ಮುದ್ದೇಬಿಹಾಳ: ಹುಡ್ಕೋ ಬಡಾವಣೆಯ 16ನೇ ಕ್ರಾಸ್‌ನ ಮನೆಯೊಂದರಲ್ಲಿ ತಂದೆ ಮತ್ತು ಮಗನಿಗೆ ಕೋವಿಡ್ ಪಾಜಿಟಿವ್ ಕಂಡುಬಂದಿದ್ದರಿಂದ ಅವರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವಿಜಯಪುರದ ಕೋವಿಡ್ ಆಸ್ಪತ್ರೆಗೆ ರವಾನಿಸಿದ್ದು ಬಡಾವಣೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.
ಈ ಪ್ರದೇಶದ ಸುತ್ತಮುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಸೋಂಕಿತರು ಮುಂಬೈನಿಂದ ಬಂದು ಹೋಂ ಕ್ವಾರಂಟೈನ್‌ನಲ್ಲಿ ಇದ್ದರು. ಇನ್ನು ಅದೇ ಮನೆಯಲ್ಲಿ ಮಹಿಳೆಯೊಬ್ಬರು ವಾಸವಿದ್ದು, ಅವರೂ ಸಹಿತ ಮುಂಬೈನಿಂದ ಬಂದಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರ ಸಂಪರ್ಕದಲ್ಲಿರದಿದ್ದರೂ ಬಡಾವಣೆಯ ಜನತೆಯಲ್ಲಿ ಆಂತಕ ಉಂಟಾಗಿದೆ. ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ್ ತಿವಾರಿ ಭೇಟಿ ನೀಡಿ ಪರಿಶೀಲಿಸಿದರು.
ನಗರ ಕೋವಿಡ್-19 ತಂಡದ ಮೇಲ್ವಿಚಾರಕ ಎಂ.ಎಸ್. ಗೌಡರ, ಹಿರಿಯ ಪ್ರಯೋಗಾಲಯ ತಂತ್ರಜ್ಞ ಈರಣ್ಣ ಚಿನಿವಾರ, ಎಂಟಿಎಸ್ ಸುಲೇಮಾನ ರುದ್ರವಾಡಿ, ಆರೋಗ್ಯ ಸಹಾಯಕರಾದ ವೀರೇಶ್ ಭಜಂತ್ರಿ, ಎಸ್. ಆರ್.ಸಜ್ಜನ, ಆಶಾ ಕಾರ್ಯಕರ್ತೆಯರಾದ ವಿಜಯಲಕ್ಷ್ಮೀ ಐರೋಡಗಿ, ಮೇಟಿ, ಪದ್ಮ ಸಾಲೋಡಗಿ, ಸುನಂದಾ ಅಸ್ಕಿ ಮತ್ತಿತರರು ಸ್ಥಳಕ್ಕೆ ತೆರಳಿ ಸೋಂಕಿತರ ಮನೆಯವರು ಹಾಗೂ ಅಕ್ಕಪಕ್ಕದವರ ಆರೋಗ್ಯ ತಪಾಸಣೆ ನಡೆಸಿ ಕೋವಿಡ್ ಜಾಗೃತಿ ಮೂಡಿಸಿದರು. ಏತನ್ಮಧ್ಯೆ ಸೋಂಕು ಕಂಡುಬಂದ ಹಿನ್ನೆಲೆ ಸೀಲ್‌ಡೌನ್ ಪ್ರದೇಶದಲ್ಲಿ ಪುರಸಭೆಯವರು ಹೈಪೋಕ್ಲೋರಾಯಿಟ್ ದ್ರಾವಣ ಸಿಂಪಡಿಸಿ ಮುಂಜಾಗ್ರತಾ ಕ್ರಮ ಕೈಕೊಂಡಿದ್ದಾರೆ.
ಶಾಸಕರಿಗೆ ಮನವಿ: ಸೋಂಕು ಪತ್ತೆಯಾಗಿದ್ದರಿಂದ ಆತಂಕಗೊಂಡಿದ್ದ 16ನೇ ಕ್ರಾಸ್‌ನ ನಿವಾಸಿಗಳು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರನ್ನು ದಾಸೋಹ ನಿಲಯದಲ್ಲಿ ಭೇಟಿ ಮಾಡಿ,ಸೋಂಕಿತರು ಒಂದೇ ಮನೆಯವರಾಗಿದ್ದು ಅವರು ಹೊರಗೆ ಎಲ್ಲಿಯೂ ತಿರುಗಾಡಿಲ್ಲ. ಅವರೊಂದಿಗೆ ಬಡಾವಣೆಯ ಯಾರೊಬ್ಬರ ಸಂಪರ್ಕಕ್ಕೂ ಬಂದಿಲ್ಲ. ಹೀಗಾಗಿ ಇಡೀ ಪ್ರದೇಶ ಸೀಲ್‌ಡೌನ್ ಮಾಡಿದರೆ ಸಮಸ್ಯೆಯಾಗಲಿದೆ. ಸೋಂಕು ಪತ್ತೆಯಾದ ಮನೆಯನ್ನು ಮಾತ್ರ ಸೀಲ್‌ಡೌನ್ ನಿಯಮಕ್ಕೆ ಒಳಪಡಿಸುವಂತೆ ತಾಲೂಕಾಡಳಿತಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಸ್ಥಳದಲ್ಲಿದ್ದ ತಹಶೀಲ್ದಾರ್ ಜಿ.ಎಸ್. ಮಳಗಿ, ಸಿಪಿಐ ಆನಂದ ವಾಗಮೋಡೆ, ತಾಪಂ ಇಒ ಶಶಿಕಾಂತ ಶಿವಪುರೆ ಅವರನ್ನು ವಿಚಾರಿಸಿದ ಶಾಸಕರು, ಕೋವಿಡ್-19 ಪ್ರಕರಣದಲ್ಲಿ ಜಿಲ್ಲಾಡಳಿತ, ತಾಲೂಕಾಡಳಿತ ಕೈಕೊಳ್ಳುವ ಕ್ರಮಕ್ಕೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಹೇಳಿ ಎಲ್ಲರನ್ನೂ ಮರಳಿ ಕಳುಹಿಸಿದರು.