Advertisement

“ಹುಬ್ಬಳ್ಳಿ ಜಯದೇವ ಆಸ್ಪತ್ರೆ’: ಜ.12ಕ್ಕೆ ಪ್ರಧಾನಿಯಿಂದ ಶಂಕುಸ್ಥಾಪನೆ ಸಾಧ್ಯತೆ

07:42 PM Dec 24, 2022 | Team Udayavani |

ಬೆಂಗಳೂರು: ಕಿತ್ತೂರು ಕರ್ನಾಟಕ ಭಾಗದ ಬಹುನಿರೀಕ್ಷಿತ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು 2023ರ ಜ.12ಕ್ಕೆ ಶಂಕು ಸ್ಥಾಪನೆ ನೆರವೇರಿಸುವ ಸಾಧ್ಯತೆಯಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನಸಿನ ಕೂಸಾಗಿರುವ ಹುಬ್ಬಳ್ಳಿ ಜಯದೇವ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿದ್ದು 2022-23ರ ರಾಜ್ಯ ಬಜೆಟ್‌ನಲ್ಲಿ 250 ಕೋಟಿ ರೂ. ಘೋಷಿಸಲಾಗಿತ್ತು.

ಈ ಹಿಂದೆಯೇ ಹಲವು ಬಾರಿ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆಗೆ ಸರ್ಕಾರ ಮುಂದಾಗಿದ್ದರೂ, ಕೆಲ ಆಡಳಿತಾತ್ಮಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ಅಂತಿಮವಾಗಿ ಪ್ರಧಾನಿ ಮೋದಿ ಜನವರಿಯಲ್ಲಿ ರಾಜ್ಯಕ್ಕೆ ಆಗಮಿಸಿ ಹಲವು ಯೋಜನೆಗಳಿಗೆ ಚಾಲನೆ ನೀಡಲು ಸಮಯ ನಿಗದಿಪಡಿಸಲಾಗಿದ್ದು, ಅವುಗಳ ಪೈಕಿ ಹುಬ್ಬಳ್ಳಿ ಜಯದೇವ ಆಸ್ಪತ್ರೆ ಶಂಕುಸ್ಥಾಪನಾ ಕಾರ್ಯಕ್ರಮವೂ ಸೇರಿದೆ ಎಂದು ಜಯದೇವ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ಪ್ರಾರಂಭವಾಗುವುದರಿಂದ ಉತ್ತರ ಕರ್ನಾಟಕದ ಲಕ್ಷಾಂತರ ಮಂದಿಗೆ ನೆರವಾಗಲಿದೆ. ಹೃದ್ರೋಗ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದ ತಜ್ಞ ವೈದ್ಯರು, ಸುಸಜ್ಜಿತ ಸೌಲಭ್ಯಗಳು ಇರಲಿವೆ ಎಂದು ಹೇಳಿದ್ದಾರೆ.

435 ಸುಸಜ್ಜಿತ ಬೆಡ್‌ ವ್ಯವಸ್ಥೆ:
ಕರ್ನಾಟಕದಲ್ಲಿ ಪ್ರತಿ ವರ್ಷ ಅಂದಾಜು 25 ಸಾವಿರಕ್ಕೂ ಅಧಿಕ ಹೃದ್ರೋಗಿಗಳು ಚಿಕಿತ್ಸೆ ಅರಸಿ ಬೆಂಗಳೂರಿನ ಜಯದೇವ ಹಾಗೂ ಖಾಸಗಿ ಹೃದ್ರೋಗ ಆಸ್ಪತ್ರೆಗಳ ಕದ ತಟ್ಟುತ್ತಿದ್ದಾರೆ. ಹೃದಯ ಸಂಬಂಧಿ ಕಾ​ಯಿಲೆ ಯಿಂದ ಬಳಲುತ್ತಿರುವ ಉತ್ತರ ಕರ್ನಾಟಕ ಭಾಗದ ಬಡವರು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಿ ಬರುವುದೇ ದೊಡ್ಡ ಸಮಸ್ಯೆಯಾಗಿತ್ತು. ಹೀಗಾಗಿ, ಹುಬ್ಬಳ್ಳಿಯಲ್ಲಿ ಒಂಬತ್ತೂವರೆ ಎಕರೆ ವಿಶಾಲವಾದ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 435 ಬೆಡ್‌ ವ್ಯವಸ್ಥೆ, 100 ಐಸಿಯು, ಸಿ.ಟಿ. ಹಾಗೂ ಎಂಆರ್‌ಐ ಸ್ಕ್ಯಾನ್ ಸೌಲಭ್ಯ, ನ್ಯೂಕ್ಲಿಯರ್‌ ಕಾರ್ಡಿಯಾಲಜಿ ಸೇವೆ, ಪ್ರಯೋಗಾಲಯ, ಸಾಮಾನ್ಯ ವಾರ್ಡ್‌ಗಳು, ವಿಶೇಷ ವಾರ್ಡ್‌ಗಳು, ಸಾಮಾನ್ಯ ಹೊರರೋಗಿ ವಿಭಾಗ ಸೇರಿ ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿರುವ ಎಲ್ಲ ಸುಸಜ್ಜಿತ ವ್ಯವಸ್ಥೆಗಳೂ ಲಭ್ಯವಿರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next