Advertisement
ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದಕ್ಕೆ ರಾಜಕೀಯವಾಗಿ ಹಲವು ಕಾರಣ-ಆರೋಪಗಳನ್ನು ತೋರಲಾಗುತ್ತಿದೆಯೇ ವಿನಃ, ವಾಸ್ತವಿಕವಾಗಿ ಇರುವ ಕಾರಣಗಳ ಬಗ್ಗೆ ಎಲ್ಲ ಪಕ್ಷಗಳು ಜಾಣ ಮೌನ ತೋರುತ್ತಿವೆ. ಇದೇ ಸ್ಥಿತಿ ಮುಂದುವರಿದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಾಗಿ, ಮತ್ತೆ ಪಾಲಿಕೆ ತನ್ನ ಆಸ್ತಿಗಳನ್ನು ಒತ್ತೆಯಿಟ್ಟು, ಆಡಳಿತ ನಡೆಸುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
Related Articles
Advertisement
ಅದೇ ರೀತಿ ಅವಳಿನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಗುತ್ತಿಗೆ ಪೌರಕಾರ್ಮಿಕರಿಗೂ ಸರಿಯಾಗಿ ವೇತನ ಹಾಗೂ ವಿವಿಧ ಸೌಲಭ್ಯಗಳ ಹಣ ಪಾವತಿ ಆಗುತ್ತಿಲ್ಲವೆಂದು ಗುತ್ತಿಗೆ ಪೌರಕಾರ್ಮಿಕರು ಮುಷ್ಕರ ನಡೆಸಿಯಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ಪತ್ರೆಯಲ್ಲಿನ ನರ್ಸ್‌ಗಳು ಇತರೆ ಸಿಬ್ಬಂದಿಗೂ ಸಕಾಲಿಕ ವೇತನ ಇಲ್ಲವಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಸಕ್ತ ಆರ್ಥಿಕ ವರ್ಷ ಮುಗಿಯಲು ಇನ್ನೂ ಎರಡು ತಿಂಗಳು ಬಾಕಿ ಇದ್ದು, ಆಸ್ತಿಕರ ಸಂಗ್ರಹದಲ್ಲಿ ಇದುವರೆಗೆ ಶೇ.73 ಸಾಧನೆ ತೋರಲಾಗಿದ್ದು, ಬಾಕಿ ಇರುವ ಶೇ.27 ಆಸ್ತಿಕರ ಸಂಗ್ರಹಿಸಬೇಕಿದೆ.
ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳು ಬಾಡಿಗೆ ಹಾಗೂ ಪಾಲಿಕೆಗೆ ಹಸ್ತಾಂತರಗೊಳ್ಳಬೇಕಾದ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಬಡಾವಣೆಗಳ ಆಸ್ತಿಕರ ಬಾಕಿ ವಿಚಾರ ವಿವಾದಕ್ಕೆ ಸಿಲುಕಿದ್ದು, ಬರುವ ಆದಾಯವೂ ಇಲ್ಲವಾಗಿದೆ. ಜಿಐಎಸ್ ಸಮೀಕ್ಷೆ ಮಾಡಿದರೆ ಯಾವ ಆಸ್ತಿಕರ ಜಾಲದಿಂದ ಹೊರಗುಳಿದಿದೆ ಎಂಬ ಮಾಹಿತಿ ಹಾಗೂ ಹೊಸ ಆಸ್ತಿಗಳು ಕರ ಜಾಲಕ್ಕೆ ತೆಗೆದುಕೊಳ್ಳಲು ನೆರವಾಗಲಿದೆ. ಇದರಿಂದ ಐದಾರು ಕೋಟಿ ರೂ.ಗಳ ಪಾಲಿಕೆಗೆ ಆದಾಯ ಬರಲಿದೆ ಎಂಬ ಅನಿಸಿಕೆ ಇದೆಯಾದರೂ, ಸಮೀಕ್ಷೆ ಪ್ರಕ್ರಿಯೆ ಆಮೆ ವೇಗಕ್ಕೆ ಸವಾಲಾಗುವ ರೀತಿಗೆ ಸಿಲುಕಿದೆ.
ಸಂಕಷ್ಟದ ಮೂಲ ಎಲ್ಲಿ?: ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಪಿಂಚಣಿ ಬಾಕಿ ಬಾರದಿರುವುದು ತನ್ನದೇ ಕೊಡುಗೆ ನೀಡಿದೆ. ಮುಖ್ಯವಾಗಿ ಪಾಲಿಕೆ ಬಜೆಟ್ ಗಾತ್ರಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಕೈಗೊಂಡಿರುವುದು ಸಂಕಷ್ಟಕ್ಕೆ ಪ್ರಬಲ ಕಾರಣ ಎನ್ನಲಾಗುತ್ತಿದೆ. ವಿವಿಧ ಜನಪ್ರತಿನಿಧಿಗಳು ಬಜೆಟ್ ನಲ್ಲಿ ಪ್ರಸ್ತಾಪ ಇಲ್ಲದಿದ್ದರೂ ಕಾಮಗಾರಿಗಳಿಗೆ ಹಾಗೂ ಹಣ ಪಾವತಿಗೆ ಆಯುಕ್ತರ ಮೇಲೆ ಒತ್ತಡ ತಂದ ಪರಿಣಾಮವಾಗಿ ಬಜೆಟ್ ಗಾತ್ರಕ್ಕಿಂತ ಅಂದಾಜು 20-25 ಕೋಟಿ ರೂ.ಗೂ ಅಧಿಕ ವೆಚ್ಚದ ಹೆಚ್ಚುವರಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಬಜೆಟ್ ಗಾತ್ರ ಮೀರಿದ ಕಾಮಗಾರಿಗಳಿಗೆ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಯಾರೊಬ್ಬರು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎನ್ನಲಾಗಿದೆ. ಆಯುಕ್ತರು ಇದಕ್ಕೆ ಆಕ್ಷೇಪ ತೋರಬೇಕಾಗುತ್ತದೆ. ಆದರೆ ಅವರು ಜನಪ್ರತಿನಿಧಿಗಳ ಒತ್ತಡಕ್ಕೆ ಇಲ್ಲವೆನ್ನಲಾಗಿದೆ, ಮುಂದುವರಿಯುತ್ತಿರುವುದೇ ಆರ್ಥಿಕ ಸಂಕಷ್ಟ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.
ಎಸ್‌ಎಫ್ಸಿ ಅನುದಾನದಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಯೋಜನೆ ಸಿದ್ಧಪಡಿಸಿ, ಕಾಮಗಾರಿ ವಿವರ ಪ್ರಕಟಿಸಿದ ನಂತರ, ಮಹಾಪೌರರು ಹಾಗೂ ಪಾಲಿಕೆಯಲ್ಲಿನ ಪಕ್ಷಗಳ ಧುರೀಣರು ಸಭೆ ಸೇರಿ ಎಸ್‌ಎಫ್ಸಿ ಅನುದಾನ ಬೇರೆಯದ್ದಕ್ಕೆ ಬಳಸಿ, ಕಾಮಗಾರಿಗಳನ್ನು ಸಾಮಾನ್ಯ ನಿಧಿಯಡಿ ಕೈಗೊಳ್ಳುವ ತೀರ್ಮಾನ ಕೈಗೊಂಡರೆ, ಆರ್ಥಿಕ ಶಿಸ್ತು ತರುವುದಾದರೂ ಯಾರು ಎಂಬ ಪ್ರಶ್ನೆ ಮೂಡುತ್ತದೆ.
ಪಾಲಿಕೆಯಲ್ಲಿ ಬಜೆಟ್ ಗಾತ್ರಕ್ಕಿಂತ ಹೆಚ್ಚಿನ ಕಾಮಗಾರಿ ಕೈಗೊಳ್ಳುತ್ತಿರಲಿಲ್ಲ. ಅದೇ ರೀತಿ ಆಯಾ ತಿಂಗಳು ಯಾರಿಗೆ ಹಣ ಪಾವತಿಸಬೇಕು, ಎಷ್ಟು ಮಾಡಬೇಕಿದೆ ಎಂಬುದನ್ನು ಪಾಲಿಕೆ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತಿತ್ತು. ಅದೇ ಮಾದರಿಯಲ್ಲಿ ಪಾವತಿ ಆಗುತ್ತಿತ್ತು. ಆದರೀಗ ಆರ್ಥಿಕ ಅಸಮತೋಲನೆಯಿಂದಾಗಿ ಹಲವು ಪಾವತಿಗಳು ವಿಳಂಬಕ್ಕೆ ಸಿಲುಕಿವೆ, ಪಾವತಿ ಬಾಕಿ ಮೊತ್ತ ಬೆಳೆಯುತ್ತಲೇ ಸಾಗಿದೆ.
ದುಸ್ಥಿತಿ ಬಂದೀತು: ಈ ಹಿಂದೆ ಪಾಲಿಕೆ ಆರ್ಥಿಕ ಮುಗ್ಗಟ್ಟು ಕಾರಣದಿಂದ ಕೆಲ ಆಸ್ತಿಗಳನ್ನು ಒತ್ತೆಯಿಟ್ಟು ಆರ್ಥಿಕ ನೆರವು ಪಡೆದಿದ್ದನ್ನು ಆಡಳಿತ ನಡೆಸುವವರು, ಜನಪ್ರತಿನಿಧಿಗಳು ಮುಖ್ಯವಾಗಿ ಆಯುಕ್ತರು ಗಂಭೀರವಾಗಿ ಚಿಂತಿಸಬೇಕಿದೆ ಎಂಬುದು ಪಾಲಿಕೆಯ ಕೆಲ ಸದಸ್ಯರ ಸದಾಶಯ.
ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಪಿಂಚಣಿ ಬಾಕಿ ತನ್ನದೇ ಕೊಡುಗೆ ನೀಡಿದೆ. ಅಲ್ಲದೆ, ಪಾಲಿಕೆ ಬಜೆಟ್ ಗಾತ್ರಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಕೈಗೊಂಡಿದ್ದು ಸಂಕಷ್ಟಕ್ಕೆ ಪ್ರಬಲ ಕಾರಣ ಎನ್ನಲಾಗುತ್ತಿದೆ. ಬಜೆಟ್ ಗಾತ್ರಕ್ಕಿಂತ ಅಂದಾಜು 20-25 ಕೋಟಿ ರೂ.ಗಿಂತ ಅಧಿಕ ವೆಚ್ಚದ ಹೆಚ್ಚುವರಿ ಕಾಮಗಾರಿ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಅಮರೇಗೌಡ ಗೋನವಾರ