Advertisement

ಹಿಡನ್‌ ಚೆಕ್‌ಡ್ಯಾಂ ನಿರ್ಮಿಸಿದ್ರೆ 9 ಟಿಎಂಸಿ ನೀರು!

12:09 PM Mar 15, 2020 | Naveen |

ಹುಬ್ಬಳ್ಳಿ: ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪಾಪಾಗ್ನಿ ನದಿಯಲ್ಲಿ ಕೈಗೊಂಡ ಮಾದರಿಯಲ್ಲಿ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾರಾವಿ ಬಳಿಯ ವೇದಾವತಿ ನದಿ(ಹಗರಿ)ಯಲ್ಲಿ ಹಿಡನ್‌ ಚೆಕ್‌ಡ್ಯಾಂ ನಿರ್ಮಾಣಕ್ಕೆ ರಾಜ್ಯ ಸರಕಾರ ಆಸಕ್ತಿ ತೋರಿದರೆ, ಸುಮಾರು 9 ಟಿಎಂಸಿ ಅಡಿಯಷ್ಟು ನೀರನ್ನು ಲಕ್ಷಾಂತರ ಎಕರೆ ಕೃಷಿ ಹಾಗೂ ಅನೇಕ ಗ್ರಾಮಗಳಿಗೆ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಬಹುದಾಗಿದೆ.

Advertisement

ಕರ್ನಾಟಕ-ಆಂಧ್ರಪ್ರದೇಶ ಗಡಿ ಭಾಗದ ವೇದಾವತಿ ನದಿಯಲ್ಲಿ ವರ್ಷದ ಮೂರು ತಿಂಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತದೆ. ನಂತರವೂ ಕಡಿಮೆ ಪ್ರಮಾಣದ್ದಾದರೂ ನೀರಿರುತ್ತದೆ. ಬಹುತೇಕ ನೀರು ತುಂಗಭದ್ರ ನದಿ ಸೇರಿ ಆಂಧ್ರಪ್ರದೇಶದ ಪಾಲಾಗುತ್ತಿದೆ.

ಹಿಡನ್‌ ಡ್ಯಾಂ ನಿರ್ಮಾಣದಿಂದ ಲಭ್ಯವಿರುವ ನೀರು ಬಳಕೆ ಅಲ್ಲದೆ, ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಸಹಕಾರಿಯಾಗಲಿದೆ ಎಂಬುದು ರೈತ ಮುಖಂಡರ ಅನಿಸಿಕೆ.

ಬಳ್ಳಾರಿ ಜಿಲ್ಲೆಗೆ ತುಂಗಭದ್ರ ಜಲಾಯಶದ ಬಲದಂಡೆ ಕಾಲುವೆ ಮೂಲಕ ನೀರಾವರಿ ವ್ಯವಸ್ಥೆ ಇದ್ದರೂ, ಸಿರಗುಪ್ಪ ಭಾಗ ನಾಲೆಯ ಕೊನೆ ಭಾಗವಾಗುವ ಕಾರಣ ದಾಖಲೆಯಲ್ಲಿ ನೀರಾವರಿ ಪ್ರದೇಶವಾಗಿದ್ದರೂ, ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ವೇದಾವತಿ ನದಿಯನ್ನು ಅವಲಂಬಿಸಿ ಅನೇಕ ರೈತರು ಕೃಷಿ ಮಾಡುತ್ತಿದ್ದು, ಹಿಡನ್‌ ಡ್ಯಾಂ ನಿರ್ಮಾಣದಿಂದ ಅಂತರ್ಜಲ ಹೆಚ್ಚಳದ ಜತೆಗೆ, ನದಿ ಪಾತ್ರದ ರೈತರಿಗೆ ವರ್ಷವಿಡಿ ನೀರು ಲಭ್ಯವಾಗಲಿದೆ. ಇದೇ ನೀರು ಬಳಸಿ ಸುತ್ತಮುತ್ತಲ ಹಳ್ಳಿಗಳಿಗೂ ಪೂರೈಸಬಹುದಾಗಿದೆ.

ಪಾಪಾಗ್ನಿ ಮಾದರಿ: ಆಂಧ್ರದ ಕಡಪಾ ಜಿಲ್ಲೆಯಲ್ಲಿ ಪಾಪಾಗ್ನಿ ನದಿಗೆ ಹಿಡನ್‌ ಡ್ಯಾಂಗಳನ್ನು ನಿರ್ಮಿಸಲಾಗಿದ್ದು, ನದಿಯ ಆಳಕ್ಕೆ ಮೂರು ಇಂಚ್‌ ಗಾತ್ರದ ಐರನ್‌ ಸೀಟ್‌ ಇಳಿಸುವ ಮೂಲಕ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಇದರಿಂದ ನೀರು ಸಂಗ್ರಹವಾಗುತ್ತದೆ ಆದರೂ ಯಾವುದೇ ಪ್ರದೇಶ ಮುಳುಗಡೆ ಅಥವಾ ನೀರಿನ ಹರಿವಿಕೆಗೆ ಅಡ್ಡಿಯಾಗದು.

Advertisement

ಪಾಪಾಗ್ನಿ ನದಿಗೆ ಸುಮಾರು 30 ಕಿ.ಮೀ ವ್ಯಾಪ್ತಿಯಲ್ಲಿ ಐದು ಹಿಡನ್‌ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ. ನದಿಯ ಎರಡು ದಡಗಳ ನಡುವೆ ಸುಮಾರು ಅರ್ಧ ಕಿ.ಮೀ. ಅಂತರವಿದ್ದು, ಹಿಡನ್‌ ಡ್ಯಾಂಗಳ ಮೂಲಕ ಪಾಪಾಗ್ನಿಯಲ್ಲಿ ನೀರು ಇಂಗಿಸುವ, ನಿಲ್ಲಿಸುವ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಆಂಧ್ರಪ್ರದೇಶದ ಜಲಸಂಪನ್ಮೂಲ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್‌ ಪ್ರತಾಪ್‌ ಅವರು ಹಿಡನ್‌ ಡ್ಯಾಂ ಯೋಜನೆ ಸೂತ್ರಧಾರಿಯಾಗಿದ್ದು, ಅಲ್ಲಿನ ಮಾದರಿಯಲ್ಲಿ ಕರ್ನಾಟಕದಲ್ಲಿ ವೇದಾವತಿ ನದಿಗೆ ಹಿಡನ್‌ ಡ್ಯಾಂ ನಿರ್ಮಾಣಕ್ಕೆ ತಾಂತ್ರಿಕ ನೆರವು ನೀಡಲು ಸಿದ್ಧರಾಗಿದ್ದಾರೆ.

9-10 ಹಿಡನ್‌ ಡ್ಯಾಂ ಸಾಧ್ಯ: ಸಿರುಗುಪ್ಪ ತಾಲೂಕಿನ ರಾರಾವಿ ಬಳಿಯ ವೇದಾವತಿ ನದಿ(ಹಗರಿ)ಯ ಎರಡು ದಡಗಳ ನಡುವಿನ ಅಂತರ ಸುಮಾರು ಮುಕ್ಕಾಲು ಕಿ.ಮೀ.ನಿಂದ ಒಂದು ಕಿ.ಮೀ.ವರೆಗೆ ಇದೆ. ನದಿಯಲ್ಲಿ ಸುಮಾರು 20 ಅಡಿ ಆಳದವರೆಗೆ ಮರಳು ಸಂಗ್ರಹವಿದೆ ಎಂದು ಅಂದಾಜಿಸಲಾಗುತ್ತಿದ್ದು, ನದಿಯ ಐದು ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 9-10 ಹಿಡನ್‌ ಡ್ಯಾಂಗಳನ್ನು ನಿರ್ಮಿಸಬಹುದಾಗಿದೆ.

ಪಾಪಾಗ್ನಿ ಮಾದರಿಯಲ್ಲಿ ವೇದಾವತಿ ನದಿಯಲ್ಲಿ ಮೂರು ಇಂಚ್‌ನ ಐರನ್‌ ಸೀಟ್‌ಗಳನ್ನು ಜೆಸಿಬಿ ಮೂಲಕ ಸುಮಾರು 20 ಅಡಿ ಆಳಕ್ಕೆ ಇಳಿಸಬಹುದಾಗಿದೆ. ಇದರಿಂದ ಮರಳಿನಲ್ಲಿ ನೀರು ಶುದ್ಧೀಕರಣಗೊಳ್ಳಲಿದ್ದು, ಅಂದಾಜು ಒಂಭತ್ತು ಟಿಎಂಸಿ ಅಡಿ ನೀರು ಸಂಗ್ರಹಿಸಬಹುದಾಗಿದೆ.

ಹಿಡನ್‌ ಡ್ಯಾಂ ನಿರ್ಮಾಣಕ್ಕೆ ತಲಾ ಅಂದಾಜು 10 ಕೋಟಿ ರೂ.ನಷ್ಟು ವೆಚ್ಚವಾಗಲಿದ್ದು, ರಾಜ್ಯ ಸರಕಾರ ಹಂತ-ಹಂತವಾಗಿ 9-10 ಹಿಡನ್‌ ಡ್ಯಾಂಗಳನ್ನು ನಿರ್ಮಿಸಬಹುದಾಗಿದೆ. ಇದಕ್ಕಾಗಿ ವೇದಾವತಿ ನದಿ ಪ್ರವೇಶದ ಆಂಧ್ರ ಗಡಿಯ ರಾಯಪುರದಿಂದ ತುಂಗಭದ್ರ ನದಿಗೆ ಸೇರ³ಡೆಯಾಗುವ ಸಿರಗುಪ್ಪ ಜಿಲ್ಲೆಯ ಚಿಗರಗಡ್ಡಿವರೆಗಿನ ಸುಮಾರು 93 ಕಿ.ಮೀ. ದೂರದ ಕೇಂದ್ರ ಸರಕಾರದ ರೂಪಿಸಿದ ನಕ್ಷೆ ಅವಶ್ಯವಾಗಿದೆ. ಈ ನಿಟ್ಟನಲ್ಲಿ ರಾಜ್ಯ ಸರಕಾರ ಗಂಭೀರ ಚಿಂತನೆ-ಪ್ರಯತ್ನ ನಡೆಸಬೇಕಾಗಿದೆ.

ವೇದಾವತಿ(ಹಗರಿ) ನದಿಗೆ ಆಂಧ್ರದ ಕಡಪಾ ಜಿಲ್ಲೆಯಲ್ಲಿ ಪಾಪಾಗ್ನಿ ನದಿಗೆ ಕೈಗೊಂಡ ಮಾದರಿಯಲ್ಲಿ ಹಿಡನ್‌ ಚೆಕ್‌ ಡ್ಯಾಂ ನಿರ್ಮಾಣಕ್ಕೆ ರಾಜ್ಯ ಸರಕಾರ ಕಾರ್ಯೋನ್ಮುಖವಾಗಲಿ. ಪಾಪಾಗ್ನಿ ನದಿಗೆ ಕೈಗೊಂಡ ಮಾದರಿ ವೀಕ್ಷಣೆಗೆ ರೈತರು ಹೋಗಿ ನೋಡಿಕೊಂಡು ಬಂದಿದ್ದೇವೆ. ಇಂಜನಿಯರ್‌ ಪ್ರತಾಪ ಅವರನ್ನು ರೈತಸಂಘದಿಂದ ಮೂರು ಬಾರಿ ಆಹ್ವಾನಿಸಿ ಸಂವಾದ ನಡೆಸಿ, ಚರ್ಚಿಸಿದ್ದೇವೆ. ಹಿಡನ್‌ ಚೆಕ್‌ ಡ್ಯಾಂಗಳ ನಿರ್ಮಾಣಕ್ಕೆ ಸರಕಾರ ಮುಂದಾದರೆ ಹಗರಿ ಸುತ್ತಮುತ್ತಲಿನ ಸುಮಾರು ಐದು ಕಿ.ಮೀ.ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಲಿದ್ದು, ಕೃಷಿ-ಕುಡಿಯಲು ನೀರು 365 ದಿನಗಳು ಲಭ್ಯವಾಗಲಿವೆ.
ಆರ್‌.ಮಾಧವರೆಡ್ಡಿ,
ಕಾರ್ಯಾಧ್ಯಕ್ಷ, ರಾಜ್ಯ ರೈತಸಂಘ-ಹಸಿರುಸೇನೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next