ್ನಾಟಕ ನೀರು ಮತ್ತು ಒಳಚರಂಡಿ ಮಂಡಳಿಯ 75 ಸೆಂಟ್ಸ್‌ ಪ್ರದೇಶದಲ್ಲಿ ಸಂಗ್ರಹ ಸ್ಥಾವರ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ನಗರದಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ 8 ಇಂಟರ್‌ ಮೀಡಿಯೆಟ್‌ ಪಂಪ್‌ಹೌಸ್‌ಗಳನ್ನು ನಿರ್ಮಿಸಲಾಗುವುದು.

ತುಂಬೆಯಲ್ಲಿ ಎರಡು ಸ್ಥಾವರ
ತುಂಬೆ ವೆಂಟೆಡ್‌ ಡ್ಯಾಂ ಸಮೀಪ ರಾಮಲ್‌ಕಟ್ಟೆ ಯಲ್ಲಿ ಹೊಸದಾಗಿ 20 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಸ್ಥಾವರ ಹಾಗೂ ಶುದ್ಧೀಕರಣ ಪ್ರಕ್ರಿಯೆ ಸಂದರ್ಭ ಹೊರಬಿಡುವ ನೀರು ಮರುಬಳಕೆ ಘಟಕ (ಬ್ಯಾಕ್‌ವಾಶ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌) ನಿರ್ಮಾಣವಾಗಲಿದೆ. ಪ್ರಸ್ತುತ ರಾಮಲ್‌ಕಟ್ಟೆಯಲ್ಲಿ 1971ರಲ್ಲಿ ನಿರ್ಮಾಣಗೊಂಡಿರುವ 80ಎಂಎಲ್‌ಡಿ, ಬಳಿಕ ಎಡಿಬಿ 1ರಲ್ಲಿ ನಿರ್ಮಾಣವಾದ 80 ಎಂಎಲ್‌ಡಿ ಸೇರಿ ಒಟ್ಟು ಎರಡು ನೀರು ಶುದ್ಧೀಕರಣ ಸ್ಥಾವರಗಳಿವೆ.

Advertisement

ನೀರು ಸೋರಿಕೆ ತಡೆಗೆ ಬಲ್ಕ್ ಫ್ಲೋ ಮೀಟರ್‌!
ಪ್ರಸ್ತುತ ತುಂಬೆ ಡ್ಯಾಂನಿಂದ ಓವರ್‌ಹೆಡ್‌ ಟ್ಯಾಂಕ್‌ವರೆಗೆ ನೀರು ಸರಬರಾಜು ಆಗುವಾಗ ಸಾಕಷ್ಟು ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ. ಇದನ್ನು ತಡೆಗಟ್ಟಲು ಪಾಲಿಕೆ ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಎಲ್ಲಿ ಸೋರಿಕೆ ಆಗುತ್ತಿದೆ ಹಾಗೂ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಇದೀಗ ತುಂಬೆ ಜಾಕ್‌ವೆಲ್‌ನಿಂದ ಓವರ್‌ಹೆಡ್‌ಗಳವರೆಗೆ ನೀರು ಸರಬರಾಜು ಮಾರ್ಗ ಮಧ್ಯೆ 181 ಸಗಟು ನೀರು ಹರಿಯುವಿಕೆ ಮೀಟರ್‌( ಬಲ್ಕ್ ಫ್ಲೋ ಮೀಟರ್‌) ಅಳವಡಿಸಲು ಉದ್ದೇಶಿಸಲಾಗಿದೆ. ನೀರು ಸೋರಿಕೆ ಎಲ್ಲಿ ಆಗುತ್ತಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತದೆ. ತುಂಬೆಯಿಂದ ಪಂಪ್‌ ಮಾಡಿದ ಪ್ರಮಾಣದಲ್ಲಿಯೇ ನೀರು ಟ್ಯಾಂಕ್‌ವರೆಗೂ ಬರುತ್ತಿದೆಯೇ ಎಂಬುದನ್ನು ಎಲೆಕ್ಟ್ರಾನಿಕ್‌ ಡಿವೈಸ್‌ ಮೂಲಕ ಪರಿಶೀಲಿಸಲಾಗುತ್ತದೆ. ಜತೆಗೆ, ನಗರದಲ್ಲಿ ಒಟ್ಟು 96,300 ನೀರಿನ ಸಂಪರ್ಕಗಳಿವೆ ಎಂದು ಗುರುತಿಸಲಾಗಿದ್ದು, ಮನೆಗಳಿಗೆ ನೀರು ವಿತರಣ ಜಾಲವನ್ನೂ ಉನ್ನತೀಕರಣಕ್ಕೆ ಉದ್ದೇಶಿಸಲಾಗಿದೆ. ಸರಾಗ ನೀರು ಪೂರೈಕೆ ನಿಟ್ಟಿನಲ್ಲಿ ನಗರದೊಳಗೆ ಒಟ್ಟು 1388.74 ಕಿ.ಮಿ. ಎಚ್‌ಡಿಪಿಇ ಅಳವಡಿಸಲಾಗುತ್ತದೆ.

“ಕಾಮಗಾರಿ ಆರಂಭ’
ಮಂಗಳೂರಿನಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಜಲಸಿರಿ ಯೋಜನೆಯ ಕಾಮಗಾರಿ ಆರಂಭವಾಗಿದೆ. ನಗರದ 20 ಕಡೆಗಳಲ್ಲಿ ಬೃಹತ್‌ ಜಲ ಸಂಗ್ರಹಾಗಾರ ಸ್ಥಾವರ ನಿರ್ಮಾಣವಾಗಲಿದೆ. ಹಳೆಯ ಹಾಗೂ ಸೋರಿಕೆಯಾಗುವ ನೀರು ವಿತರಣ ಜಾಲವನ್ನು ಹೊಸ ಸಂಪರ್ಕಕ್ಕೆ ಬದಲಾಯಿಸಲಾಗುವುದು. ಮೀಟರ್‌ ರೀಡಿಂಗ್‌, ಬಿಲ್ಲಿಂಗ್‌ ವ್ಯವಸ್ಥೆಯೂ ಈ ಮೂಲಕ ಬದಲಾವಣೆ ಕಾಣಲಿದೆ.
-ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next