Advertisement

ಬೇಕಿದೆ ಕರ್ನಾಟಕ-ಮಹಾರಾಷ್ಟ್ರ ಪ್ರವಾಹ ನಿರ್ವಹಣಾ ಕಮಿಟಿ

01:43 PM Mar 11, 2020 | Naveen |

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಪ್ರವಾಹ ತಡೆ ನಿಟ್ಟಿನಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಸಚಿವರು, ಅಧಿಕಾರಿಗಳನ್ನೊಳಗೊಂಡ ಪ್ರವಾಹ ನಿರ್ವಹಣೆ ಕಮಿಟಿ ರಚನೆಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ. ಮುಂಗಾರು ಪೂರ್ವದಲ್ಲಿಯೇ ಕಮಿಟಿ ಅಸ್ತಿತ್ವದ ಜತೆಗೆ, ಮಳೆಗಾಲದಲ್ಲಿ ಕೈಗೊಳ್ಳಬಹುದಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ರೂಪುರೇಷೆ ಸಿದ್ಧಪಡಿಸಬೇಕಾಗಿದೆ.

Advertisement

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಪ್ರವಾಹ ನಿರ್ವಹಣೆ ಕಮಿಟಿ ರಚನೆ ಸಹಮತಕ್ಕೆ ಬರಲಾಗಿದ್ದರೂ, ಇದುವರೆಗೂ ಕಮಿಟಿ ಮಾತ್ರ ರಚನೆಯಾಗಿಲ್ಲ. ಪ್ರವಾಹದಿಂದ ಹೆಚ್ಚು ನಷ್ಟ ಅನುಭವಿಸುವವರೇ ನಾವಾಗಿರುವುದರಿಂದ, ರಾಜ್ಯ ಸರಕಾರ ಕಮಿಟಿ ರಚನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. 2002ರ ರಾಷ್ಟ್ರೀಯ ಜಲನೀತಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಹ ನಿಯಂತ್ರಣ ಹಾಗೂ ನಿರ್ವಹಣೆ ಮಾಸ್ಟರ್‌ ಪ್ಲಾನ್‌ ಅತ್ಯವಶ್ಯ ಎಂದು ಸೂಚಿಸಲಾಗಿದೆ.

ಪ್ರವಾಹ ನಿಯಂತ್ರಣ ಹಾಗೂ ನಿರ್ವಹಣೆ ಕಮಿಟಿ ರಚನೆಗೆ ಕರ್ನಾಟಕ-ಮಹಾರಾಷ್ಟ್ರ ಒಪ್ಪಿದ್ದರೂ, ಇದುವರೆಗೂ ಕಮಿಟಿ ಅಸ್ತಿತ್ವಕ್ಕೆ ಬಂದಿಲ್ಲ. ಜೂನ್‌ಗೆ ಮುಂಗಾರು ಆರಂಭವಾಗಲಿದ್ದು, ಇದಕ್ಕೂ ಸಾಕಷ್ಟು ಪೂರ್ವದಲ್ಲಿಯೇ ಕಮಿಟಿ ರಚನೆಗೊಂಡು, ಮುಂಜಾಗ್ರತಾ ಕ್ರಮಗಳಿಗೆ ತನ್ನದೇ ಯೋಜನೆ ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ಹೊಣೆಗಾರಿಕೆ ನಿಭಾಯಿಸಬೇಕಾಗಿದೆ.

ದೇಶದಲ್ಲಿ 1955ರಿಂದ 2019ರವರೆಗೆ ಸುಮಾರು 12 ತೀವ್ರ ಸ್ವರೂಪದ ಪ್ರವಾಹ ಸ್ಥಿತಿ ಕಂಡು ಬಂದಿದ್ದು, ಇದರಲ್ಲಿ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಅನೇಕ ಸಾವು-ನೋವು, ಆಸ್ತಿ ನಷ್ಟ ಸಂಭವಿಸಿದೆ. 2004-05, 2009 ಹಾಗೂ 2019ರಲ್ಲಿ ಸಂಭವಿಸಿದ ಪ್ರವಾಹ ಎರಡು ರಾಜ್ಯಗಳಲ್ಲಿ ಹೆಚ್ಚಿನ ಹಾನಿ ಸೃಷ್ಟಿಸಿದ್ದವು. ಭವಿಷ್ಯದಲ್ಲಿ ಇಂತಹದ್ದೇ ಪ್ರವಾಹದಿಂದ ಆಗಬಹುದಾದ ನಷ್ಟ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳು ಅವಶ್ಯವಾಗಿದೆ.

ಕಮಿಟಿ ರಚನೆಗೆ ಒತ್ತು ನೀಡಲಿ: ಉತ್ತರ ಕರ್ನಾಟಕದ ಪ್ರಮುಖ ನದಿಗಳಾದ ಕೃಷ್ಣಾ, ಘಟಪ್ರಭಾ, ಭೀಮಾ ಇನ್ನಿತರ ನದಿಗಳಲ್ಲಿ ಪ್ರವಾಹ ತಡೆಯುವ ನಿಟ್ಟಿನಲ್ಲಿ ಪ್ರವಾಹ ನಿರ್ವಹಣೆ ಕಮಿಟಿ ರಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಮಹಾರಾಷ್ಟ್ರದ ಹಿಂದಿನ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌ ಚರ್ಚಿಸಿದ್ದರು.

Advertisement

ಕಮಿಟಿಯಲ್ಲಿ ಕರ್ನಾಟಕದ ಜಲಸಂಪನ್ಮೂಲ ಸಚಿವರು ಸೇರಿದಂತೆ ಇಬ್ಬರು ಸಚಿವರು, ಜತೆಗೆ ಯಕೆಪಿ ಹಾಗೂ ಕೆಎನ್‌ಎನ್‌ಎಲ್‌ ಮುಖ್ಯ ಇಂಜನೀಯರ್‌ಗಳು. ಮಹಾರಾಷ್ಟ್ರದಿಂದಲೂ ಇಬ್ಬರು ಸಚಿವರು, ಪುಣೆ ನೀರಾವರಿ ಅಭಿವೃದ್ದಿ ನಿಗಮದ ಮುಖ್ಯ ಇಂಜನೀಯರ್‌ ಸೇರಿದಂತೆ ಜಲಸಂಪನ್ಮೂಲ ಅಧಿಕಾರಿಗಳು ಇರಲಿದ್ದಾರೆ. ಕಮಿಟಿ ಮಹಾರಾಷ್ಟ್ರದಲ್ಲಿನ ಕೋಯ್ನಾ, ವಾರ್ಣಾ, ಕರ್ನಾಟಕದ ಆಲಮಟ್ಟಿ, ಘಟಪ್ರಭಾ ಜಲಾಶಯಗಳ ನೀರು ಸಂಗ್ರಹ, ಮಳೆಗಾಲ ಸಂದರ್ಭದಲ್ಲಿ ಹೆಚ್ಚಿನ ಮಳೆಯಿಂದ ಉಂಟಾಗಬಹುದಾದ ಪ್ರವಾಹ ತಡೆಗೆ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳು, ಜಲಾಶಯಗಳಿಂದ ನೀರು ಹೊರ ಹಾಕಬೇಕಾದರೆ ಸೂಕ್ತ ಸಮಯದ ಮಾಹಿತಿ ವಿನಿಮಯ ಇನ್ನಿತರ ವಿಷಯಗಳ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ.

ನಮ್ಮವರೇಕೆ ಹೋಗುತ್ತಿಲ್ಲ?:ಮಹಾರಾಷ್ಟ್ರದ ಜಲಾಶಯಗಳಿಂದ ಹೊರಬಿಡುವ ನೀರಿನಿಂದ ನಮ್ಮಲ್ಲಿ ಪ್ರವಾಹ ಉಂಟಾಗುತ್ತದೆ. ಆದರೆ, ಮಹಾಷ್ಟ್ರದ ತಂಡ ರಾಜ್ಯಕ್ಕೆ ಆಗಮಿಸಿ ಆಲಮಟ್ಟಿ, ನಾರಾಯಣಪುರ ಜಲಾಶಯ ಪರಿಶೀಲಿಸಿತ್ತು. ಇಲ್ಲಿನ ನೀರು ಸಂಗ್ರಹ ಮಾಹಿತಿ ಪಡೆದಿತ್ತು. ಮಳೆಗಾಲದಲ್ಲಿ ಆಲಮಟ್ಟಿ, ನಾರಾಯಣಪುರ ಜಲಾಶಯಗಳಲ್ಲಿ ನೀರು ಹೆಚ್ಚಿನ ನೀರಿನ ಸಂಗ್ರಹದಿಂದ ತಮ್ಮಲ್ಲಿ ಪ್ರವಾಹ ಉಂಟಾಗುತ್ತದೆ ಎಂಬ ಅನಿಸಿಕೆಯನ್ನು ತಂಡ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ. ಪ್ರವಾಹ ನಿಟ್ಟಿನಲ್ಲಿ ಮಹಾರಾಷ್ಟ್ರದವರು ನಮ್ಮಲ್ಲಿಗೆ ಬಂದು ವೀಕ್ಷಣೆ ಮಾಡುತ್ತಾರೆ. ಪ್ರವಾಹದಿಂದ ಹೆಚ್ಚು ನಷ್ಟ ಅನುಭವಿಸುವ ನಮ್ಮ ಅಧಿಕಾರಿಗಳ ತಂಡವೇಕೆ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿನ ಜಲಾಶಯ ವೀಕ್ಷಣೆ, ಮಾಹಿತಿ ಸಂಗ್ರಹ ಕಾರ್ಯ ಮಾಡುತ್ತಿಲ್ಲ ಎಂಬುದು ಹಲವರ ಪ್ರಶ್ನೆಯಾಗಿದೆ. 2005-06ರಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದಿದ್ದ ಮಹಾರಾಷ್ಟ್ರ ಅಂದಿನ ಕೇಂದ್ರ ಜಲಸಂಪನ್ಮೂಲ ಸಚಿವ ಪ್ರಿಯರಂಜನ್‌ದಾಸ್‌ ಮುನ್ಷಿ ಅವರಿಂದ ಆಲಮಟ್ಟಿ ಜಲಾಶಯದಲ್ಲಿ ಜೂನ್‌ನಿಂದ ಸೆಪ್ಟಂಬರ್‌ವರೆಗೆ 519 ಮೀಟರ್‌ ಬದಲಾಗಿ 509 ಮೀಟರ್‌ಗೆ ನೀರು ಸಂಗ್ರಹಿಸುವಂತೆ ಒತ್ತಡ ತಂದಿತ್ತು. ಕಳೆದ ವರ್ಷವಷ್ಟೇ 518 ಮೀಟರ್‌ಗೆ ನೀರು ನಿಲ್ಲಿಸುವಂತೆಯೂ ಒತ್ತಾಯ ಮಾಡಿತ್ತು. ಇದೀಗ ನಮ್ಮ ಜಲಾಶಯಗಳಿಗೆ ಭೇಟಿ ನೀಡಿದ್ದು, ನೋಡಿದರೆ ಮತ್ತೆ ಯಾವ ದಾಳ ಉರುಳಿಸಲು ಮಹಾರಾಷ್ಟ್ರ ಯೋಚಿಸಿದೆ ಎಂಬ ಅನುಮಾನ ಮೂಡಿಸುತ್ತಿದೆ.

ರಾಜ್ಯ ಸರಕಾರ ಮುಖ್ಯವಾಗಿ ಮೊದಲು ಪ್ರವಾಹ ನಿರ್ವಹಣಾ ಕಮಿಟಿ ರಚನೆಗೆ ಒತ್ತು ನೀಡಬೇಕು, ಜತೆಗೆ ಮಹಾರಾಷ್ಟ್ರಕ್ಕೂ ನಮ್ಮ ತಂಡ ಹೋಗಿ ಅಲ್ಲಿನ ಡ್ಯಾಂಗಳಲ್ಲಿ ನೀರಿನ ಸಂಗ್ರಹ ಇತ್ಯಾದಿ ಮಾಹಿತಿ ಸಂಗ್ರಹ ಕಾರ್ಯವನ್ನು ಮಾಡಬೇಕಾಗಿದೆ.

ತ್ವರಿತ ಕ್ರಮ ಕೈಗೊಳ್ಳಲಿ..
ಪ್ರವಾಹ ನಿರ್ವಹಣೆ ನಿಟ್ಟಿನಲ್ಲಿ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಪ್ರತಿನಿಧಿಗಳನ್ನೊಳಗೊಂಡ ಕಮಿಟಿ ರಚನೆಗೆ ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ. ಪ್ರವಾಹ ಬಂದರೆ ಹೆಚ್ಚು ನಷ್ಟ ಅನುಭವಿಸುವವರು ನಾವು ಆಗಿರುವುದರಿಂದ ರಾಜ್ಯ ಸರಕಾರ ಮಹಾರಾಷ್ಟ್ರದೊಂದಿಗೆ ಚರ್ಚಿಸಿ ಕಮಿಟಿ ರಚನೆಗೆ ಮುಂದಾಗಬೇಕು. ಏಪ್ರಿಲ್‌ ಮುಗಿಯುವುದರೊಳಗೆ ಕಮಿಟಿ ಸಭೆ ಸೇರಿ ಪ್ರವಾಹ ನಿರ್ವಹಣೆ ಕ್ರಮಗಳ ಸ್ಪಷ್ಟ ಚಿತ್ರಣ ರೂಪಿಸಬೇಕಾಗಿದೆ.
ಅಶೋಕ ಚಂದರಗಿ, ಅಧ್ಯಕ್ಷರು,
ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next