ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಕುಂದಗೋಳ ವಿಧಾನಸಭಾ ಮತಕ್ಷೇತ್ರದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಅಭ್ಯರ್ಥಿಗೆ ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಶುಕ್ರವಾರ ಸಂಜೆ ಇಲ್ಲಿನ ವಿದ್ಯಾನಗರ ರಾಜೀವನಗರದ ಚಂದ್ರಗಿರಿ ಲೇಔಟ್‌ನಲ್ಲಿ ನಡೆದಿದೆ.
ಘಟನೆಯಲ್ಲಿ ಆರ್‌ಪಿಐ ಅಭ್ಯರ್ಥಿ, ಉಣಕಲ್ಲ ಬಳಿಗಾರ ಓಣಿಯ ಮಲ್ಲಿಕಾರ್ಜುನ ಕೆ. ತೋಟಗೇರ (46) ಹಲ್ಲೆಗೊಳಗಾಗಿದ್ದು, ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರ ಸ್ನೇಹಿತ, ಚಂದ್ರಗಿರಿ ಲೇಔಟ್‌ನ ಸುನಿಲ ಎಂಬಾತ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ಮಲ್ಲಿಕಾರ್ಜುನ ಅವರು ಪಕ್ಷೇತರಾಗಿ ಕುಂದಗೋಳ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ಹು-ಧಾ. ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲೂ ವಾರ್ಡ್ ನಂ. 37 ರಲ್ಲಿ ಆರ್‌ಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಹಣಕಾಸಿನ ವಿಷಯವಾಗಿ ಭೇಟಿಯಾಗಲೆಂದು ಮಲ್ಲಿಕಾರ್ಜುನರು ಸುನಿಲ ಮನೆಗೆ ಹೋದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವುಂಟಾಗಿದೆ. ಅದು ವಿಕೋಪಕ್ಕೆ ಹೋಗುತ್ತಿದ್ದಂತೆ ಅವಾಚ್ಯ ಶಬ್ದಗಳಿಂದ ಪರಸ್ಪರರ ಮಧ್ಯೆ ವಾಗ್ವಾದ ನಡೆದಿದೆ. ಆಗ ಕೋಪಗೊಂಡ ಸುನಿಲನು ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆಗೊಳಗಾದ ಮಲ್ಲಿಕಾರ್ಜುನರು ಹನುಮಂತ ನಗರದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಉಪಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಹಾಗೂ ಕಿಮ್ಸ್ ಆಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು, ವಿದ್ಯಾನಗರ ಪೊಲೀಸರು ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಷುಲ್ಲಕ ವಿಷಯವಾಗಿ ಸ್ನೇಹಿತನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದವನು ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.