Advertisement

ಸ್ಮಾರ್ಟ್‌ಸಿಟಿಗೆ ತಕ್ಕಂತೆ ಅವಳಿನಗರ ವಿಭಿನ್ನ ಅಭಿವೃದ್ಧಿ ಅಗತ್ಯ

10:38 AM Jan 31, 2019 | Team Udayavani |

ಹುಬ್ಬಳ್ಳಿ: ಅವಳಿನಗರವು ಸ್ಮಾರ್ಟ್‌ ಸಿಟಿ ಆಗುತ್ತಿದ್ದು, ಅದಕ್ಕೆ ತಕ್ಕಂತೆ ವಿಭಿನ್ನವಾಗಿ ಅಭಿವೃದ್ಧಿ ಹೊಂದಬೇಕಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು. ಮಹಾತ್ಮಾ ಗಾಂಧಿ ಉದ್ಯಾನವನ ಆವರಣದಲ್ಲಿ ಹು-ಧಾ ಮಹಾನಗರ ಪಾಲಿಕೆ, ಕುಂಚಬ್ರಹ್ಮ ಡಾ| ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಡಾ| ಎಂ.ವಿ. ಮಿಣಜಗಿ ಅವರ 118ನೇ ಜನ್ಮದಿನೋತ್ಸವ ಅಂಗವಾಗಿ ಡಾ| ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿ ಪುನಾರಂಭ ಹಾಗೂ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಹು-ಧಾ ಅಭಿವೃದ್ಧಿ ಹೊಂದುತ್ತಿದೆ. ದೇಶದ ವಿವಿಧ ಪ್ರದೇಶಗಳಿಂದ ಹಾಗೂ ವಿದೇಶಗಳಿಂದ ಆಗಮಿಸುವವರ ಸಂಖ್ಯೆಯು ಹೆಚ್ಚುತ್ತಿದೆ. ಕಲಾಸಕ್ತರಿಗೆ ವೇದಿಕೆ ಕಲ್ಪಿಸಲು ಹಾಗೂ ನಗರವು ಸ್ಮಾರ್ಟ್‌ ಆಗುತ್ತಿರುವುದಕ್ಕೆ ತಕ್ಕಂತೆ ಆರ್ಟ್‌ ಗ್ಯಾಲರಿ ಅಭಿವೃದ್ಧಿ ಪಡಿಸಬೇಕಿದೆ. ಇದಕ್ಕೆ ಅವಶ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡರೆ ಸಹಕಾರ ನೀಡಲಾಗುವುದು. ಆರ್ಟ್‌ ಗ್ಯಾಲರಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಶೀಘ್ರವೇ ಕಲಾವಿದರ, ಕಲಾಸಕ್ತರ ಸಭೆ ಕರೆದು ಸಲಹೆ-ಸೂಚನೆ ಪಡೆಯಲಾಗುವುದು ಎಂದರು.

ಮಹಾಪೌರ ಸುಧೀರ ಸರಾಫ ಮಾತನಾಡಿ, ಸ್ಮಾರ್ಟ್‌ ಸಿಟಿ ಯೋಜನೆಯಡಿ ಸದ್ಯ 13.70 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅದರಲ್ಲಿ ಆರ್ಟ್‌ ಗ್ಯಾಲರಿ ಸಹ ಅಭಿವೃದ್ಧಿ ಪಡಿಸಲಾಗುವುದು. ಇಲ್ಲಿನ ಕಲಾವಿದರಿಗೆ ಅವಶ್ಯವಾದ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಡಾ| ಎಂ.ವಿ. ಮಿಣಜಗಿ ಆರ್ಟ್‌ ಗ್ಯಾಲರಿ ಸಮಿತಿ ಉಪಾಧ್ಯಕ್ಷ ಎಂ.ಜೆ. ಬಂಗ್ಲೇವಾಲೆ ಪ್ರಾಸ್ತಾವಿಕ ಮಾತನಾಡಿ, ಮಹಾತ್ಮಾಗಾಂಧಿ ಉದ್ಯಾನವನ ಪ್ರವೇಶದ್ವಾರ ಬಲಭಾಗ ಬಳಿಯ ಜಾಗವು ಖುಲ್ಲಾ ಇದ್ದು, ಅಲ್ಲಿ ಬೃಹತ್‌ ಆರ್ಟ್‌ ಗ್ಯಾಲರಿ ನಿರ್ಮಿಸಿದರೆ ಕಲಾವಿದರು ಈ ಭಾಗದ ಸಂಸ್ಕೃತಿ, ಕಲೆ ಪ್ರದರ್ಶಿಸಲು ಅನುಕೂಲವಾಗುತ್ತದೆ. ನಗರಕ್ಕೆ ಇನ್ನಷ್ಟು ಮೆರಗು ಬರುತ್ತದೆ ಎಂದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ರಾಘವೇಂದ್ರ ರಾಮದುರ್ಗ, ಜಗದೀಶ ಗದಗಿನ, ಜಿ.ಬಿ. ಘಾಟಗೆ, ಮಂಜುನಾಥ ಭಂಡಾರೆ, ರಾಘವೇಂದ್ರ ಪತ್ತಾರ, ಮಂಜುನಾಥ ಕರಿಗಾರ ಮೊದಲಾದವರಿದ್ದರು. ಜಿ.ಆರ್‌. ಮಲ್ಲಾಪೂರ ಸ್ವಾಗತಿಸಿದರು. ಶಂಕರ ಕಡಕುಂಟ್ಲ ನಿರೂಪಿಸಿದರು. ಕಲಾವಿದರು ರಚಿಸಿದ 40ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನಗೊಂಡವು.

Advertisement
Advertisement

Udayavani is now on Telegram. Click here to join our channel and stay updated with the latest news.

Next