Advertisement

Hubli; ಸ್ಲೋಗನ್ ಬದಲಾವಣೆ ಕಾಂಗ್ರೆಸ್ ಸರ್ಕಾರದ ಮುಠ್ಠಾಳತನದ ವರ್ತನೆ: ಪ್ರಹ್ಲಾದ ಜೋಶಿ

02:13 PM Feb 19, 2024 | Team Udayavani |

ಹುಬ್ಬಳ್ಳಿ: ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಬರಹ ಬದಲಾವಣೆ ವಿಚಾರವು ಕಾಂಗ್ರೆಸ್ ಸರ್ಕಾರದ ಮುಠ್ಠಾಳತನದ ವರ್ತನೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ಪರಮಾವಧಿ. ರಾಷ್ಟ್ರಕವಿ ಕುವೆಂಪು ಅವರಿಗೆ ಮಾಡಿರುವ ಅಪಮಾನ. ಹಾಗಿದ್ದರೆ ಕುವೆಂಪು ಜಾತ್ಯತೀತ ವ್ಯಕ್ತಿ ಅಲ್ಲವೇ? ಯಾಕೆ ಈ ರೀತಿ ಮಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ ಎಂದರು.

ರಾಮ ಮಂದಿರ ಬೇರೆ ಸ್ಥಳದಲ್ಲಿ ಕಟ್ಟಿದ್ದಾರೆ ಎಂಬ ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾರ್ಮಿಕ ಸಚಿವ ಸಂತೋಷ ಲಾಡ್ ಸುಪ್ರೀಂ ಕೋರ್ಟ್ ಗಿಂತ ಮೇಲಿದ್ದಾರೆಯೇ? ಕಾಂಗ್ರೆಸ್ ನಾಯಕರಿಗೆ ಏನಾಗಿದೆ ಎಂದು ಅರ್ಥವಾಗುತ್ತಿಲ್ಲ. ಲಾಡ್ ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ. ಹೀಗಾಗಿ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ‌. ಕಾರಣ ಇವರು ಅವರಂತೆ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಈಗಾಗಲೇ ರಾಮ ಮಂದಿರ ನಿರ್ಮಾಣವಾಗಿದೆ. ಅವರು ಸ್ವಲ್ಪ ಪ್ರಬುದ್ಧರಾಗಿ ಮಾತನಾಡಲಿ. ಅಪ್ರಬುದ್ಧ ಹೇಳಿಕೆ ಯಾಕೆ ನೀಡುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದರು.

ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಹೊಂದಿದೆ. ಮನುಷ್ಯನಿಗೆ ಶ್ರದ್ಧೆ, ಸ್ವಾಭಿಮಾನ, ಆತ್ಮಾಭಿಮಾನ ಮುಖ್ಯ. ಅಪಮಾನ ಯಾರು ಸಹಿಸಲ್ಲ. ಇವರು ರಾಮ ಮಂದಿರ ಕಟ್ಟಿದರೆ ಬಡತನ ನಿವಾರಣೆ ಆಗುತ್ತದೆಯೇ ಎನ್ನುತ್ತಾರೆ. ಹಾಗಿದ್ದರೆ ಸಿದ್ದರಾಮಯ್ಯ ಒಂದು ಕಡೆ ರಾಮಮಂದಿರ ಉದ್ಘಾಟಿಸಿದರು. ಹಾಗಿದ್ದರೆ ಅದರಿಂದ ಬಡತನ ನಿವಾರಣೆಯಗುತ್ತದೆಯೇ? ಚರ್ಚ್, ಮಸೀದಿ ಕಟ್ಟುವುದರಿಂದ ಬಡತನ ನಿವಾರಣೆ ಆಗುತ್ತಾ ಎಂದು ಕೇಳಲಿ ನೋಡೋಣ. ಹಿಂದೂ ಮತ್ತು ರಾಮನ ಬಗ್ಗೆ ಇಷ್ಟು ಹೊಟ್ಟೆಕಿಚ್ಚು ಏಕೆ ಎಂದರು.

Advertisement

ಕಾಂಗ್ರೆಸ್ ಖಾತೆಗಳ ಬಂದ್ ವಿಚಾರದಲ್ಲಿ ದ್ವೇಷ ರಾಜಕಾರಣ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿಲ್ಲ. ಖಾತೆಗಳ ಕುರಿತು ಮಾಹಿತಿ ಕೊಡಲು ಸೂಚಿಸಲಾಗಿತ್ತು. ಕಾಂಗ್ರೆಸ್ ನವರಿಗೆ ಐಟಿ ಇಲಾಖೆ ಹತ್ತಾರು ಬಾರಿ ನೋಟೀಸ್ ಕಳುಹಿಸಿದೆ. ನಂತರ ಡಿಮ್ಯಾಂಡ್ ನೋಟೀಸ್ ಸಹ ಕಳಿಸಲಾಗಿತ್ತು. ದಂಡದ ಹಣ ತುಂಬಿಲ್ಲ. ಹೀಗಾಗಿ ಐಟಿ ಇಲಾಖೆ ಕ್ರಮ ಕೈಗೊಂಡಿದೆ ಎಂದರು.

ಕಾಂಗ್ರೆಸ್ ನವರು ಮೊದಲು ತಮ್ಮ ಜನರನ್ನು ಉಳಿಸಿಕೊಳ್ಳಲಿ. ದೇಶಾದ್ಯಂತ ಆ ಪಕ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಪಕ್ಷಾಂತರವಾಗುತ್ತಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಲಾಡ್ ನಂಥವರು ಮಾತುಗಳಿಂದ ತಲೆಕೆಟ್ಟು ಬಹಳ ಜನ ಪಕ್ಷ ಬಿಡುತ್ತಿದ್ದಾರೆ. ಅದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ ಆಪ್ತರ ಬಿಜೆಪಿ ಸೇರ್ಪಡೆ ಶೀಘ್ರವೇ ಸೆಟಲ್ ಆಗುತ್ತದೆ. ಶೆಟ್ಟರ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅವರು ನನ್ನ ವಿರುದ್ಧ ದೂರು ಕೊಡಲು ದೆಹಲಿಗೆ ಬಂದಿರಲಿಲ್ಲ. ಅಲ್ಲಿ ನಮ್ಮ ಪಕ್ಷದ ಸಭೆ ಇತ್ತು. ಹೀಗಾಗಿ ಅವರು ಅಲ್ಲಿಗೆ ಬಂದಿದ್ದರು. ಊಹಾಪೋಹದ ಪ್ರಶ್ನೆಗಳಿಗೆ ನಾನು ಉತ್ತರಿಸಲ್ಲ ಎಂದರು.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳಿಗೆ ಜಾಮೀನು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗಲಭೆಕೋರರನ್ನು ಅಮಾಯಕರೆಂದು ಇವರು ಹೇಳಿದ್ದರು. ನ್ಯಾಯಾಲಯದಲ್ಲಿ ಸರ್ಕಾರ ಸರಿಯಾಗಿ ವಾದ ಮಂಡಿಸಿಲ್ಲ. ಪರೋಕ್ಷವಾಗಿ ಜಾಮೀನಿಗೆ ಸರ್ಕಾರ ಸಮ್ಮತಿ ನೀಡಿದೆ. ಮುಂದೆ ಇಂತಹ ಘಟನೆ ನಡೆದಾಗ ಅವರಿಗೆ ಗೊತ್ತಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next