ದೇವನಹಳ್ಳಿ: ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರು ವು ದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭೂಮಿಯನ್ನು ಹದ ಮಾಡಿಕೊಂಡು ಉಳುಮೆ ಮಾಡಲು ಪ್ರಾರಂಭಿಸುವ ಹಂತದಲ್ಲಿಯೇ ಡಿಎಪಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳವಾಗಿದೆ.
ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಸಮರ್ಪಕ ಡಿಎಪಿ ಗೊಬ್ಬರ ಸಿಗದ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸತತ ಮಳೆ ಬೀಳುತ್ತಿರುವುದರಿಂದ ರೈತರ ಭೂಮಿಯಲ್ಲಿ ಟ್ರ್ಯಾಕ್ಟರ್, ಎತ್ತುಗಳಿಂದ ಭೂಮಿ ಹದ ಮಾಡಿಕೊಂಡು ಕೃಷಿ ಚಟುವಟಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಸಚಿವರು ಮತ್ತು ಕೃಷಿ ಅಧಿಕಾರಿಗಳು ಡಿಎಪಿ ರಸಗೊಬ್ಬರದ ಕೊರತೆ ಇಲ್ಲ ಎಂದು ಹೇಳುತ್ತಾರೆ. ಒಂದು ಕಡೆ ರೈತರು ವಾಸ್ತವಾಂಶವಾಗಿ ಡಿಎಪಿ ಗೊಬ್ಬರಗಳಿಗೆ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಸಕಾಲದಲ್ಲಿ ರೈತರಿಗೆ ಡಿಎಪಿ ರಸಗೊಬ್ಬರ ಸಿಗುವಂತೆ ಆಗಬೇಕು. ಸರ್ಕಾರ ಯಥೇಚ್ಚವಾಗಿ ಡಿಎಪಿ ರಸಗೊಬ್ಬರ ಪೂರೈಕೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಡಿಎಪಿ ಸರಬರಾಜು ಮಾಡಿ: ಜಾಗತಿಕ ಬೆಲೆ ಏರಿಕೆಯಿಂದ ರಸಗೊಬ್ಬರ ದಾಸ್ತಾನು ಕುಸಿಯುತ್ತಿದೆ ಎನ್ನಲಾದರೂ, ರೈತರು ತೀವ್ರವಾಗಿ ತತ್ತರಿಸಿದ್ದಾರೆ. ಡಿಎಪಿ ಮತ್ತು ಎಂಒಪಿ ದಾಸ್ತಾನು ಕ್ಷೀಣಿಸಿರುವುದರಿಂದ ಬೆಳೆ ಇಡಲು ಮುಖ್ಯವಾಗಿ ಭೂಮಿಗೆ ಬೇಕಾಗುವ ಡಿಎಪಿ ಮಾತ್ರ ಸಿಗದಿರುವುದರಿಂದ ರೈತರ ಕೃಷಿ ಚಟುವಟಿಕೆಗೆ ಕೊಂಚ ಬ್ರೇಕ್ ಬಿದ್ದಂತಾಗಿದೆ. ಮಾರುಕಟ್ಟೆ ಯಲ್ಲಿಯೂ ಸಹ ಡಿಎಪಿ-ಡಿ ಅಮೋನಿಯಂ ಫಾಸೇಟ್ ಸಿಗುತ್ತಿಲ್ಲ. ಇರುವ ದಾಸ್ತಾನು ಖಾಲಿ ಮಾಡಿಕೊಂಡು ಕೂರುವ ಪರಿಸ್ಥಿತಿ ಇದೆ. ಆದರೆ, ತಾಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ಡಿಎಪಿ ರಸಗೊಬ್ಬರ ಸಮರ್ಪಕವಾಗಿಲ್ಲ. ಆದ್ದರಿಂದ, ಸರ್ಕಾರ ಸಮರ್ಪಕ ಡಿಎಪಿ ಸರಬರಾಜು ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕಾಂಪ್ಲೆಕ್ಸ್ ಗೊಬ್ಬರ ಬಳಸುವಂತೆ ಸಲಹೆ: ಒಂದು ಬೆಳೆಯ ಸಂಪೂರ್ಣ ಬೆಳೆವಣಿಗೆಗಾಗಿ ಸಮತೋಲನ ಪೋಷಕಾಂಶಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾರಜನಕ, ರಂಜಕ ಮತ್ತು ಪೊಟ್ಯಾಷಿಯಂ ಅವಶ್ಯಕತೆ ಇರುತ್ತದೆ. ಯೂರಿಯಾದಲ್ಲಿ ಸಾರಜನಕ, ಡಿಎಪಿಯಲ್ಲಿ ಸಾರಜನಕ ಮತ್ತು ರಂಜಕ ಮಾತ್ರ ಇರುತ್ತದೆ. ಪೊಟ್ಯಾಷಿಯಂ ಇರುವುದಿಲ್ಲ. ಆದ್ದರಿಂದ, ರೈತರು ಕಾಂಪ್ಲೆಕ್ಸ್ ಗೊಬ್ಬರ ಬಳಸಿದರೆ ಎಲ್‌ಪಿಕೆ (ಸಾರಜನಕ, ರಂಜಕ, ಪೊಟ್ಯಾಷಿಯಂ) ಮೂರು ಇರುತ್ತದೆ. ಆದಷ್ಟು ಕಾಂಪ್ಲೆಕ್ಸ್ ಗೊಬ್ಬರ ಬಳಸಲು ರೈತರಿಗೆ ಸಲಹೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ತಿಳಿಸಿದರು.
ಡಿಎಪಿ ಅಲಭ್ಯತೆಯಿಂದ ಕೃಷಿ ಚಟುವಟಿಕೆಗೆ ತೊಂದರೆ: ರೈತರು ಮುಖ್ಯವಾಗಿ ಆಲೂಗೆಡ್ಡೆ, ಸಾಸಿವೆ, ಬೆಳ್ಳುಳ್ಳಿ, ಕಡಲೆ, ಮಸೂರ್, ಬಟಾಣಿ, ಜೀರಿಗೆ, ಧನಿಯಾ ಮತ್ತು ಕೊತ್ತಂಬರಿ ಬೆಳೆಗಳನ್ನು ಸಾಮಾ ನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ನೆಡುತ್ತಾರೆ. ಗೋ ಮತ್ತು ಈರುಳ್ಳಿ ಬಿತ್ತನೆ ನವೆಂಬರ್, ಡಿಸೆಂಬರ್‌ನಲ್ಲಿ ರಸಗೊಬ್ಬರಗಳಿಗೆ ಗರಿಷ್ಠ ಬೇಡಿಕೆ ಇರುತ್ತದೆ. ಬೆಳೆ ಇಡಲು ಉತ್ತಮ ವಾತಾವರಣ ಲಭ್ಯವಾದರೂ, ಭೂಮಿಗೆ ಬೇಕಾದ ಪೋಷಕಾಂಶ ಕೊಡಲು ಡಿಎಪಿ ಅಲಭ್ಯತೆಯಿಂದ ಕೃಷಿಕರಿಗೆ ಕೃಷಿ ಚಟುವಟಿಕೆ ನಡೆಸಲು ತೊಂದರೆಯಾಗುತ್ತಿದೆ. ಡಿಎಪಿ ಗೊಬ್ಬರ ತಾಲೂಕಿನಲ್ಲಿ ಸಿಗುತ್ತಿಲ್ಲ. ಸೊಸೈಟಿಯಲ್ಲಿ ಗೊಬ್ಬರದ ಸ್ಟಾಕ್ ಇಲ್ಲ. ಡಿಎಪಿ ಗೊಬ್ಬರಕ್ಕೆ ಬೇಡಿಕೆ ಹೆಚ್ಚು ಇದೆ. ಸಮರ್ಪಕವಾಗಿ ಸರಬರಾಜು ಮಾಡಬೇಕು. ತಾಲೂಕಿನಲ್ಲಿ ಹೆಚ್ಚು ಬಿತ್ತನೆ ಸಮಯವಾಗಿರುವುದರಿಂದ ಬೇಡಿಕೆ ಇದೆ. ತಾಲೂಕು ಸೊಸೈಟಿ ಅಧ್ಯಕ್ಷರನ್ನು ಕೇಳಿದರೆ, ಡಿಎಪಿ ಪೂರೈಕೆ ಕಡಿಮೆ ಇದೆ ಎನ್ನುತ್ತಾರೆ.
ಸಂಬಂಧಪಟ್ಟ ಸಚಿವರು ಮತ್ತು ಸರ್ಕಾರ ರೈತರಿಗೆ ಬಿತ್ತನೆ ಸಮಯದಲ್ಲಿ ಡಿಎಪಿಯನ್ನು ಸಮರ್ಪಕವಾಗಿ ಸರಬರಾಜು ಮಾಡಬೇಕು.
– ನಾರಾಯಣಸ್ವಾಮಿ, ರೈತ, ದೇವನಹಳ್ಳಿ
ಈಗಾಗಲೇ ತಾಲೂಕಿನಲ್ಲಿ ಡಿಎಪಿ ಗೊಬ್ಬರದ ಬೇಡಿಕೆ ಹೆಚ್ಚು ಇದೆ. ವಾರದಲ್ಲಿ 250 ಚೀಲ ಬಂದರೆ, ಒಂದು ದಿನದಲ್ಲಿ ಖಾಲಿಯಾಗುತ್ತಿದೆ. ರೈತರು ದಿನನಿತ್ಯ ಡಿಎಪಿ ಕೇಳುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಕನಿಷ್ಠ ಪಕ್ಷ ಸಧ್ಯಕ್ಕೆ 5 ಸಾವಿರ ಚೀಲ ಬೇಕಾಗುತ್ತದೆ.
– ಎ. ದೇವರಾಜ್, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ
– ಎಸ್. ಮಹೇಶ್