Advertisement

ಹುಬ್ಬಳ್ಳಿ:ಕುಂದಗೋಳ ಆಸ್ಪತ್ರೆಯಲ್ಲಿ ಶುದ್ಧ ಕುಡಿವ ನೀರೇ ಇಲ್ಲ

06:05 PM Jun 13, 2023 | Team Udayavani |

ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ಕಲುಷಿತ ನೀರು ಸೇವಿಸಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದರೆ ಇಲ್ಲಿನ ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿಯೇ ಶುದ್ಧ ಕುಡಿಯುವ ನೀರಿನ ಕೊರತೆಯಿದೆ. ಕಳೆದ ಒಂದು ವರ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಾಗದೆ ತುಕ್ಕು ಹಿಡಿಯುತ್ತಿದೆ. ಹೀಗಾಗಿ ರೋಗಿಗಳು ಹೊರಗಿನ ನಲ್ಲಿ ನೀರು ಸೇವಿಸಬೇಕು. ಇಲ್ಲದಿದ್ದರೆ ಮನೆ ಅಥವಾ ಅಂಗಡಿಯಿಂದ ಖರೀದಿ ಮಾಡುವಂತಹ ದುಸ್ಥಿತಿಗೆ ಆಸ್ಪತ್ರೆಯ ದುರಾಡಳಿತ ತಂದು ನಿಲ್ಲಿಸಿದೆ.

Advertisement

ಕುಂದಗೋಳ ತಾಲೂಕಿನಲ್ಲಿಯೇ ಇದೊಂದು ದೊಡ್ಡ ಆಸ್ಪತ್ರೆ. ಬಡ, ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರಿಗೆ ಇದೇ ದೊಡ್ಡಾಸ್ಪತ್ರೆ. ಹಿಂದುಳಿದ ತಾಲೂಕು ಎನ್ನುವ ಕಾರಣಕ್ಕೆ ಇಲ್ಲಿನ ಜನರಿಗೆ ಉತ್ತಮ ಆರೋಗ್ಯ ಸೇವೆಗಾಗಿ 100 ಹಾಸಿಗೆಯ ಆಸ್ಪತ್ರೆ ಕಲ್ಪಿಸಲಾಗಿದೆ. ಆದರೆ ಆಸ್ಪತ್ರೆಗಳಲ್ಲಿ ದೊರೆಯಬೇಕಾದ ಮೂಲ ಸೌಲಭ್ಯಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರಿಲ್ಲ. ಹೀಗಾಗಿ ಆಸ್ಪತ್ರೆ ಆವರಣದಲ್ಲಿ ನಲ್ಲಿ ನೀರೇ ಗತಿಯಾಗಿದೆ. ಈ ನೀರು ಸೇವನೆ ಎಷ್ಟು ಸೂಕ್ತ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ
ಅನಿರ್ವಾಯವಾಗಿ ಈ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು, ರೋಗಿಗಳ ಸಂಬಂಧಿಕರು ಇದೇ ನಲ್ಲಿ ನೀರನ್ನು ಕುಡಿಯುವ ಪರಿಸ್ಥಿತಿ ಎದುರಾಗಿದೆ.

ಮನೆಯಿಂದಲೇ ನೀರು ತರಬೇಕು: ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಉತ್ತಮವಾಗಿರುವ ಕಾರಣಕ್ಕೆ ನಿತ್ಯ 200-250 ಹೊರ ರೋಗಿಗಳು ಬರುತ್ತಾರೆ. 100 ಹಾಸಿಗೆ ಸಾಮರ್ಥ್ಯದಲ್ಲಿ ಕನಿಷ್ಠ 50-60 ಒಳ ರೋಗಿಗಳು ದಾಖಲಾತಿ ಇರುತ್ತದೆ. ಈ ಒಳ ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಶುದ್ಧ ನೀರು ಬಯಸಿದರೆ ನಿತ್ಯವೂ ಮನೆಯಿಂದ ತರಬೇಕು. ಆದರೆ ನಿತ್ಯವೂ ತಮ್ಮ ಹಳ್ಳಿಯಿಂದ ನೀರು ತರಲು ಸಾಧ್ಯವಿಲ್ಲ. ಇನ್ನು ನಿತ್ಯವೂ ನೀರಿಗಾಗಿ 80-100 ರೂ. ವ್ಯಯಿಸುವುದು ಅಸಾಧ್ಯದ ಮಾತು. ಈ ನಲ್ಲಿಗಳಿರುವ ಜಾಗ ನೋಡಿದರೆ ಕಾಲಿಡಲು ಮನಸ್ಸಾಗಲ್ಲ. ಆದರೆ ಜನರು ಅದಾವುದನ್ನು ಲೆಕ್ಕಿಸದೆ ಆದೇ ನೀರನ್ನು ಕುಡಿಯುತ್ತಿದ್ದಾರೆ. ಇನ್ನು ರಾತ್ರಿ ವೇಳೆ ಹೊರ ಹೋಗದೆ ಸ್ನಾನದ ಕೋಣೆಯಲ್ಲಿ ಬರುವ ನೀರನ್ನು ಸೇವಿಸುವವರು
ಇದ್ದಾರೆ.

ಆರ್‌ಒ ಇದ್ದರೂ ಇಲ್ಲದಂತೆ: ಆಸ್ಪತ್ರೆಯೊಳಗಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಬಂದು ಒಂದು ವರ್ಷ ಕಳೆದಿದ್ದರೂ ಅದನ್ನು ಸಿದ್ಧಪಡಿಸುವ ಗೋಜಿಗೆ ಹೋಗಿಲ್ಲ. ಈ ಘಟಕದ ಮೇಲಿರುವ ಟ್ಯಾಂಕ್‌ನ ನೀರು ಹಸಿರು ಬಣ್ಣಕ್ಕೆ ತಿರುಗಿದ್ದರೂ ಸಂಬಂಧಿಸಿದವರು ಗಮನ ಹರಿಸಿಲ್ಲ. ಇನ್ನು ವಾರ್ಡ್ ಗಳಲ್ಲಿ ಅಲ್ಲಲ್ಲಿ ಕುಡಿಯುವ ನೀರು ಎನ್ನುವ‌ ಫಲಕಗಳಿವೆಯೇ ವಿನಃ ನೀರಿಲ್ಲ. ಎಲ್ಲಾ ವಾಟರ್‌ ಫಿಲ್ಟರ್‌ ಕೂಡ ಕೆಟ್ಟಿದ್ದರೂ ರಿಪೇರಿಯಾಗಿಲ್ಲ. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮನೆಯಿಂದ ನೀರು ತಂದು ಕುಡಿಯುವಂತಹ ಸ್ಥಿತಿಗೆ ಎದುರಾಗಿದೆ. ಆದರೆ ಐದಾರು ದಿನ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳು ಹಾಗೂ ಅಟೆಂಡರ್‌ಗಳು ನಿತ್ಯವೂ ಮನೆಯ ನೀರು ಸಾಧ್ಯವಿಲ್ಲ.

ಬಾಣಂತಿಯರಿಗೆ ತಣ್ಣೀರೇ ಗತಿ
ಈ ಆಸ್ಪತ್ರೆಯಲ್ಲಿ ಕನಿಷ್ಠ 10-11 ಬಾಣಂತಿಯರು ವಾರ್ಡ್‌ನಲ್ಲಿರುತ್ತಾರೆ. ವೈದ್ಯರ ಸಲಹೆ ಪ್ರಕಾರ ಬಾಣಂತಿಯರ ಸ್ನಾನ ಅಥವಾ ಕೈ ಕಾಲು ತೊಳೆಯಲು, ನವಜಾತು ಶಿಶುಗಳ ಬಟ್ಟೆ ತೊಳೆಯಲು ಬಿಸಿ ನೀರು ನೀಡಬೇಕು. ಆದರೆ ಇಲ್ಲಿರುವ ಬಾಣಂತಿಯರಿಗೆ ಬಿಸಿ ನೀರಿನ ಭಾಗ್ಯವಿಲ್ಲ. ಹೆಸರಿಗೆ ಸೋಲಾರ್‌ ಅಳವಡಿಸಿದ್ದರೂ ಅವು ಕೆಲಸ ನಿಲ್ಲಿಸಿ ಅದೆಷ್ಟು ವರ್ಷ ಕಳೆದಿವೆಯೋ ಗೊತ್ತಿಲ್ಲ. ಬಿಸಿ ನೀರಿಲ್ಲದೆ ಅನಿವಾರ್ಯವಾಗಿ ತಣ್ಣೀರು ಬಳಸುವಂತಾಗಿದೆ. ದಿನಕ್ಕೆ ಮೂರ್‍ನಾಲ್ಕು ಬಾಟಲಿ ಕುಡಿಯುವ ನೀರು ತರಬಹುದು. ಆದರೆ ಬಿಸಿ ನೀರು ತರಲು ಸಾಧ್ಯವೇ ಎಂಬುದು ಮಹಿಳೆಯರ ಪ್ರಶ್ನೆಯಾಗಿದೆ.

Advertisement

ದಾನಿಗಳ ನೆರವು ಅಗತ್ಯ
ಇಂತಹ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಒದಗಿಸುವ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಮುಖ್ಯ ಆಡಳಿತಾಧಿಕಾರಿ ಹಾಗೂ ಸಂಬಂಧಿಸಿದವರು ಮರೆತಂತಿದೆ. ಅನುದಾನ ಕೊರತೆಯಿದ್ದರೆ ಯಾವುದಾದರೂ ಎನ್‌ ಜಿಒಗಳಿಗೆ ಮನವಿ ಮಾಡಿದರೆ ಕೊಡಿಸುತ್ತಿದ್ದರು. ಆಸ್ಪತ್ರೆ ಆವರಣದಲ್ಲಿಯೇ ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಇದರ ಮುಂಭಾಗದಲ್ಲಿಯೇ ನಿತ್ಯವೂ ಜನರು ನಲ್ಲಿಯಿಂದ ನೀರು ತುಂಬುತ್ತಿದ್ದರೂ ಅವರ ಕಣ್ಣಿಗೂ ಬಿದ್ದಿಲ್ಲವೇನು? ಇಂತಹ ದುರಾಡಳಿತ, ಆಡಳಿತ ವೈಫಲ್ಯಕ್ಕೆ ಬಿಸಿ ಮುಟ್ಟಿಸಿ ಸೌಲಭ್ಯ ಕಲ್ಪಿಸುವ ಕೆಲಸ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳಿಂದ ಆಗಬೇಕು. ಯಾವುದಾದರೂ ಎನ್‌ ಜಿಒ ಸಮಸ್ಯೆ ಅರಿತು ಆರ್‌ಒ ಘಟಕ ಒದಗಿಸಿ ಬಡವರಿಗೆ ಅನುಕೂಲವಾಗಲಿದೆ.

ತಾಲೂಕು ಆಸ್ಪತ್ರೆಯಲ್ಲಿರುವ ಕುಡಿಯುವ ನೀರು, ಬಾಣಂತಿಯರಿಗೆ ಬಿಸಿ ನೀರಿನ ಸಮಸ್ಯೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಉದಯವಾಣಿ ಪತ್ರಿಕೆ ನನ್ನ ಗಮನಕ್ಕೆ ತಂದಿರುವುದು ಒಳ್ಳೆಯ ಕಾರ್ಯ. ಕೂಡಲೇ ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. ಯಾವ ಕಾರಣಕ್ಕೆ ಇಷ್ಟೊಂದು ಸಮಸ್ಯೆಯಾಗಿದೆ ಎಂಬುದನ್ನು ಪರಿಶೀಲಿಸುವಂತೆ ಸೂಚಿಸುತ್ತೇನೆ.
ಎಂ.ಆರ್‌.ಪಾಟೀಲ, ಶಾಸಕರು

ನಾವು ಬಡವರು ಸರ್‌, ಶುದ್ಧ ನೀರು ಕುಡಿಬೇಕು ಅಂದ್ರೆ ಕೊಂಡುಕೊಳ್ಳೋದು ಕಷ್ಟ. ಇದೇ ನಲ್ಲಿ ನೀರನ್ನು ಕುಡಿಯುತ್ತಿದ್ದೇವೆ. ರೋಗಿಗೂ ಇದೇ ನೀರನ್ನು ಕೊಡುತ್ತಿದ್ದೇವೆ. ಇದು ಎಲ್ಲಿಂದ ಬರುತ್ತೋ ಗೊತ್ತಿಲ್ಲ. ಮೇಲಿನ ಟ್ಯಾಂಕ್‌ ಅದೆಷ್ಟು ಸ್ವಚ್ಛವಾಗಿದೆಯೋ ಗೊತ್ತಿಲ್ಲ. ಈ ನೀರು ಬಿಟ್ಟರೆ ನಮಗೆ ಮತ್ತೂಂದು ಗತಿಯಿಲ್ಲ.
ದೇವಪ್ಪ ಸಂಶಿ, ರೋಗಿಯ ಸಂಬಂಧಿ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next