Advertisement

ಮಹಾಕಾಲೇಶ್ವರನ ವಿಗ್ರಹಕ್ಕಾಗಿ ಬೃಹತ್‌ ಏಕಶಿಲೆ ಆಗಮನ

11:02 PM May 17, 2020 | Sriram |

ಮಂಗಳೂರು: ಗುರುಪುರ ಗೋಳಿದಡಿಗುತ್ತಿನ ಚಾವಡಿಯ ಹತ್ತಿರದಲ್ಲಿರುವ ಫಲ್ಗುಣಿ ನದಿತಟದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ಬಯಲು ಆಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ದೇವರ ವಿಗ್ರಹ ರಚನೆಗಾಗಿ ಮೇ 11ರಂದು ಬೃಹತ್‌ ಏಕಶಿಲಾ ದಿಬ್ಬವನ್ನು ವೇಣೂರಿನಿಂದ ತರಲಾಯಿತು.

Advertisement

ಮುಂದಿನ ಎರಡು ಸಂವತ್ಸರದಲ್ಲಿ ಏಕಶಿಲೆಯಲ್ಲಿ ತಲೆಎತ್ತಲಿರುವ ಶಿವನ ಬಯಲು ದೇವಾಲಯವು ದಕ್ಷಿಣ ಭಾರತಕ್ಕೆ ಪ್ರಥಮವಾಗಲಿದೆ. ವೇಣೂರಿಗೆ ಹತ್ತಿರದ ಕಾಶಿಪಟ್ಣ ಗ್ರಾಮದ ರೋಡಿಯಲ್ಲಿ  ಹೊರತೆಗೆಯಲಾದ ಸರಿಸುಮಾರು 150 ಟನ್‌ ಭಾರದ 22 ಅಡಿ ಉದ್ದ, ಒಂಬತ್ತುವರೆ ಅಡಿ ಅಗಲ ಹಾಗೂ ಆರೂವರೆ ಅಡಿ ದಪ್ಪದ ಏಕಶಿಲಾ ದಿಬ್ಬವನ್ನು ಮೂಡುಬಿದಿರೆಯಿಂದ ಮಿಜಾರು, ಗಂಜಿಮಠ, ಕೈಕಂಬವಾಗಿ ಗುರುಪುರಕ್ಕೆ ಟ್ರಕ್‌ನಲ್ಲಿ ಸರಳ ಮೆರವಣಿಗೆಯಲ್ಲಿ ತರಲಾಯಿತು.

ನದಿ ತೀರದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಮಹಾಕಾಲೇಶ್ವರನ ಭವ್ಯಮೂರ್ತಿ 18 ಅಡಿ ಇದ್ದರೆ, ವಿಗ್ರಹದ ಪದ್ಮಪೀಠ ಎರಡು ಅಡಿ ಎತ್ತರವಿರುತ್ತದೆ. ಒಟ್ಟು 20 ಅಡಿ ಎತ್ತರದ ಈ ವಿಗ್ರಹ ಇರಲಿದೆ. ಭಕ್ತರು ದೇವಾಲಯದ ಮೇಲೇರಿ, ಆರು ಹಸ್ತಗಳಿರುವ ಶಿವನ ಸ್ಪರ್ಶಿಸಿ ಪೂಜಿಸಬ ಹುದು. ವೇಣೂರಿನ ಕೃಷಿಕ ಕುಟುಂಬದ ವೀರಪ್ಪ ಪೂಜಾರಿ ಮತ್ತು ಸಹೋದರರು ತಮ್ಮ ವರ್ಗ ಜಾಗದಲ್ಲಿರುವ ಈ ಶಿಲಾ ದಿಬ್ಬವನ್ನು ಉಚಿತವಾಗಿ ನೀಡಿದ್ದಾರೆ. ಬೆಳ್ತಂಗಡಿ ಲಾಯಿಲದ ಮಂಜುಶ್ರೀ ಶಿಲ್ಪಕಲಾ ಶಾಲೆಯ ವೆಂಕಟೇಶ ಆಚಾರ್ಯ,ಶಿಲ್ಪಕಲಾ ಅನುಭವಿ ತಂಡದವರು ಮುಂದಿನ ಒಂದೂವರೆ ವರ್ಷದಲ್ಲಿ ಭವ್ಯ ವಿಗ್ರಹ ನಿರ್ಮಿಸಲಿದ್ದಾರೆ. ಶ್ರೀ ಮಹಾಕಾಲೇಶ್ವರ ರಿಲೀಜಿಯಸ್‌, ಚಾರಿಟೆಬಲ್‌ ಟ್ರಸ್ಟ್‌ ಗೋಳಿದಡಿಗುತ್ತು ಗುರುಪುರ ಇದರ ಉಸ್ತುವಾರಿಯಲ್ಲಿ ನಿರ್ಮಾಣ ಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ಬಯಲು ಆಲಯಕ್ಕೆ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ.ಎಸ್‌. ನಿತ್ಯಾನಂದ ಮಾರ್ಗದರ್ಶಕರಾಗಿದ್ದಾರೆ. 2022ರಲ್ಲಿ ದೇವಾಲಯದ ನಿರ್ಮಾಣಕಾರ್ಯ ಪೂರ್ಣಗೊಳ್ಳಲಿದೆ ಎಂದು ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next