Advertisement

ನಿರ್ಲಕ್ಷ್ಯಕ್ಕೆ ಸಾಕ್ಷಿ ಹುಚ್ಚರಾಯನಗುಡಿ

04:51 PM Feb 24, 2021 | Team Udayavani |

ಕುಷ್ಟಗಿ: ಪಟ್ಟಣದ ಹೊರವಲಯದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-50, ಮೇಲ್ಸೇತುವೆ ಪಕ್ಕದಲ್ಲಿರುವ ಪ್ರಾಚೀನ ಸ್ಮಾರಕ ದೇಗುಲ “ಹುಚ್ಚರಾಯನ ಗುಡಿ’ ಸಂರಕ್ಷಣೆ ಇಲ್ಲದೇ ಮುಳ್ಳುಕಂಟಿಗಳು ಆವರಿಸಿ ನಿರ್ಲಕ್ಷ್ಯಕ್ಕೀಡಾಗಿದೆ.

Advertisement

17ನೇ ಶತಮಾನದ ಶೈವ ಪರಂಪರೆಯ ಸ್ಮಾರಕ ಇದೆನ್ನಲಾಗಿದ್ದು, ಇದಕ್ಕೆ ಹುಚ್ಚರಾಯನ ಗುಡಿ ಹೆಸರು ಹೇಗೆ ಬಂತೆನ್ನುವುದು ಗೊತ್ತಿಲ್ಲ. ಇದರ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ. ಈಗಲೂ ಗಟ್ಟಿಮುಟ್ಟಾಗಿರುವ ಈ ದೇಗುಲದ ಗೋಪುರ ಭಾಗ ಮಾತ್ರ ಕಾಲಕ್ರಮೇಣ ಶಿಥಿಲಾವಸ್ಥೆಗೀಡಾಗಿದ್ದು, ಮೂಲಸ್ವರೂಪ ಕಳೆದುಕೊಂಡಿದೆ.

ಈ ದೇಗುಲ ಪ್ರದೇಶದಲ್ಲಿ ಛಾಯಾಗ್ರಾಹಕ ಸಂಘದವರು 2016ರಲ್ಲಿ ಶ್ರಮದಾನ ಶಿಬಿರ ನಡೆಸಿ ಗಮನಾರ್ಹ ಕಾರ್ಯ ಕೈಗೊಂಡಿದ್ದರು. ನಂತರದ ದಿನಗಳಲ್ಲಿ ಈ ದೇಗುಲ ಬಗ್ಗೆ ಯಾರೂ ಕಾಳಜಿ ವಹಿಸಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಹೀಗೊಂದು ಸ್ಮಾರಕ ದೇಗುಲ ಇತ್ತೆನ್ನುವುದು ಮರತೇ ಹೋಗಿದೆ. ಈ ಸ್ಮಾರಕ ದೇಗುಲದ ಅಕ್ಕಪಕ್ಕದಲ್ಲಿ ಚರಂಡಿ ಹರಿಯುತ್ತಿದ್ದು, ದೇಗುಲವನ್ನು ಮುಳ್ಳುಕಂಟಿಗಳು ಮರೆಯಾಗಿಸಿವೆ. ಈ ದೇಗುಲದತ್ತ ತೂರಿ ಹೋಗುವಷ್ಟು ದಾರಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಷಜಂತುಗಳ ಭೀತಿಗೆ ಯಾರೂ ಅಲ್ಲಿಗೆ ಹೋಗಲು ಧೈರ್ಯ ಮಾಡಿಲ್ಲ.

ಐತಿಹಾಸಿಕ ದೇಗುಲ ಮುಳ್ಳುಕಂಟಿಯಲ್ಲಿ ಮುಚ್ಚಿ ಹೋಗಿ ಯಾರೂ ಗಮನ ಹರಿಸುತ್ತಿಲ್ಲ. ಇದಕ್ಕಿಂತ ಬೇಸರದ ಸಂಗತಿ ಇನ್ನೊಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳಿಯರಾದ ಪಾಂಡುರಂಗ ಅವರು.

Advertisement

ಇದು ಸರ್ಕಾರದ ಆಸ್ತಿ. ಇದರ ಬಗ್ಗೆ ಪುರಾತತ್ವ ಇಲಾಖೆ ಗಮನ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿರುವುದು ಇಂದಿನ ಅನಿವಾರ್ಯತೆಯಾಗಿದೆ. ಇದು ಖಾಸಗಿಯವರ ಸ್ವತ್ತಲ್ಲ. ಶಾಸಕರು, ಪುರಸಭೆ ಅಧ್ಯಕ್ಷರು, ತಹಶೀಲ್ದಾರರು ಇತ್ತ ಗಮನ ಹರಿಸಿ ಸಂರಕ್ಷಣೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಪಾಂಡುರಂಗ ಅವರು ಒತ್ತಾಯಿಸುತ್ತಾರೆ.

ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಐತಿಹಾಸಿಕ ಸ್ಮಾರಕ ದೇಗುಲದ ಸುತ್ತಲೂ ಮುಳ್ಳು ಕಂಟಿ ಬೆಳೆದಿದ್ದು, ಬುಧವಾರ ಬೆಳಗ್ಗೆ ಜೆಸಿಬಿಯಿಂದ ತೆರವುಗೊಳಿಸಿ ಸ್ವಚ್ಛಗೊಳಿಸಲಾಗುವುದು. ಮುಂದೆ ವರಲಕ್ಷ್ಮೀ (ವರಲೆಕ್ಕವ್ವ) ಸ್ಮಾರಕ ದೇಗುಲದಂತೆ ಈ ದೇಗುಲವನ್ನೂ ಅಭಿವೃದ್ಧಿಗೊಳಿಸಲು ಯೋಜಿಸಲಾಗಿದೆ.  -ಗಂಗಾಧರಸ್ವಾಮಿ ಹಿರೇಮಠ, ಅಧ್ಯಕ್ಷರು, ಪುರಸಭೆ ಕುಷ್ಟಗಿ

 

­-ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next