ಹುಬ್ಬಳ್ಳಿ: ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆಯೋ ಅದು ಅವರ ಆಂತರಿಕ ವಿಚಾರ. ಆದರೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಅನ್ನುವುದು ಮುಖ್ಯ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದು ಅವರಿಗೆ ಬಿಟ್ಟದ್ದು. ವಿಪಕ್ಷದ ಆರೋಪಗಳನ್ನು ನಿಭಾಯಿಸಲು ಸಿಎಂ ಸಭೆಗಳ ಮೇಲೆ ಸಭೆ ಮಾಡುತ್ತಿದ್ದಾರೆ. ಹೈಕಮಾಂಡ್ ಶ್ರೀರಕ್ಷೆ ಎಲ್ಲಿಯವರೆಗೆ ಅನ್ನುವುದು ಅವರಿಗೆ ಬಿಟ್ಟ ವಿಚಾರ. ಒಂದು ವರದಿಯಲ್ಲಿ ಸಿಎಂಗೆ ರಕ್ಷೆ ಎಂದರೆ, ಮತ್ತೊಂದರಲ್ಲಿ ಪ್ರಾದೇಶಿಕ ಪಕ್ಷದ ರೀತಿ ನಡೆದುಕೊಳ್ಳಲಾಗಲ್ಲ ಎನ್ನಲಾಗುತ್ತಿದೆ ಎಂದರು.
ರಾಜ್ಯದ ಜನತೆ ಒಳ್ಳೆಯ ಆಡಳಿತ ನೀಡಲೆಂದು ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ಸರ್ಕಾರದಲ್ಲಿ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಬರಗಾಲ ಬಂದರೂ ಸರಿಯಾದ ಪರಿಹಾರ ಕೊಡುತ್ತಿಲ್ಲ. ಮುಳುಗಡೆಯಾದ ಪ್ರದೇಶಗಳಿಗೆ ಪರಿಹಾರ ಕೊಟ್ಟಿಲ್ಲ. ಒಂದು ವಿಡಿಯೋ ಕಾಲ್ ಬಿಟ್ಟರೆ ಬೇರೇನೂ ಮಾಡಿಲ್ಲ. ಸಂಕಷ್ಟದಲ್ಲಿರುವ ಜನತೆಗೆ ಸ್ಪಂದನೆ ಮಾಡದ ಸರ್ಕಾರ ರಾಜ್ಯದಲ್ಲಿದೆ. ಇಂತಹ ಸರ್ಕಾರ ಬೇಕೆ ಅನ್ನುವ ಪ್ರಶ್ನೆ ಉದ್ಭವವಾಗಿದೆ ಎಂದರು.
ಹಂಸರಾಜ್ ಭಾರದ್ವಾಜ್ ಒಬ್ಬ ರಾಜಕಾರಣಿಯ ಗವರ್ನರ್ ಆಗಿದ್ದ. ಆ ರೀತಿ ವರ್ತಿಸಿದ್ದ ಎಂದು ಮಾಜಿ ರಾಜ್ಯಪಾಲರ ವಿರುದ್ಧ ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಹಂಸರಾಜ್ ಭಾರದ್ವಾಜ್ ರಾಜಕಾರಣ ಬಿಟ್ಟರೆ ಬೇರೇನು ಮಾಡಲಿಲ್ಲ. ದಿನ ಬೆಳಗಾದರೆ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಂಡಿತು? ಅಂದು ರಾಜ್ಯಪಾಲರ ಭಾಷೆ, ಅವರ ನಿರ್ಧಾರ ಇವರಿಗೆ ಬೇಕಾಗಿತ್ತು. ಈಗ ಅದೇ ಪರಿಸ್ಥಿತಿ ಅವರಿಗೆ ಬಂದಾಗ ರಾಜ್ಯಪಾಲರ ವಿರುದ್ಧ ಮಾತನಾಡುತ್ತಿದ್ದಾರೆ. ಇದು ಸಂವಿಧಾನ ಮತ್ತು ರಾಜ್ಯಾಂಗದ ಪ್ರಶ್ನೆ. ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಗಳು. ಆ ಸ್ಥಾನ ಬಹಳ ಮುಖ್ಯವಾದದ್ದು. ಅವರ ಕಾರ್ಯ ವೈಖರಿ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಹೇಳುವುದಕ್ಕೆ ರೀತಿ ನೀತಿ ಇದೆ. ಆ ರೀತಿ ನಡೆದುಕೊಂಡರೆ ರಾಜ್ಯ ಸರ್ಕಾರದ ಗೌರವ ಸಿಗುತ್ತದೆ. ರಾಜ್ಯಪಾಲರನ್ನು ಬಯ್ಯುವುದರಿಂದ ಕಾಂಗ್ರೆಸ್ ಗೆ ಏನು ಲಾಭ ಆಗಲ್ಲ. ಅಹಿಂದ ಸಂಘಟನೆಯಿಂದ ರಾಜಭವನ ಚಲೋ ವಿಚಾರವು ಕಾಂಗ್ರೆಸ್ ಪ್ರೇರಿತ ಹೋರಾಟ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನನ್ನ ಮಗ ಸ್ಪರ್ಧಿಸಲ್ಲ
ಭರತ್ ಬೊಮ್ಮಾಯಿ ಶಿಗ್ಗಾವಿಯಿಂದ ಸ್ಪರ್ಧಿಸಲ್ಲ. ಟಿಕೆಟ್ ಸಹ ಕೇಳಿಲ್ಲ. ಅಲ್ಲದೆ ಶಿಗ್ಗಾವಿ-ಸವಣೂರು ಕ್ಷೇತ್ರದ ಜನ ಭರತ್‌ಗೆ ಟಿಕೆಟ್ ಕೊಡಲು ಒತ್ತಡ ತಂದಿಲ್ಲ. ಜೋಶಿಯವರನ್ನು ಭೇಟಿಯಾಗಲು ಶಿಗ್ಗಾವಿ ಕ್ಷೇತ್ರದ ಜನ ಹೋಗಿದ್ದ ಉದ್ದೇಶವೇ ಬೇರೆ. ಆದರೆ ಅದು ಬೇರೆ ರೀತಿಯ ಪ್ರಚಾರವಾಗಿದೆ. ಕಷ್ಟದಲ್ಲಿ ಪಕ್ಷ ಕಟ್ಟಿದವರಿಗೆ, ನಿಷ್ಠರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಜೋಶಿಯವರು ಭರತ್ ಹೆಸರು ಹೇಳಿದ್ದಾರೆ. ನಾನು ನನ್ನ ಮಗನಿಗೆ ಟಿಕೆಟ್ ಕೇಳಿಲ್ಲ. ನನ್ನ ಮಗ ಸ್ಪರ್ಧೆ ಮಾಡುವ ವಿಚಾರವಿಲ್ಲ ಎಂದರು.