Advertisement

ಹುಬ್ಬಳ್ಳಿ: ಸರ್ಕಾರಿ ಕಚೇರಿಗಳಲ್ಲಿ ಏಜೆಂಟರಿಗೆ ಕಡಿವಾಣ ಅವಶ್ಯ

06:59 PM Jul 21, 2023 | Team Udayavani |

ಹುಬ್ಬಳ್ಳಿ: ವಕೀಲರ ವಿವಿಧ ಆದಾಯ ಮೂಲಗಳನ್ನು ಇತರರು ಅತಿಕ್ರಮಿಸುತ್ತಿರುವುದರಿಂದ ಸಂಕಷ್ಟ ಅನುಭವಿಸುತ್ತಿದ್ದು, ವಕೀಲರು ನಿರ್ವಹಿಸಬೇಕಾಗಿದ್ದಕೆಲ ಸರಕಾರಿ ಕಚೇರಿಗಳಲ್ಲಿನ ಕೆಲಸಗಳನ್ನು ಏಜೆಂಟರು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣ್ವೇಕರ ಹೇಳಿದರು.

Advertisement

ಗುರುವಾರ ಪೃಥ್ವಿ ಪ್ಯಾರಡೈಸ್‌ನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಯುವ ವಕೀಲರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ತೆರಿಗೆ, ಉಪ ನೋಂದಣಿ ಇಲಾಖೆ, ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲ ಕಾರ್ಯಗಳನ್ನು ವಕೀಲರೇ ನಿರ್ವಹಿಸಬೇಕು. ಆದರೆ ಈ ಎಲ್ಲಾ ಕಾರ್ಯಗಳನ್ನು ಏಜೆಂಟರು ಅತಿಕ್ರಮಿಸಿಕೊಂಡಿರುವುದರಿಂದ ವಕೀಲರ ಆದಾಯದ ಮೂಲಗಳು ಕಡಿತಗೊಂಡಿವೆ.

ಈ ಕಾರ್ಯಗಳಲ್ಲಿ ವಕೀಲರಿದ್ದರೆ ಅಧಿಕಾರಿಗಳ ನಿರೀಕ್ಷೆಗಳು ಈಡೇರುವುದಿಲ್ಲ ಎನ್ನುವ ಕಾರಣಕ್ಕೆ ಏಜೆಂಟರನ್ನು ಸಲಹುತ್ತಿದ್ದಾರೆ. ಇದರಿಂದ ಜನರಿಗೂ ಸಾಕಷ್ಟು ತೊಂದರೆಗಳಾಗುತ್ತಿವೆ. ಇದಕ್ಕೆ ಕಡಿವಾಣ ಹೇರಬೇಕು. ಇಂತಹ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಹಿರಿಯ ವಕೀಲರು ಯುವ ವಕೀಲರಿಗೆ ಸಲಹೆ ಹಾಗೂ ಮಾರ್ಗದರ್ಶನ ಮಾಡಬೇಕು ಎಂದರು.

ವಕೀಲ ಸಮಾಜದ ವಿಜ್ಞಾನಿಯಿದ್ದಂತೆ. ಆರಂಭದಲ್ಲಿ ವೃತ್ತಿಯಲ್ಲಿ ಒಂದಿಷ್ಟು ಕಷ್ಟಗಳು ಇರುತ್ತವೆ. ಹಿಂದೆಯೂ ಇದ್ದವು, ಮುಂದೆಯೂ ಇರುತ್ತವೆ. ಅವುಗಳನ್ನು ದಾಟಿಕೊಂಡು ಮುನ್ನಡೆಯಬೇಕು. ಬಯಸಿ ಬಂದ ಕ್ಷೇತ್ರದಲ್ಲಿ ಸಾಧಿಸುವ ಛಲವಿರಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಬಹುಪಾಲು ವಕೀಲರು ಇದ್ದರು ಎಂಬುದು ಈ ವೃತ್ತಿಗಿರುವ ಗೌರವವಾಗಿದೆ.

ಸಂವಿಧಾನ ರಚನೆಯಲ್ಲೂ ವಕೀಲರ ಪಾತ್ರ
ದೊಡ್ಡದು. ಇರುವ ಸಮಸ್ಯೆಗಳನ್ನು ಮೆಟ್ಟಿನಿಂತು ಯಶಸ್ಸು ಸಾಧಿಸಬೇಕು. ಎಲ್ಲಿಯೂ ಪ್ರವೇಶ ದೊರೆಯದ ಕಾರಣ ಇಲ್ಲಿಗೆ ಬಂದಿದ್ದೇವೆ ಎನ್ನುವ ಧೈರ್ಯಗುಂದುವುದು ಬೇಡ ಎಂದು ಹೇಳಿದರು. ವಕೀಲರ ಸಂಘಕ್ಕೆ ಚುನಾವಣೆ ನಡೆಯಲಿದ್ದು, ವಕೀಲರ ಶ್ರೇಯೋಭಿವೃದ್ಧಿ ಬಯಸುವಂತಹವರಿಗೆ ಮತ ಹಾಕಬೇಕು. ಯುವ ವಕೀಲರ ಸಮಸ್ಯೆಗೆ ಸ್ಪಂದಿಸುವವರನ್ನು ಗೆಲ್ಲಿಸಬೇಕು. ಶೇ.100 ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

Advertisement

ಬಾಲನಟಿ ಶಾರ್ವರಿ ಹಾಗೂ ಚಲನಚಿತ್ರ ಸಾಹಿತ್ಯದಲ್ಲಿ ಗುರುತಿಸಿಕೊಂಡಿರುವ ಚೇತನ ಲಿಂಬಿಕಾಯಿ ಅವರನ್ನು ಯುವ ವಕೀಲರ ಸಂಘದಿಂದ ಸನ್ಮಾನಿಸಲಾಯಿತು. ಹಿರಿಯ ವಕೀಲರಾದ ಎಸ್‌. ಎಸ್‌. ಖಾದ್ರಿ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಲಕ್ಷ್ಮಣ ಕುಲಕರ್ಣಿ, ಸಂಜಯ ಬಡಸ್ಕರ, ಅನಿಲ ಬದ್ದಿ, ನಾಗವೇಣಿ, ಶಿವಾನಂದ ವಡ್ಡಟ್ಟಿ, ಪರಶುರಾಮ ಮಡಿವಾಳ, ಅವಿನಾಶ ಮಾಳವದೆ ಇನ್ನಿತರರಿದ್ದರು.

ಯುವ ವಕೀಲರ ಮನವಿ
ವಕೀಲರ ಗೌರವಧನ ಹೆಚ್ಚಳ, ವಕೀಲರ ಹಿತರಕ್ಷಣಾ ಕಾಯ್ದೆ, ವಿವಿಧ ಇಲಾಖೆಗಳಲ್ಲಿ ವಕೀಲ ಆದಾಯ ಮೂಲ ಅತಿಕ್ರಮಿಸಿಕೊಂಡಿರುವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಒಬಿಸಿ, ಎಸ್ಸಿ, ಎಸ್ಟಿ ವರ್ಗದ ವಕೀಲರಿಗೆ ಕಂಪ್ಯೂಟರ್‌, ಮಹಾನಗರ ಪಾಲಿಕೆಯ ಮಳಿಗೆಯಲ್ಲಿ ವಕೀಲರ ಕಚೇರಿಗೆ ಆದ್ಯತೆ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಹಿರಿಯ ವಕೀಲರು, ವಕೀಲರ ಸಂಘ ಗಮನ ಹರಿಸಬೇಕು ಎಂದು ಸಭೆಯಲ್ಲಿ ಯುವ ವಕೀಲರು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next