ಚಿಕ್ಕಮಗಳೂರು : ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿಯಲ್ಲಿ ಭಾರೀ ಹಿನ್ನಡೆಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚಿಕ್ಕಮಗಳೂರಿನಲ್ಲಿ ಪಕ್ಷದ ನಾಯಕರು, ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.
ನಡೆದಿದ್ದೇನು ?
ಬಾಳೆಹೊನ್ನೂರು ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಉಪಸ್ಥಿತರಿದ್ದ ನಯನಾ ಮೋಟಮ್ಮ, ನನಗೆ ಜವಾಬ್ದಾರಿ ಕೊಟ್ಟರೆ ಸದಸ್ಯತ್ವ ನೋಂದಣಿ ಮಾಡುತ್ತಿದ್ದೆ ಎಂದರು. ಈ ವೇಳೆ ಕಿಡಿ ಕಾರಿದ ಡಿ.ಕೆ.ಶಿವಕುಮಾರ್ ಅವರು, ನಿಮ್ಮ ತಾಯಿಯನ್ನು ಎಂಎಲ್ಎ ಮಾಡಿದ್ದೇವೆ, ಎಂಎಲ್ ಸಿ ಮಾಡಿದ್ದೇವೆ. ಇಷ್ಟಾದರೂ ನಾನು ಹಂಗೂ ಇಲ್ಲ ಹಿಂಗೂ ಇಲ್ಲ ಅಂತಾದ್ರೆ ಯಾರ್ ಕೇಳ್ತಾರೆ.? ಎಂದು ಮಾಜಿ ಸಚಿವೆ ಮೋಟಮ್ಮ ಪುತ್ರಿ ಗೆ ಪ್ರಶ್ನಿಸಿದರು.
ನಮ್ಮ ಪಕ್ಷಕ್ಕೆ ಆಧಾರಸ್ತಂಭ ಮೆಂಬರ್ ಶಿಪ್, ನಿಮ್ಮ ಕಳಪೆ ಸಾಧನೆ ಕಂಡು ನನಗೆ ದುಃಖ ಆಗುತ್ತಿದೆ, ನೋವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶ್ ಮಂತ್ ಗೂ ಕ್ಲಾಸ್ ತೆಗೆದುಕೊಂಡರು.
ನಿಮ್ಮ ಬಗ್ಗೆ ನಂಬಿಕೆ ಇತ್ತು, ಆದರೆ ಕಳೆದುಕೊಂಡು ಬಿಟ್ಟಿರಿ. ಚಿಕ್ಕಮಗಳೂರಿನ ಜನರು ವಿದ್ಯಾವಂತರಿದ್ದಾರೆ, ಬುದ್ದಿವಂತರಿದ್ದಾರೆ, ಪ್ರಜ್ಞಾವಂತ ರಿದ್ದಾರೆ. ಆದರೆ ನಿಮಗೆ ಯಾಕೆ ಸದಸ್ಯತ್ವ ನೋಂದಣಿ ಮಾಡಿಸುವುದಕ್ಕೆ ಆಗುತ್ತಿಲ್ಲ ಎಂದು ಶೃಂಗೇರಿ ಶಾಸಕ ರಾಜೇಗೌಡರ ಬಗ್ಗೆಯೂ ಅಸಮಾಧಾನ ಹೊರ ಹಾಕಿದರು.
ಮೋಟಮ್ಮರಿಗೆ ಅವಮಾನ.?
ಮೂಡಿಗೆರೆಯಲ್ಲೂ ಕಳಪೆ ಸಾಧನೆ ಹಿನ್ನೆಲೆ ಸಭೆಯಲ್ಲೇ ಮೋಟಮ್ಮ ವಿರುದ್ಧ ಗರಂ ಆದ ಡಿ.ಕೆ.ಶಿವಕುಮಾರ್, ಕಾರಿನ ಬಳಿ ಬಂದು ಕ್ಷಮೆ ಕೇಳಿದ ಹಿರಿಯ ನಾಯಕಿ ಮೋಟಮ್ಮ ಸಮಾಜಾಯಿಷಿ ನೀಡಲು ಮುಂದಾದಾಗ, ನೋ….ನೋ…. ಸಾರಿ… ಮಾತನಾಡಬೇಡಿ ಎಂದು ಕಿಡಿ ಕಾರಿದ್ದಾರೆ. ಮೊದಲು ಮೆಂಬರ್ ಶಿಪ್… ಎಂದು ಕಾರ್ ಹತ್ತಿ ನೂರಾರು ಜನರ ಮಧ್ಯೆಯೇ ಹಿರಿಯ ನಾಯಕಿಗೆ ಪ್ರತಿಕ್ರಿಯೇ ನೀಡದೆ ಹೊರಟು ಹೋಗಿದ್ದಾರೆ.