Advertisement

ಕೈ ಹಿಡಿದ ಮುಂಗಾರು; ಶೇ.90 ಬಿತ್ತನೆ

02:34 PM Jul 08, 2022 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿ ನಗರ ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲೂಕು ಭಾಗಗಳಲ್ಲಿ ಉತ್ತಮ ಮಳೆಯ ಪರಿಣಾಮ ಶೇ.90ರಷ್ಟು ಬಿತ್ತನೆಯಾಗಿದ್ದು, ರೈತರು ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಮಳೆ ಸತತ ಮುಂದುವರಿದರೆ ಹೆಸರು ಬೆಳೆಗೆ ರೋಗ ಭೀತಿ ಹಲವರನ್ನು ಕಾಡುವಂತಾಗಿದೆ.

Advertisement

ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬಿದ್ದಿದ್ದರಿಂದ ಅನೇಕ ರೈತರು ಮುಂಚಿತವಾಗಿಯೇ ಬಿತ್ತನೆ ತಯಾರಿ ನಡೆಸಿದ್ದರು. ಮುಂಗಾರು ಬಿತ್ತನೆ ನಂತರ ಮಳೆ ಕೊರತೆ ಕಾಡಿತ್ತಾದರೂ ಇದೀಗ ಬಿದ್ದ ಮಳೆ ರೈತರಲ್ಲಿ ಹರ್ಷ ತರಿಸಿದೆ.

ಎಲ್ಲೆಲ್ಲಿ ಎಷ್ಟು ಬಿತ್ತನೆ: ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 29,644 ಹೆಕ್ಟೇರ್‌ ಪ್ರದೇಶ ಇದ್ದು, 27,136 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ನಗರ ತಾಲೂಕು ವ್ಯಾಪ್ತಿಯಲ್ಲಿ 10,914 ಹೆಕ್ಟೇರ್‌ ಪ್ರದೇಶ ಇದ್ದು, 9,490 ಹೆಕ್ಟೇರ್‌ ಬಿತ್ತನೆ ಮಾಡಲಾಗಿದ್ದು, ಒಟ್ಟು 40,558 ಹೆಕ್ಟೇರ್‌ ಪ್ರದೇಶದಲ್ಲಿ 36,626 ಹೆಕ್ಟೇರ್‌ನಲ್ಲಿ ವಿವಿಧ ಬೆಳೆ ಬಿತ್ತನೆ ಮಾಡಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ ಹೆಸರು 9,355, ಶೇಂಗಾ 2,555, ಸೋಯಾಬೀನ್‌ 3,152, ಹತ್ತಿ 7,145, ಉದ್ದು 292 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ.

ನಗರ ತಾಲೂಕು ಪ್ರದೇಶದಲ್ಲಿ ಹೆಸರು 1,795, ಶೇಂಗಾ 825, ಸೋಯಾಬೀನ್‌ 4,129, ಹತ್ತಿ 969, ಉದ್ದು 249 ಹೆಕ್ಟೇರ್‌ ಬಿತ್ತನೆಯಾಗಿದೆ. ಇನ್ನುಳಿದಂತೆ ಇತರೆ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.

Advertisement

ಮಳೆ ಪ್ರಮಾಣ: ಮೇ ಹಾಗೂ ಜೂನ್‌ ಆರಂಭದಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ವಾಡಿಕೆಯಂತೆ ಜೂನ್‌ ತಿಂಗಳಲ್ಲಿ ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 36.4 ಮಿ.ಮೀ. ಮಳೆಯಾಗಿದೆ. ಹುಬ್ಬಳ್ಳಿ ನಗರದಲ್ಲಿ 35.4 ಮಿ.ಮೀ. ಮಳೆಯಾಗಿರುವ ಕುರಿತು ವರದಿಯಾಗಿದೆ.

ಬಿತ್ತನೆ ಬೀಜಕ್ಕಿಲ್ಲ ಕೊರತೆ: ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬೀಜ ರಸಗೊಬ್ಬರ ಕೊರತೆಯಾಗದಂತೆ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹುಬ್ಬಳ್ಳಿ, ಛಬ್ಬಿ, ಶಿರಗುಪ್ಪಿ, ಬಿಡನಾಳ ಗ್ರಾಮದಲ್ಲಿ ಬಿತ್ತನೆ ಬೀಜ ದೊರಕುವಂತೆ ವ್ಯವಸ್ಥೆ ಮಾಡಲಾಗಿತ್ತು. ಶಿರಗುಪ್ಪಿ ರೈತ ಸಂಪರ್ಕ ಕೇಂದ್ರದ ಅಧೀನದಲ್ಲಿ ಕುಸುಗಲ್ಲ, ಛಬ್ಬಿ, ಅಧೀನದಲ್ಲಿನ ಅಂಚಟಗೇರಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ತೆರೆಯುವ ಮೂಲಕ ರೈತರಿಗೆ ಬೇಕಾದಷ್ಟು ಬಿತ್ತನೆ ಬೀಜ-ಗೊಬ್ಬರ ವಿತರಿಸಲಾಗಿದೆ. ರೈತರಿಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ಹುಬ್ಬಳ್ಳಿ ಕೃಷಿ ಇಲಾಖೆ ವ್ಯಾಪ್ತಿಯ ರೈತ ಸಂಪರ್ಕ ಮಾಡಲಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗದ ಕೆಲವೊಂದು ಭಾಗದಲ್ಲಿ ರೈತರು ಬಿತ್ತನೆ ಮಾಡಿರುವ ಹೆಸರು ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಇದರಿಂದ ರೈತರಿಗೆ ತುಂಬಾ ಸಮಸ್ಯೆಯಾಗುವಂತಿದೆ. ಆದ್ದರಿಂದ ಮುಂದೇನು ಎನ್ನುವ ಚಿಂತೆಯಲ್ಲಿ ನಾವಿದ್ದೇವೆ. –ಸುರೇಶ ಬಿ. ಹೆಬಸೂರ ರೈತ

ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರೈತರಿಗೆ ಸಾಕಾಗುವಷ್ಟು ಬಿತ್ತನೆ ಬೀಜಗಳನ್ನು ವಿತರಿಸಲಾಗಿದ್ದು, ಶೇ.90 ಬಿತ್ತನೆ ಕಾರ್ಯ ಮುಕ್ತಾಯಗೊಂಡಿದೆ. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಎಲ್ಲಿಯೂ ಬೀಜ-ಗೊಬ್ಬರ ಕೊರತೆಯಾಗಿಲ್ಲ. ವರ್ಷ ಆರಂಭದಲ್ಲಿಯೇ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ಎಲ್ಲೆಡೆ ವ್ಯಾಪಕ ಮಳೆಯಾಗಿದ್ದು, ಸದ್ಯ ರೈತರಿಗೆ ಯಾವುದೇ ತೊಂದರೆ ಇಲ್ಲ. ಬಿಸಿಲಿನ ವಾತಾವರಣ ಆರಂಭಗೊಂಡಲ್ಲಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ. –ರಾಜಶೇಖರ ಅನಗೌಡರ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ  

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next