ಹುಬ್ಬಳ್ಳಿ: ಸರ್ಕಾರ ಇಲ್ಲಿಯವರೆಗೂ ಅಂಜಲಿ ಅಂಬಿಗೇರ ಕುಟುಂಬಕ್ಕೆ ಯಾವುದೇ ಭರವಸೆಗಳನ್ನು ನೀಡಿಲ್ಲ. ಶೀಘ್ರದಲ್ಲೇ ಅಂಜಲಿ ಕುಟುಂಬಸ್ಥರ ಭವಿಷ್ಯದ ದೃಷ್ಟಿಯಿಂದ ಪರಿಹಾರ ಘೋಷಿಸಬೇಕು ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹಿಸಿದರು.
ಅಂಜಲಿ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿನ ಮನೆಯಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ನೇಹಾ ಹಿರೇಮಠ ಹತ್ಯೆಯ ನೆನಪು ಹಸಿಯಿದ್ದಾಗಲೇ ಮತ್ತೊಂದು ಕೊಲೆಯಾಗಿದೆ ಎಂದರು.
ಈವರೆಗೂ ರಾಜ್ಯ ಸರ್ಕಾರ ಅಂಜಲಿ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿಲ್ಲ. ಎಲ್ಲಾ ಸಮಾಜದವರು ಮುಂದೆ ಬಂದು ನೆರವು ನೀಡುತ್ತಿದ್ದಾರೆ. ಸರ್ಕಾರ ಸೂಕ್ತ ನೆರವನ್ನು ಕುಟುಂಬಕ್ಕೆ ನೀಡಬೇಕು ಎಂದರು.
ಹಾಡಹಗಲೇ ಜನನಿಬಿಡ ಪ್ರದೇಶಕ್ಕೆ ಬಂದು ಕೊಲೆ ಮಾಡುತ್ತಾರೆಂದರೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಎದ್ದು ಕಾಣುತ್ತಿದೆ. ಪೊಲೀಸ್ ಅಧಿಕಾರಿಗಳು ಆರೋಪಿಯೊಂದಿಗೆ ಶಾಮೀಲಾಗಿದ್ದಾರೆ. ತನಿಖೆ ಕೈಗೊಂಡು ಅಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಗಂಗಾಮತಸ್ಥರ ಸಂಘದಿಂದ ಆರ್ಥಿಕ ನೆರವು
ಇದೇ ವೇಳೆ ಅಂಜಲಿ ಅಂಬಿಗೇರ ಕುಟುಂಬದವರಿಗೆ ಆನೇಕಲ್ ಗಂಗಾಮತಸ್ಥರ ಸಂಘದ ವತಿಯಿಂದ 50 ಸಾವಿರ ರೂ. ಹಾಗೂ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ ಬೆಂಗಳೂರ ವತಿಯಿಂದ ರಾಜ್ಯಾಧ್ಯಕ್ಷ ಡಾ. ಬಿ. ಮೌಲಾಲಿ ನೇತೃತ್ವದಲ್ಲಿ 1ಲಕ್ಷ ರೂ. ಆರ್ಥಿಕ ನೆರವು ನೀಡಲಾಯಿತು.