ಹುಬ್ಬಳ್ಳಿ: ಸರ್ವೆ ಇಲಾಖೆಗೂ ಆಧುನಿಕತೆಯ ಸ್ಪರ್ಶ ಕೊಡುತ್ತೇವೆ. ತ್ವರಿತಗತಿಯಲ್ಲಿ ಸರ್ವೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿದರು.
ಇಲ್ಲಿನ ತಹಶಿಲ್ದಾರ ಹಾಗೂ ಉಪ ನೋಂದಣಿ ಕಚೇರಿಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ವೆ ಕೆಲಸ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಕಿಯಿವೆ. ಈಗಿನ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯ ವೇಗ ಹೆಚ್ಚಿಸಲಿದ್ದೇವೆ. 20 ಕೋಟಿ ವೆಚ್ಚ ಮಾಡಿ ಆಧುನಿಕ ಉಪಕರಣ ಕೊಡುತ್ತಿದ್ದೇವೆ. 750 ಪರವಾನಗಿ ಸರ್ವೇದಾರರ ನೇಮಕ ಮಾಡಿಕೊಳ್ಳುತ್ತಿದ್ದೇವೆ. ಸರ್ವೆ ಇಲಾಖೆಯ 357 ಎಡಿಎಲ್ಆರ್ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಜೊತೆಗೆ ಖಾಲಿಯಿರುವ 596 ಹುದ್ದೆಗಳನ್ನು ಭರ್ತಿ ಮಾಡಲು ಸಿಎಂ ಸೂಚಿಸಿದ್ದಾರೆ. ಹೀಗಾಗಿ ಖಾಲಿ ಹುದ್ದೆ ಭರ್ತಿ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಗೆ ಮುಂದಾಗಿದ್ದೇವೆ ಎಂದರು.
ಕಾವೇರಿ 2.0 ನೋಂದಣಿ ಸರ್ವರ್ ಸಮಸ್ಯೆ ಇದೀಗ ಇಲ್ಲ. ಭೂ ಸುರಕ್ಷಾ ಯೋಜನೆ ಎಲ್ಲಾ ಜಿಲ್ಲೆಗಳ ಒಂದು ತಾಲೂಕಿನಲ್ಲಿ ಆರಂಭಿಸಲಾಗುತ್ತಿದ್ದು, ಎರಡು ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಯೋಜನೆ ಕಾರ್ಯಾಂಭವಾಗಲಿದೆ ಎಂದರು.
ಹುಬ್ಬಳ್ಳಿ ತಹಶೀಲ್ದಾರ್, ಉಪ ನೋಂದಣಿ ಕಚೇರಿಗಳಲ್ಲಿ ಏಜೆಂಟರ ಹಾವಳಿ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಇವೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಮಿನಿ ವಿಧಾನಸೌಧ ಕಟ್ಟಡದಲ್ಲಿ ಶೌಚಾಲಯ ಅವ್ಯವಸ್ಥೆ ಕಂಡು, ನಿಮ್ಮ ಮನೆನಲ್ಲಿ ಇದೆ ರೀತಿ ಇರಿಸುತ್ತೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.