ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಾಗರಹೊಳೆ ಸಫಾರಿಯಲ್ಲಿ ಆಗೊಮ್ಮೆ-ಈಗೊಮ್ಮೆ ಹುಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಜ.12ರ ಶುಕ್ರವಾರ ಸಂಜೆ ಭಾರೀ ಗಾತ್ರದ ಹುಲಿ ವಿರಾಮವಾಗಿ ರಸ್ತೆ ದಾಟುತ್ತಿದ್ದ ದೃಶ್ಯ ಕಂಡು ವನ್ಯಪ್ರಿಯರು ದಿಲ್ ಖುಷ್ ಆಗಿದ್ದಾರೆ.
ನಾಗರಹೊಳೆ ಹುಲಿಯೋಜನೆ ವತಿಯಿಂದ ಉದ್ಯಾನವನದ ಮೂರು ಕಡೆ ಅಂದರೆ ನಾಣಚ್ಚಿ ಗೇಟ್,ವೀರನಹೊಸಹಳ್ಳಿ ಕಡೆಯಿಂದ ಹಾಗೂ ದಮ್ಮನಕಟ್ಟೆಯಲ್ಲೂ ಸಫಾರಿ ನಡೆಯುತ್ತಿದೆ.
ಹೆಚ್ಚಾಗಿ ದಮ್ಮನಕಟ್ಟೆ ಸಫಾರಿಯಲ್ಲಿ 2,3,4 ಹೀಗೆ ಹುಲಿಗಳು ದರ್ಶನ ನೀಡುತ್ತಿರುತ್ತವೆ.
ಆದರೆ ನಾಗರಹೊಳೆಯ ವೀರನಹೊಸಹಳ್ಳಿ ಮತ್ತು ನಾಣಚ್ಚಿ ಗೇಟ್ ಕಡೆಯಿಂದ ಸಫಾರಿಗೆ ಬರುವವರಿಗೆ ಬೇರೆ ವನ್ಯಪ್ರಾಣಿಗಳು ಕಾಣ ಸಿಗುತ್ತವೆ. ಆದರೆ ಹುಲಿಗಳು ಕಾಣಿಸಿಕೊಳ್ಳುವುದು ತೀರಾ ಅಪರೂಪ.
ಶುಕ್ರವಾರ ಸಂಜೆಯ ಸಫಾರಿ ವೇಳೆ ರಸ್ತೆ ದಾಟುತ್ತಿದ್ದ ದೊಡ್ಡ ಹುಲಿಯೊಂದು ಯಾವುದೇ ಅಂಜಿಕೆ ಇಲ್ಲದೆ ವಿರಾಜಮಾನವಾಗಿ ರಸ್ತೆ ದಾಟುತ್ತಿರುವುದು ಕಂಡ ಸಫಾರಿ ಪ್ರೀಯರು ಒಮ್ಮೆ ಅವಕ್ಕಾಗಿದ್ದರು.
ಹುಲಿ ರಸ್ತೆ ದಾಟುತ್ತಿದ್ದ ದೃಶ್ಯವನ್ನು ಚಾಲಕ ವಿನೋದ್ ಕುಮಾರ್ ವಿಡಿಯೋ ಸೆರೆ ಹಿಡಿದು ವನ್ಯಜೀವಿ ಛಾಯಾಗ್ರಾಹಕ ರವಿಶಂಕರ್ ಮೂಲಕ ಉದಯವಾಣಿಗೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಾಗರಹೊಳೆ ಉದ್ಯಾನದಲ್ಲಿ ವನ್ಯಪ್ರಾಣಿಗಳ ಸ್ವಚ್ಚಂದ ವಿಹಾರವನ್ನು ಕಣ್ತುಂಬಿಕೊಳ್ಳಲು ನಿತ್ಯ ವನ್ಯಪ್ರೀಯರು ಹುಡುಕುತ್ತಿದ್ದಾರೆ.
https://fb.watch/pxST_KKYRU/