ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನಿಗೆ ತಲೆ ಬಾಗುತ್ತಾರೆ ಎನ್ನುವ ವಿಶ್ವಾಸವಿದೆ. ರಾಜೀನಾಮೆ ನೀಡುವುದಿಲ್ಲ ಎಂದು ಅವರು ಹೇಳಿಲ್ಲ. ಬೇರೆಯವರು ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ರೈಲ್ವೆ ಖಾತೆ ರಾಜ್ಯ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಜೀವನ ತೆರೆದ ಪುಸ್ತಕ ಎಂದು ಹೇಳಿಕೊಳ್ಳುತ್ತಾರೆ. ಆ ಪುಸ್ತಕದಲ್ಲಿ ಕೆಲವು ತಪ್ಪುಗಳಾಗಿವೆ ಎಂದು ಕೋರ್ಟ್ ಹೇಳಿದೆ. ಕಾನೂನಿಗೆ ಗೌರವ ಸಲ್ಲಿಸಬೇಕಾದದ್ದು ಎಲ್ಲರ ಕರ್ತವ್ಯ. ಈ ಆರೋಪದಿಂದ ಹೊರಬರುವವರೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹಿಂದೆ ಇಂತಹ ಪರಿಸ್ಥಿತಿ ಎದುರಾದಾಗ ರಾಜೀನಾಮೆ ನೀಡಿ ನಂತರ ಅಧಿಕಾರ ಪಡೆದುಕೊಂಡಿರುವ ಉದಾಹರಣೆಗಳಿವೆ ಎಂದರು.
ಸಿದ್ದರಾಮಯ್ಯ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅವರೊಂದಿಗೆ ಒಡನಾಟ ಹೊಂದಿದ್ದೇನೆ. ಹೀಗಾಗಿ ಸಿದ್ದರಾಮಯ್ಯ ಅವರು ಕಾನೂನಿಗೆ ಗೌರವ ಕೊಡುತ್ತಾರೆ. ಕೋರ್ಟ್ ಆದೇಶದ ಬಳಿಕ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ತನಿಖೆ ಬಳಿಕ ಸಿಎಂ ಸ್ಥಾನಕ್ಕೆ ಪುನಃ ಅಧಿಕಾರ ಸ್ವೀಕಾರ ಮಾಡಲಿ ಎಂದು ಹೇಳಿದರು.
ಬಿಜೆಪಿಯಲ್ಲಿ ಬಣ ರಾಜಕಾರಣವಿಲ್ಲ. ಮನೆಯಲ್ಲಿ ಬಹಳ ಜನ ಬುದ್ದಿವಂತರು ಇದ್ದಾಗ ಸ್ವಲ್ಪ ಭಿನ್ನಾಭಿಪ್ರಾಯ ಬರುವುದು ಸಹಜ ಎಂದ ಅವರು, ರಾಯಣ್ಣ ಬ್ರಿಗೇಡ್, ಚನ್ನಮ್ಮ ಬ್ರಿಗೇಡ್ ಯಾರು ಮಾಡುತ್ತಿದ್ದಾರೆ ಅವರನ್ನೇ ಕೇಳಿ ಎಂದರು.