ಹುಬ್ಬಳ್ಳಿ: ಇಲ್ಲಿನ ಅಶೋಕ ನಗರ ಠಾಣೆ ವ್ಯಾಪ್ತಿಯ ಗೋಪನಕೊಪ್ಪದಲ್ಲಿ ಶುಕ್ರವಾರ (ಅ.11) ರಾತ್ರಿ ಓರ್ವನನ್ನು ಭೀಕರ ಕೊಲೆ ಮಾಡಿದ್ದ 6-7 ಜನರ ತಂಡದಲ್ಲಿನ ಇಬ್ಬರ ಬೆಳಗ್ಗೆ ಕಾಲಿಗೆ ಗುಂಡು ಹೊಡೆದು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆರೋಪಿಗಳಾದ ಸುದೀಪ ರಾಯಾಪುರ, ಕಿರಣ ಜಟ್ಟಪ್ಪನವರ ಎಂಬವರನ್ನು ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಇದೇ ವೇಳೆ ಇಬ್ಬರು ಪಿಎಸ್‌ಐ ಸೇರಿದಂತೆ ಆರು ಪೊಲೀಸರು ಗಾಯಗೊಂಡಿದ್ದು, ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಧಿತರು ಸೇರಿದಂತೆ 6-7 ಜನರ ತಂಡವು ಹಳೆ ದ್ವೇಷ ಹಾಗೂ ಹಣಕಾಸಿನ ವಿಚಾರವಾಗಿ ಗೋಪನಕೊಪ್ಪದ ಸಂತೋಷನಗರ ರಸ್ತೆಯಲ್ಲಿ ಶಿವರಾಜ ಕಮ್ಮಾರ (23) ಎಂಬಾತನ ಮೇಲೆ ಶುಕ್ರವಾರ ರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದರು.
ಈ ಘಟನೆಗೆ ಸಂಬಂಧಿಸಿ ಮೂವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಇನ್ನುಳಿದವರ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿ ಹಳೇಹುಬ್ಬಳ್ಳಿಯ ರೈಲ್ವೆ ಕ್ವಾರ್ಟರ್ಸ್ ಬಳಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಪಿಎಸ್‌ಐ ಸಾತನ್ನವರ ಸಿಬ್ಬಂದಿಗಳ ರಕ್ಷಣೆಗಾಗಿ ಗಾಳಿಯಲ್ಲಿ ಮೂರು ಸುತ್ತು ಹಾಗೂ ಆರೋಪಿಗಳಾದ ಸುದೀಪ್ ಮತ್ತು ಕಿರಣ್ ಕಾಲಿಗೆ ಮೂರು ಸುತ್ತು ಗುಂಡು ಹೊಡೆದು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ಶಿವರಾಜನ ಕುಟುಂಬಸ್ಥರು ಸುದೀಪ್ ರಾಯಾಪುರ, ಕಿರಣ ಜಟ್ಟಪ್ಪನವರ, ಕಾರ್ತಿಕ, ಅಭಿಷೇಕ ಜಾಧವ ಮೇಲೆ ದೂರು ಕೊಟ್ಟಿದ್ದಾರೆ. ಪೂರ್ವನಿಯೋಜಿತವಾಗಿ 6-7 ಜನರ ತಂಡವು ಲಾಂಗು, ಮಚ್ಚಿನಿಂದ ತಲೆಗೆ ಐದಾರು ಬಾರಿ ಹಾಗೂ ಮೂವತ್ತಕ್ಕೂ ಹೆಚ್ಚು ಸಲ ದೇಹದ ಎಲ್ಲೆಂದರಲ್ಲಿ 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದಿದ್ದಾರೆ. ಹೆಚ್ಚಿನ ತನಿಖೆ ನಡೆಸಿ, ಆದಷ್ಟು ಬೇಗ ಎಲ್ಲರನ್ನೂ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.