ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವವರ ಸುರಕ್ಷತೆಗೆ ಸ್ಥಳೀಯವಾಗಿ ತಯಾರಾಗುತ್ತಿರುವ ಫೇಸ್‌ಶೀಲ್ಡ್ ಗೆ ಹೊರ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿದ್ದು, ಕಾರ್ಮಿಕರ ಹಾಗೂ ಕಚ್ಚಾ ಸಾಮಗ್ರಿಗಳ ಕೊರತೆಯಿಂದ ಬೇಡಿಕೆಗೆ ತಕ್ಕಂತೆ ಪೂರೈಸುವುದು ಕಷ್ಟಸಾಧ್ಯವಾಗುತ್ತಿದೆ.
ಸ್ಥಳೀಯ ಉದ್ಯಮಿ ನಾಗರಾಜ ಎಲಿಗಾರ ತುರ್ತು ಸೇವೆಯಲ್ಲಿರುವ ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸರ ಸುರಕ್ಷತೆ ದೃಷ್ಟಿಯಿಂದ ಕಳೆದ ಏಳೆಂಟು ದಿನಗಳಿಂದ ಫೇಸ್‌ಶೀಲ್ಡ್ ತಯಾರಿಕೆಗೆ ಮುಂದಾಗಿದ್ದಾರೆ.
ಹೊರ ರಾಜ್ಯಗಳಿಂದಲೂ ಬೇಡಿಕೆ: ಇಲ್ಲಿನ ತಯಾರುವ ಫೇಸ್‌ಶೀಲ್ಡ್ ಗೆ ಸಾಕಷ್ಟು ಬೇಡಿಕೆ ಬಂದಿದೆ. ಬೆಂಗಳೂರು ನಗರವೊಂದರಿಂದಲೇ ಹತ್ತು ಸಾವಿರ ಬೇಡಿಕೆಯಿದೆ. ಇನ್ನು ಸೂರತ್, ಕೊಲ್ಕತ್ತಾ, ಓಡಿಶಾ ಸೇರಿದಂತೆ ಇನ್ನಿತರೆಡೆಯಿಂದ ಬೇಡಿಕೆ ಬಂದಿದೆ. ಆದರೆ ಸ್ಥಳಿಯವಾಗಿ ಪೂರೈಸಲು ಹೆಚ್ಚು ಒತ್ತು ನೀಡಲಾಗಿದೆ.. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ಸ್ವಂತ ಊರುಗಳಿಗೆ ತೆರಳಿದ್ದು, ಕೆಲವರು ಮನೆಯಿಂದ ಹೊರ ಬರುತ್ತಿಲ್ಲ. ಹೀಗಾಗಿ ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಂಡು ನಿತ್ಯ ಸುಮಾರು 450 ಫೇಸ್‌ಶೀಲ್ಡ್ ತಯಾರಿಸಲಾಗುತ್ತಿದೆ. ಇನ್ನೂ ಸಿದ್ಧಪಡಿಸಿರುವ ವಸ್ತು ಹೊರರಾಜ್ಯಕ್ಕೆ ಕಳುಹಿಸಲು ಸರಕು ಸಾರಿಗೆ ವ್ಯವಸ್ಥೆ ಇಲ್ಲದಂತಾಗಿದೆ. ಹೀಗಾ ರಾಜ್ಯದ ವಿವಿಧ ಭಾಗಗಳಿಗೆ ಮಾತ್ರ ಇದನ್ನು ಪೂರೈಸಲಾಗುತ್ತಿದೆ. ಅಗತ್ಯ ಕಚ್ಚಾ ಸಾಮಗ್ರಿ, ಕಾರ್ಮಿಕರಿದ್ದರೆ ರಾಜ್ಯದ ಯಾವುದೇ ಭಾಗದಿಂದಲೂ ಬೇಡಿಕೆ ಬಂದರೂ ಪೂರೈಸಲು ಸಿದ್ಧರಿದ್ದೇವೆ.
ಕನಿಷ್ಠ ಬೆಲೆಗೆ ಮಾರಾಟ: ಒಂದು ಫೇಸ್‌ಶೀಲ್ಡ್ ತಯಾರಿಸಲು ಎಲ್ಲಾ ಖರ್ಚುಗಳು ಸೇರಿ 65ರೂ. ಖರ್ಚಾಗುತ್ತಿದ್ದು, ಇದೆ ದರಕ್ಕೆ ಮಾರಾಟ ಮಾಡುತ್ತಿದ್ದೇವೆ. ನಮ್ಮ ಕಂಪೆನಿ ವತಿಯಿಂದ ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳಿಗೆ ತಲಾ 50 ಫೇಸ್ ಶಿಲ್ಡ್ ನೀಡಲಾಗಿದೆ ಎನ್ನುತ್ತಾರೆ ಉದ್ಯಮಿ ನಾಗರಾಜ ಎಲಿಗಾರ.
ಫೇಸ್‌ಶೀಲ್ಡ್‌ಗೆ ಹೆಚ್ಚಿದ ಬೇಡಿಕೆ ಐಐಟಿ, ಕೆಎಲ್‌ಇ ಸಂಸ್ಥೆ ತಾಂತ್ರಿಕ ಮಹಾವಿದ್ಯಾಲಯದಿಂದಲೂ ಫೇಸ್‌ಶೀಲ್ಡ್ ತಯಾರಿಸಲಾಗುತ್ತಿದೆ. ಆದರೆ ಇವರಿಗೆ ಕಚ್ಚಾ ಸಾಮಗ್ರಿ ಕೊರತೆಯಿದೆ. ತಯಾರಿಸಿದ ವಸ್ತುಗಳನ್ನು ಲಾಭದ ಪ್ರತಿಫಲಾಪೇಕ್ಷೆಯಿಲ್ಲದೆ ಅಗತ್ಯ ಇರುವ ಇಲಾಖೆಗಳಿಗೆ ಅತ್ಯಂತ ಕಡಿಮೆ ದರಕ್ಕೆ ವಿತರಿಸುತ್ತಿದ್ದಾರೆ.
ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸುರಕ್ಷತಾ ಸಾಧನ ತಯಾರಿಸಬಹುದಲ್ಲಾ ಎನ್ನುವ ಯೋಚನೆಯಲ್ಲಿದ್ದಾಗ ಪರಿಚಯಸ್ಥರೊಬ್ಬರು ಫೇಸ್‌ಶೀಲ್ಡ್ ವಿನ್ಯಾಸ ತೋರಿಸಿದರು. ಒಂದಿಷ್ಟು ಮಾರ್ಪಾಡು ಮಾಡಿ ನಮ್ಮಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ ಫೇಸ್‌ಶೀಲ್ಡ್ ತಯಾರಿಸಲಾಗುತ್ತಿದೆ. ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ತಗಲುವ ವೆಚ್ಚಕ್ಕೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ.
ನಾಗರಾಜ ಎಲಿಗಾರ,
ಉದ್ಯಮಿ
ಹೇಮರಡ್ಡಿ ಸೈದಾಪುರ