ಹುಬ್ಬಳ್ಳಿ: ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ನಿಗದಿತ ದರದಲ್ಲಿ ಚಿಕನ್ ಮತ್ತು ಮಟನ್ ಮಾರಾಟ ಮಾಡಬೇಕು ಎಂದು ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ ಹೇಳಿದರು. ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆದ ಮಾಂಸ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು.
ಲಾಕ್‌ಡೌನ್ ಪೂರ್ವದಲ್ಲಿನ ದರದಲ್ಲೇ ಮಾಂಸ ಮಾರಾಟ ಮಾಡಬೇಕು. ಯಾರು ಮನಬಂದಂತೆ ದರ ನಿಗದಿ ಮಾಡಬಾರದು. ಮಟನ್ ಒಂದು ಕೆಜಿ ಗೆ 600 ಹಾಗೂ ಚಿಕನ್ ಒಂದು ಕೆಜಿಗೆ 160 ರಿಂದ 180
ರೂಪಾಯಿಯಂತೆ ಮಾರಾಟ ಮಾಡಬೇಕು. ಪ್ರತಿ ಅಂಗಡಿ ಮುಂದೆ ದರಪಟ್ಟಿ ಹಾಕಬೇಕು. ಅಂಗಡಿಗಳಲ್ಲಿ ಜನಸಂದಣಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹಾರ ನಡೆಸಬೇಕು ಎಂದರು.
ಸರ್ಕಾರ ಚಿಕನ್, ಮಟನ್ ಹಾಗೂ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಕೊರೋನಾ ವೈರಸ್‌ಗೂ ಮಾಂಸ ಸೇವನೆಗೂ ಯಾವುದೇ ಸಂಬಂಧವಿಲ್ಲ. ಮಾಂಸ ಮಾರಾಟಗಾರರು ಸ್ವಚ್ಛತೆ ಕಾಪಾಡಿಕೊಂಡು ವ್ಯವಹಾರ ನಡೆಸಬೇಕು. ಪಾಲಿಕೆಯಿಂದ ಮಾಂಸದ ಅಂಗಡಿಗಳ ಕಸ ಸಂಗ್ರಹಕ್ಕಾಗಿ ವಿಶೇಷ ಕಸ ಸಂಗ್ರಹ ಟಿಪ್ಪರ್‌ಗಳನ್ನು ಕಳುಹಿಸಿಕೊಡಲಾಗುವುದು. ಪಾಲಿಕೆಯಿಂದ ಜಾಗೃತಿ ದಳ ನೇಮಿಸಿ ಅಂಗಡಿಗಳಲ್ಲಿ ದರ ನಿಗದಿ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದಾರೆ ಎಂದು ಪರಿಶೀಲನೆ ನಡೆಸಲಾಗುವುದು.
ಯಾವುದೇ ವ್ಯಾಪಾರಸ್ಥರು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ನಾಗರಿಕರು ಪಾಲಿಕೆ ಸಹಾಯವಾಣಿ ದೂ:0836-2213888 ದೂರು ಸಲ್ಲಿಸಬಹುದು ಎಂದರು. ಪಾಲಿಕೆ ಸಹಾಯಕ ಆಯುಕ್ತ ಅಜೀಜ್ ದೇಸಾಯಿ, ವೈದ್ಯಾಧಿಕಾರಿ ಡಾ| ಪ್ರಭು ಬಿರಾದರ, ಪಶು ವೈದ್ಯಾಧಿಕಾರಿ ಡಾ| ಸಾಲಿಮಠ ಹಾಗೂ ಮಾಂಸ ಮಾರಾಟಗಾರರು ಇದ್ದರು.