Advertisement

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಬಡವರ ಹೊಟ್ಟೆ ತಣಿಸುವ “ಬುತ್ತಿ’

04:58 PM Jun 30, 2023 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಡವರು-ಮಧ್ಯಮ ವರ್ಗದವರಿಗೆ ಮಹತ್ವದ ಆರೋಗ್ಯಧಾಮ ಕಿಮ್ಸ್‌ ನಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವವರ ರೋಗಿಗಳ ಸಂಬಂಧಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಹೊಟ್ಟೆ ತುಂಬಾ ಊಟ ನೀಡುವ “ಬುತ್ತಿಯ ಸೇವೆ’ ಸದ್ದಿಲ್ಲದೆ ಸಾಗಿದೆ.

Advertisement

ಕೇವಲ ಐದು ರೂಪಾಯಿಗೆ ಗುಣಮಟ್ಟದ ಊಟ ನೀಡಿ ಬಡವರ ಹಸಿವು ನೀಗಿಸುವ ಮಹತ್ಕಾರ್ಯವನ್ನು ಸೇವಾ ಭಾರತಿ ಟ್ರಸ್ಟ್‌
ಕಿಮ್ಸ್‌ ಅಂಗಳದಲ್ಲಿ ಕಳೆದ ಆರು ತಿಂಗಳಿನಿಂದ ನಡೆಸಿಕೊಂಡು ಬರುತ್ತಿದೆ.

ಕಿಮ್ಸ್‌ ಆವರಣದಲ್ಲಿ ಇನ್ಫೋಸಿಸ್‌ ಧರ್ಮಶಾಲಾದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಸದ್ಯ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ರಾತ್ರಿ ಊಟದ ವ್ಯವಸ್ಥೆಗೆ ಟ್ರಸ್ಟ್‌ ಮುಂದಾಗಿದೆ. ಸದ್ಯ ದಿನಕ್ಕೆ 100-125 ಜನರಿಗೆ ಊಟ
ನೀಡುತ್ತಿದ್ದು, ಎರಡು ಚಪಾತಿ, ಬಾಜಿ, ಅನ್ನ, ಸಾರು ನೀಡಲಾಗುತ್ತದೆ. ಅದಮ್ಯ ಚೇತನದಿಂದ ಅನ್ನ, ಸಾಂಬಾರು ಬರುತ್ತಿದ್ದು, ಚಪಾತಿ ಬಾಜಿ ಸ್ಥಳದಲ್ಲಿಯೇ ತಯಾರಿಸಲಾಗುತ್ತಿದೆ.

ಮಾಹಿತಿ ಕೊರತೆ: ಕಿಮ್ಸ್‌ನ ಆವರಣದಲ್ಲಿ ಕಡಿಮೆ ದರದಲ್ಲಿ ಊಟದ ವ್ಯವಸ್ಥೆ ಕುರಿತು ಮಾಹಿತಿ ಕೊರತೆ ಇದ್ದು, ಹೀಗಾಗಿ ಬಹಳಷ್ಟು ಜನರಿಗೆ ಗೊತ್ತಾಗುತ್ತಿಲ್ಲ. ಇನ್ನು ಹೆಚ್ಚಿನ ಜನರಿಗೆ ತಿಳಿದರೆ ಇನ್ನಷ್ಟು ಜನರು ಕಡಿಮೆ ದರದಲ್ಲಿ ಊಟ
ಮಾಡಬಹುದಾಗಿದೆ.

ಒಂದು ದಿಕ್ಕಿನಲ್ಲಿ ಇಂದಿರಾ-ಇನ್ನೊಂದು ದಿಕ್ಕಿನಲ್ಲಿ ಬುತ್ತಿ: ಕಿಮ್ಸ್‌ನ ಹಿಂಭಾಗದ ಗೇಟ್‌ ಬಳಿ ಇಂದಿರಾ ಕ್ಯಾಂಟಿನ್‌ ಇದ್ದರೆ, ಕಿಮ್ಸ್‌ ಆವರಣದ ಶವಾಗಾರ ಬಳಿ ಇರುವ ಇನ್ಫೋಸಿಸ್‌ ಧರ್ಮಶಾಲಾ ಆವರಣದಲ್ಲಿ ಬುತ್ತಿ ಇದೆ. ಇಂದಿರಾ ಕ್ಯಾಂಟಿನ್‌ ನಲ್ಲಿ ಉಪಾಹಾರಕ್ಕೆ 5 ರೂ., ಊಟಕ್ಕೆ 10 ರೂ. ಇದ್ದರೆ, ಬುತ್ತಿ ಯೋಜನೆಯಡಿ ಆರಂಭಿಸಿರುವ ಊಟಕ್ಕೆ ಕೇವಲ 5 ರೂ.ಇದೆ.

Advertisement

15 ಸಾವಿರ ಜನರಿಗೆ ಊಟ: ಕಳೆದ ಆರು ತಿಂಗಳಿಂದ ಆರಂಭಗೊಂಡಿರುವ ಸೇವಾ ಭಾರತಿ ಟ್ರಸ್ಟ್‌ನ ಬುತ್ತಿ ಯೋಜನೆಯಡಿ ಪ್ರತಿದಿನ ಸುಮಾರು 100 ರಿಂದ 125 ಜನರು ಊಟ ಮಾಡುತ್ತಿದ್ದು, ಇಲ್ಲಿಯವರೆಗೆ ಸುಮಾರು 14 -15 ಸಾವಿರ ಜನರು ಊಟ ಮಾಡಿದ್ದಾರೆ.ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

ಕಿಮ್ಸ್‌ಗೆ ಆಗಮಿಸುವ ರೋಗಿಗಳ ಸಂಬಂಧಿಕರಿಗೆ ಊಟದ ವ್ಯವಸ್ಥೆ ಮಾಡಬೇಕೆನ್ನುವ ಉದ್ದೇಶದಿಂದ ಸೇವಾ ಭಾರತಿ ಟ್ರಸ್ಟ್‌ ಅಡಿಯಲ್ಲಿ ಬುತ್ತಿ ಯೋಜನೆ ಆರಂಭಿಸಲಾಗಿದ್ದು ಅದಕ್ಕೆ ಅದಮ್ಯ ಚೇತನದಿಂದ ಮಧ್ಯಾಹ್ನ ಅನ್ನ ಸಾಂಬಾರ ನೀಡಲಾಗುತ್ತಿದ್ದು ಅವರ ಸಹಕಾರದೊಂದಿಗೆ ಬಡವರಿಗೆ ಕಡಿಮೆ ದರದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಸದ್ಯ ದಾನಿಗಳು ಸೇರಿದಂತೆ ಹಲವಾರು ಜನರ ಶ್ರಮದಿಂದ ಬುತ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತದೆ.ರಾತ್ರಿ ಊಟ ನೀಡುವ ಕುರಿತು ಸಹ ಚಿಂತನೆ ಇದೆ.
ವೀರಣ್ಣ ಸಜ್ಜನರ, ಬುತ್ತಿ ಯೋಜನೆ ಅಧ್ಯಕ್ಷ

ಕಡಿಮೆ ದರಲ್ಲಿ ಊಟ ನೀಡುತ್ತಿದ್ದಾರೆನ್ನುವ ಮಾಹಿತಿ ಇಲ್ಲ. ಆದರೆ ಯಾರೋ ಒಬ್ಬರು ಅಲ್ಲಿ ಹೋಗಿ ಕಡಿಮೆ ದರದಲ್ಲಿ ಊಟ ನೀಡುತ್ತಾರೆ, ಊಟ ಚೆನ್ನಾಗಿರುತ್ತದೆ ಎಂದು ಹೇಳಿದಾಗ ಅದನ್ನು ಹುಡುಕಿಕೊಂಡು ಹೋದಾಗ ಅದರ ಕುರಿತು ಮಾಹಿತಿ ತಿಳಿಯಿತು. ಕಿಮ್ಸ್‌ಗೆ ಆಗಮಿಸುವ ನೂರಾರು ಜನರಿಗೆ ಈ ಕುರಿತು ತಿಳಿಯುವಂತೆ ಬೋರ್ಡ್‌ ಹಾಕಬೇಕು. ಇದರಿಂದ ಬಡವರಿಗೆ ಸಹಾಯವಾಗಲಿದೆ.
ನಾಗಪ್ಪ ಎಚ್‌. ರೋಗಿಯ ಸಂಬಂಧಿ

*ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next