Advertisement

ವರ್ಷಾಂತ್ಯದ ಮದ್ಯ ಮಾರಾಟದಲ್ಲಿ ಭಾರೀ ಕುಸಿತ !

09:34 PM Jan 01, 2020 | mahesh |

ಮಹಾನಗರ: ಹೊಸ ವರ್ಷಾಚರಣೆ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರಿಂದ ಪಾನಪ್ರಿಯರಿಗೂ ಮನಬಂದಂತೆ ಪಾರ್ಟಿ-ಗಮ್ಮತ್ತು ಮಾಡು ವುದಕ್ಕೆ ಅವಕಾಶವಿರಲಿಲ್ಲ. ಹೀಗಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಡಿಸೆಂಬರ್‌ ತಿಂಗಳಿನಲ್ಲಿ ಒಟ್ಟಾರೆ 1,64,073 ಲೀ.ಗಳಷ್ಟು ಮದ್ಯ ಮಾರಾಟ ಕಡಿಮೆಯಾಗಿದೆ.

Advertisement

ಪ್ರತಿ ವರ್ಷ ಡಿಸೆಂಬರ್‌ ತಿಂಗಳಾಂತ್ಯಕ್ಕೆ ಕ್ರಿಸ್ಮಸ್‌ ಮತ್ತು ಹೊಸ ವರ್ಷಾಚರಣೆ ಇರುವುದರಿಂದ ಡಿಸೆಂಬರ್‌ ತಿಂಗಳಿನಲ್ಲಿ ಮದ್ಯಕ್ಕೆ ಬೇಡಿಕೆ ಹೆಚ್ಚಿರುತ್ತದೆ. ತಿಂಗಳ ಮಧ್ಯಭಾಗದಿಂದಲೇ ಹೊಸ ವರ್ಷಾಚರಣೆಗಾಗಿ ಮದ್ಯ ಖರೀದಿ ನಡೆಯುತ್ತಿರುತ್ತದೆ. ಆದರೆ, ಈ ಬಾರಿ “ಮದ್ಯರಾತ್ರಿ’ ಹೊಸ ವರ್ಷಾಚರಣೆ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ತಡರಾತ್ರಿ 12.05ಕ್ಕೆ ಹೊಸ ವರ್ಷಾಚರಣೆ ನಿಲ್ಲಿಸಿ 12.30ರೊಳಗೆ ಆಚರಣೆ ಸ್ಥಳವನ್ನು ಸಂಪೂರ್ಣ ಖಾಲಿ ಮಾಡಬೇಕು ಎಂದು ಪೊಲೀಸ್‌ ಇಲಾಖೆ ಸೂಚನೆ ನೀಡಿತ್ತು. ಪೊಲೀಸರ ಕಟ್ಟುನಿಟ್ಟಿನ ನಿಯ ಮ ದಿಂದಾಗಿ ಮದ್ಯಕ್ಕೆ ಬೇಡಿ ಕೆಯೂ ಕಡಿಮೆಯಾಗಿದೆ. ಇದರೊಂದಿಗೆ ಡಿಸೆಂಬರ್‌ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆದ ಗಲಭೆ, ಕರ್ಫ್ಯೂ ಹೇರಿಕೆ ಮತ್ತು ಅನಂತರ ನಗರಕ್ಕೆ ಪ್ರವಾಸಿಗರು, ಇತರ ಜನರು ಬರಲು ಹಿಂದೇಟು ಹಾಕಿರುವುದೂ ಡಿಸೆಂಬರ್‌ನಲ್ಲಿ ಮದ್ಯ ಮಾರಾಟ ಕಡಿಮೆಯಾಗಲು ಕಾರಣ ವಾಗಿದೆ ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.

18,67,829 ಲೀ. ಮದ್ಯ ಮಾರಾಟ
ಜಿಲ್ಲೆಯಲ್ಲಿ ಪ್ರತಿ ತಿಂಗಳಲ್ಲಿ ಸರಾಸರಿ 18,14,000 ಲೀ.ಗಳಷ್ಟು ಮದ್ಯ ಮಾರಾಟ ಆಗುತ್ತದೆ. ಡಿಸೆಂಬರ್‌ನಲ್ಲಿ ಮದ್ಯ ಮಾರಾಟ ಸರಾಸರಿ 20 ಲಕ್ಷ ಲೀಟರ್‌ ದಾಟುತ್ತದೆ. ಆದರೆ ಈ ಬಾರಿ ಪೊಲೀಸರು ಕಟ್ಟು ನಿಟ್ಟಿನ ಕ್ರಮ ವಹಿಸಿದ್ದರಿಂದ ಮದ್ಯಪ್ರಿಯರು ಕಂಗಾಲಾ ಗಿ ದ್ದಾರೆ. ಈ ಬಾರಿ ಡಿಸೆಂಬರ್‌ ತಿಂಗಳಾಂತ್ಯಕ್ಕೆ 18,67,829 ಲೀ.ಗಳಷ್ಟು ಮದ್ಯ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿ ಸಿದರೆ 1,64,073 ಲೀ.ಗಳಷ್ಟು ಕಡಿಮೆ ಯಾಗಿದೆ. 2018-19ನೇ ಸಾಲಿನ ಡಿಸೆಂಬರ್‌ ತಿಂಗಳಾಂತ್ಯಕ್ಕೆ 20,22,496 ಲೀ. ಮದ್ಯ ಮಾರಾಟವಾಗಿದ್ದು, ಇದರಲ್ಲಿ ಬಹುತೇಕ ಹೊಸ ವರ್ಷಾಚರಣೆ ಹಿನ್ನೆಲೆ ಯಲ್ಲೇ ಮಾರಾಟ ಕಂಡಿತ್ತು.

6 ಪ್ರಕರಣ ದಾಖಲು
ಹೊಸ ವರ್ಷದ ಗುಂಗಿನಲ್ಲಿ ಮದ್ಯಪಾನ ಮಾಡಿ ಚಾಲನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಗೆ ನೊಟೀಸ್‌ ನೀಡಲಾಗಿದೆ. ಕಳೆದ ವರ್ಷ 20 ಪ್ರಕರಣ ದಾಖಲಾಗಿದ್ದು, ಈ ಬಾರಿ ಪೊಲೀಸ್‌ ಇಲಾಖೆಯ ನಿಯಮಗಳನ್ನು ಪಾಲಿಸುವಲ್ಲಿ ಜನ ಸಹಕರಿಸಿದ್ದಾರೆ.  ಹೊಸ ವರ್ಷಾಚರಣೆ ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾಗ ಬಾರದೆಂಬ ಕಾರಣಕ್ಕಾಗಿ ಪೊಲೀಸರು ಡಿ. 31ರ ರಾತ್ರಿ ಮಂಗಳೂರು ಸಹಿತ ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು. ಮಂಗಳೂರಿನ ಉರ್ವ ಸ್ಟೋರ್‌, ಕೂಳೂರು, ಕೊಟ್ಟಾರ ಚೌಕಿ, ಲಾಲ್‌ಬಾಗ್‌, ನಂತೂರು, ಕೆಪಿಟಿ, ಸ್ಟೇಟ್‌ಬ್ಯಾಂಕ್‌, ಪಂಪ್‌ವೆಲ್‌, ಜ್ಯೋತಿ, ಬಲ್ಮಠ, ಕಂಕನಾಡಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿ ವಾಹನಗಳನ್ನು ತಪಾಸಣೆ ನಡೆಸಿದ್ದರು.

ನಿಯಮ ಪಾಲಿಸಿದ ಆಯೋಜಕರು
ಮಧ್ಯರಾತ್ರಿ 12.05ರೊಳಗೆ ಹೊಸ ವರ್ಷಾಚರಣೆ ನಿಲ್ಲಿಸಿ, 12.30ರೊಳಗೆ ಆಯೋಜನ ಸ್ಥಳಗಳನ್ನು ಸಂಪೂರ್ಣ ಖಾಲಿ ಮಾಡಬೇಕು ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತರು ಸೂಚಿಸಿದ್ದರು.
ಅದರಂತೆ 12.30ರ ವೇಳೆಗೆ ಹೊಸ ವರ್ಷಾಚರಣೆ ಮುಗಿಸಲಾಗಿದೆ. ಭದ್ರತೆಗೆ 26 ಕೆಎಸ್‌ಆರ್‌ಪಿ ಮತ್ತು 3 ಸಿಆರ್‌ಪಿಎಫ್‌ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು. ನಿಯಮಮೀರಿ ನಡೆಸಿದ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ನಿಯಮ ಪಾಲನೆಯಾಗಿದೆ
ಈ ವರ್ಷ ಹೊಸ ವರ್ಷದ ಹಿನ್ನೆಲೆಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರ ವಿರುದ್ಧ ದಾಖಲಾದ ಪ್ರಕರಣ ಕಡಿಮೆಯಾಗಿದೆ. 6 ಮಂದಿಯ ಮೇಲೆ ಈ ಬಾರಿ ಪ್ರಕರಣ ದಾಖಲಿಸಿ ನೊಟೀಸ್‌ ನೀಡಿದ್ದೇವೆ. ಮದ್ಯರಾತ್ರಿ 12.30ರೊಳಗೆ ಹೊಸ ವರ್ಷಾ ಚರಣೆ ಆಯೋಜನ ಸ್ಥಳ ಖಾಲಿ ಮಾಡಬೇಕೆಂಬ ನಿಯಮ ಪಾಲನೆಯಾಗಿದೆ. ನಿಯ ಮಬಾಹಿರವಾಗಿ ಹೊಸ ವರ್ಷಾ ಚರಣೆ ಮಾಡಿದ ಯಾವುದೇ ಪ್ರಕರಣ ದಾಖಲಾಗಿಲ್ಲ.
 - ಮಂಜುನಾಥ ಶೆಟ್ಟಿ, ಎಸಿಪಿ ಟ್ರಾಫಿಕ್‌, ಮಂಗಳೂರು

ಮದ್ಯಮಾರಾಟ ಕಡಿಮೆ
ಪ್ರತಿವರ್ಷ ಡಿಸೆಂಬರ್‌ ತಿಂಗಳಿನಲ್ಲಿ ಕ್ರಿಸ್ಮಸ್‌, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅಧಿಕ ಮದ್ಯ ಮಾರಾಟವಾಗುತ್ತದೆ. ಈ ಬಾರಿ ಪೊಲೀಸ್‌ ಇಲಾಖೆಯ ಬಿಗು ನಿಯಮ, ನಗರದಲ್ಲಾದ ಕೆಲ ಘಟನೆಗಳು, ಪ್ರವಾಸಿಗರ ಸಂಖ್ಯೆ ಇಳಿಮುಖ ಮುಂತಾದ ಕಾರಣಗಳಿಂದಾಗಿ ಮದ್ಯ ಮಾರಾಟ ಕಡಿಮೆಯಾಗಿದೆ. ಹೊಸ ವರ್ಷಾಚರಣೆಯ ದಿನದಂದು ಎಷ್ಟು ಮದ್ಯ ಮಾರಾಟವಾಗಿದೆ ಎಂಬ ಸಂಖ್ಯೆ ಸಿಗುವುದಿಲ್ಲ.
 - ಶೈಲಜಾ, ಉಪ ಆಯುಕ್ತೆ, ದ.ಕ. ಅಬಕಾರಿ ಇಲಾಖೆ


– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next