Advertisement

Hubli: ರಾಜ್ಯ ಸರ್ಕಾರವು ಭಯೋತ್ಪಾದಕರನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿದೆ: ಬೆಲ್ಲದ್

03:21 PM Oct 12, 2024 | Team Udayavani |

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ಹಿಂಪಡೆಯಲು ನಿರ್ಧರಿಸಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇದನ್ನು ವಿರೋಧಿಸಿ ಕಾನೂನಾತ್ಮಕ ಜೊತೆಗೆ ರಾಜ್ಯಾದ್ಯಂತ ಬೀದಿಗಿಳಿದು ತೀವ್ರ ಹೋರಾಟ ಮಾಡಲಾಗುವುದು ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ (Aravind Bellad) ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಪೊಲೀಸ್ ಕೇಸ್ ಆಗಿತ್ತೆ ವಿನಃ ಅಮಾಯಕರ ಮೇಲಲ್ಲ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಓಲೈಕೆ ಮತ್ತು ಭಯೋತ್ಪಾದಕರನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿದೆ. ಆ ಮೂಲಕ ರಾಜ್ಯದ ಜನತೆಗೆ ಯಾವ ಸಂದೇಶ ನೀಡಲು ಹೊರಟಿದೆ. ಇದರ ಹಿಂದಿನ ಉದ್ದೇಶ ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಜನರ ಗಮನ ಬೇರೆಡೆ ತಿರುಗಿಸಲು ಇಂತಹ ಪ್ರಯತ್ನಗಳನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಡಿಕಾರಿದರು.

ದುಷ್ಟಶಕ್ತಿಗಳನ್ನು ದಮನ ಮಾಡುವ ಬದಲು ರಾಜ್ಯ ಸರ್ಕಾರ ಅಂಥವರನ್ನು ರಕ್ಷಿಸುವ, ಬೆಳೆಸುವ ಕೆಲಸ ಮಾಡುತ್ತಿದೆ. ಕೂಡಲೇ ಹಳೇಹುಬ್ಬಳ್ಳಿ ಗಲಾಟೆಯಲ್ಲಿ ಭಾಗಿಯಾದವರ ಮೇಲಿನ ಕೇಸನ್ನು ಖುಲಾಸೆ ಮಾಡಲು ಹೊರಟಿರುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹಳೇಹುಬ್ಬಳ್ಳಿ ಠಾಣೆ ಬಳಿ ನಡೆದ ಗಲಾಟೆಯು ಯಾವುದೇ ಕೋಮು ಗಲಭೆ, ದೊಂಬಿ ಹಾಗೂ ಸಮಸ್ಯೆಗಳ ಕುರಿತು ನಡೆದ ಹೋರಾಟ, ಪ್ರತಿಭಟನೆಯಲ್ಲ. ಅದು ಪೊಲೀಸರು ಮತ್ತು ಕೋಮುವಾದಿಗಳ ನಡುವೆ ನಡೆದ ಗಲಾಟೆ. ಇಂತಹ ಪ್ರಕರಣವನ್ನು ಖುಲಾಸೆಗೊಳಿಸುತ್ತಾರೆ ಎಂದರೆ ಇದರ ಅರ್ಥವೇನು? ಇದು ಪೊಲೀಸರ ನೈತಿಕತೆ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ರಾಜ್ಯದಲ್ಲಿ ಅರಾಜಕತೆ ಉಂಟಾದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದರು.

ಧಾರವಾಡ ಜಿಲ್ಲೆಗೆ ಕಳಂಕ: ಶಾಸಕ ವಿನಯ ಕುಲಕರ್ಣಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಕೂಡಲೇ ಅವರನ್ನು ಬಂಧಿಸಬೇಕು. ಇದರ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಮಾಜಿ ಶಾಸಕ ಅಮೃತ ದೇಸಾಯಿ ಒತ್ತಾಯಿಸಿದರು.

Advertisement

ವಿನಯ ಕುಲಕರ್ಣಿ ಮೇಲೆ ದೂರು ದಾಖಲಾಗಿದ್ದರು ಸಹ ಸರ್ಕಾರ ಅವರ ಮೇಲೆ ಯಾವುದೇ ಕಾನೂನು ಕ್ರಮಕೈಗೊಂಡಿಲ್ಲ. ಅದೇ ರೇವಣ್ಣ, ಮುನಿರತ್ನ ಪ್ರಕರಣದಲ್ಲಿ ಸರ್ಕಾರ ತಕ್ಷಣ ತೋರಿದ ಉತ್ಸಾಹ ಈ ಪ್ರಕರಣದಲ್ಲಿ ಯಾಕೆ ತೋರುತ್ತಿಲ್ಲ. ಆ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಅನುಸರಿಸುತ್ತಿದೆ ಎಂದು ವಾದ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಆರ್‌‌‌. ಪಾಟೀಲ, ಹು.ಧಾ.‌ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗ್ಗಿ, ಶಿಸ್ತು ಸಮಿತಿಯ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next