Advertisement

ನಂಬಿಕೆ ದ್ರೋಹ; ರಿಯಲ್‌ ಎಸ್ಟೇಟ್‌ ಡೀಲರ್‌ ದೂರು

03:34 PM Oct 23, 2022 | Team Udayavani |

ಹುಬ್ಬಳ್ಳಿ: ನಗರದ ಉದ್ಯಮಿ ಹಾಗೂ ಇತರರು ಸೇರಿ ಅಂದಾಜು 15 ಕೋಟಿ ರೂ. ಮೊತ್ತದ ಸೈಟ್‌ಗಳನ್ನು ಖರೀದಿಸಿ ಅಪರಾಧಿಕ ನಂಬಿಕೆ ದ್ರೋಹವೆಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಮೂಲದ ರಿಯಲ್‌ ಎಸ್ಟೇಟ್‌ ಡೀಲರ್‌ವೊಬ್ಬರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಕುಸುಗಲ್ಲ ಹದ್ದಿನ 18 ಎಕರೆ ಜಮೀನನ್ನು ಹುಬ್ಬಳ್ಳಿ ಉತ್ತರ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಖರೀದಿಸಿ, 357 ವಿವಿಧ ಅಳತೆಯ ಎನ್‌ಎ ಸೈಟ್‌ಗಳನ್ನಾಗಿ ಪರಿವರ್ತಿಸಿ ಸಂಪೂರ್ಣ ಅಭಿವೃದ್ಧಿಪಡಿಸಿ ಅವುಗಳ ಪೈಕಿ 137 ಸೈಟ್‌ಗಳನ್ನು ಕುಸುಗಲ್ಲದ ಮಹಾದೇವಗೌಡ, ಬಸನಗೌಡ, ಚಂದ್ರಶೇಖರಗೌಡ, ರಾಮನಗೌಡ, ವೀರನಗೌಡ ಹಾಗೂ ಕೆಜಿಎಫ್‌ ತಾಲೂಕು ದೊಡ್ಡವಲಗಮಡಿಯ ಅರುಣಕುಮಾರಗೆ ಮಾರಾಟ ಮಾಡಲಾಗಿತ್ತು.

ಇನ್ನುಳಿದ ಸೈಟ್‌ಗಳನ್ನು ಬೇರೆ ಗ್ರಾಹಕರಿಗೆ ಮಾರಾಟ ಮಾಡುವ ಕುರಿತು ಅರುಣಕುಮಾರ ಹೊರತುಪಡಿಸಿ ಇನ್ನುಳಿದವರು ತಕರಾರು ತೆಗೆದು ಖರೀದಿ ಪ್ರಕ್ರಿಯೆಗೆ ಬಾರದೆ ತೊಂದರೆ ಕೊಟ್ಟಿದ್ದಾರೆ. ನಂತರ ಆರು ಜನರು ಸೇರಿ ಆ.12ರಂದು ಖರೀದಿ ಕರಾರುಪತ್ರದ ರದ್ಧತಿ ಪತ್ರವನ್ನು ಹುಬ್ಬಳ್ಳಿ ಉತ್ತರ ಉಪ ನೋಂದಣಿ ಅಧಿಕಾರಿಗಳ ಕಾರ್ಯಾಲಯದಲ್ಲಿ ಮಾಡಿಕೊಂಡಿದ್ದಾರೆ.

ಬಳಿಕ ನಗರದ ಉದ್ಯಮಿ ದಂಪತಿಗೆ 220 ಸೈಟ್‌ಗಳನ್ನು ಸೆಪ್ಟೆಂಬರ್‌ನಲ್ಲಿ ಖರೀದಿಗೆ ಕೊಟ್ಟಿದ್ದಾರೆ. ಎಂಟು ಜನರು ಸೇರಿ ನಂಬಿಕೆ ದ್ರೋಹವೆಸಗಿ ವಂಚಿಸಿದ್ದಾರೆಂದು ಆರೋಪಿಸಿ ರಿಯಲ್‌ ಎಸ್ಟೇಟ್‌ ಉದ್ಯಮಿ, ಬೆಂಗಳೂರು ಮತ್ತಿಕೆರೆ ನೇತಾಜಿನಗರದ ಕೇಶವ ಕೆ. ದೂರು ಸಲ್ಲಿಸಿದ್ದಾರೆ. ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next