ಹುಬ್ಬಳ್ಳಿ: ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ತಗ್ಗಿದ್ದು ಜನಜೀವನ ಸಹಜ ಸ್ಥಿತಿಗೆ ಮರುಳಿದೆ. ಈಗ ಹಾನಿಯ ಲೆಕ್ಕಾಚಾರ ಶುರುವಾಗಿದೆ. ಅಪಾರ ಪ್ರಮಾಣದ ಬೆಳೆ ಜಲಾವೃತವಾಗಿದ್ದರೆ, ನೂರಾರು ಮನೆಗಳು ಧರೆಗುರುಳಿವೆ. ನದಿಗಳ ನೀರಿನ ಮಟ್ಟ ಇನ್ನೂ ಇಳಿಕೆಯಾಗಿಲ್ಲ. 30ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ ಹಂತದಲ್ಲೇ ಇವೆ. ಭೀಮಾ ನದಿಯಲ್ಲಿ ಮೃತದೇಹವೊಂದು ತೇಲಿ ಬಂದಿದೆ. ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಯ ಜಲಪಾತಗಳಿಗೆ ತೆರಳುವುದನ್ನು ನಿಷೇಧಿಸಲಾಗಿದೆ.
ಮಹಾರಾಷ್ಟ್ರದ ಕೊಂಕಣ ಭಾಗದ ಪಾಟಗಾಂವ, ರಾಧಾನಗರಿ, ಕೋಯ್ನಾ, ಮಹಾಬಳೇಶ್ವರ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.04 ಲಕ್ಷ ಕ್ಯೂಸೆಕ್, ದೂಧಗಂಗಾ ಮತ್ತು ವೇದಗಂಗಾ ನದಿಗಳಿಂದ 28,160 ಕ್ಯೂಸೆಕ್ ಸೇರಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 1,33,827 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಅಪಾಯ ಮಟ್ಟ ಮೀರಿ ಹರಿದು ನಿಪ್ಪಾಣಿ ತಾಲೂಕಿನ ಜತ್ರಾಟ, ಹುನ್ನರಗಿ, ಯಮಗರ್ಣಿ ಜನರಿಗೆ ನಡುಕ ಹುಟ್ಟಿಸಿದ್ದ ವೇದಗಂಗಾ ನದಿ ಕೊಂಚ ತಗ್ಗಿದೆ. ಕೃಷ್ಣಾ ಮತ್ತು ಉಪನದಿಗಳ ಪಾತ್ರದ ಸುಮಾರು 500ಕ್ಕೂ ಅಧಿಕ ಹೆಕ್ಟೇರ್ ಕೃಷಿ ಭೂಮಿ ನೀರಿನಲ್ಲಿ ಮುಳುಗಡೆಗೊಂಡಿದೆ. ಕಬ್ಬು, ಬಿಳಿಜೋಳ, ಗೋವಿನಜೋಳ, ಸೋಯಾಬಿನ್ ಹಾಗೂ ಇತರೆ ಬೆಳೆಗಳು ಜಲಾವೃತಗೊಂಡು ಕೊಳೆಯುವ ಸ್ಥಿತಿಗೆ ತಲುಪಿದ್ದರ ಪರಿಣಾಮ ರೈತರು ಆತಂಕದಲ್ಲಿದ್ದಾರೆ.
ಚಿಕ್ಕೋಡಿ ತಾಲೂಕಿನ ಮಲಿಕವಾಡ, ಯಾದ್ಯಾನವಾಡಿ, ಸದಲಗಾ, ಕಲ್ಲೋಳ, ಯಡೂರ, ಚೆಂದೂರ, ಇಂಗಳಿ, ಮಾಂಜರಿ, ಅಂಕಲಿ, ಶಮನೇವಾಡಿ, ಜನವಾಡ, ಕಾರದಗಾ, ಭೋಜ, ಹುನ್ನರಗಿ, ಯಮಗರ್ಣಿ, ಭೀವಸಿ ಪ್ರದೇಶದ ವ್ಯಾಪ್ತಿಯಲ್ಲಿ ಬೆಳೆಗಳು
ಮುಳುಗಿವೆ. ಹಿಡಕಲ್, ಮಲಪ್ರಭಾ ಒಳಹರಿವು ಕೂಡ ತಗ್ಗಿದೆ.
ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ತಾಲೂಕಿನಲ್ಲಿ ಘಟಪ್ರಭಾ ನದಿ ಪ್ರವಾಹದಿಂದ ನಂದಗಾಂವ-ಅವರಾದಿ, ಅಕ್ಕಿಮರಡಿ-ಮಿರ್ಜಿ ಹಳೆ ಸೇತುವೆ ಜಲಾವೃತಗೊಂಡಿದ್ದು ಹಲವು ಗ್ರಾಮಗಳ ಸಂಪರ್ಕ ಇನ್ನೂ ಕಡಿತಗೊಂಡಿದೆ. ಹಾವೇರಿ ಜಿಲ್ಲೆಯಲ್ಲಿ ವರದಾ, ತುಂಗಭದ್ರಾ, ಧರ್ಮಾ ಕುಮದ್ವತಿ ನದಿಗಳು ಅಪಾಯದ ಮಟ್ಟದಲ್ಲೇ ಹರಿಯುತ್ತಿದ್ದು, ವರದಾ ನದಿ ತೀರದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ನಾಲವಾರ ವಲಯದ ಭೀಮಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ತೇಲಿ ಬಂದಿದೆ.
ನಾರಾಯಣಪುರ ಜಲಾಶಯದಿಂದ 20 ಕ್ರಸ್ಟ್ ಗೇಟ್ ತೆರದು ಕೃಷ್ಣಾ ನದಿಗೆ 1.65 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದ್ದು, ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಮಳೆ ಕಡಿಮಯಾಗಿದೆ.