ಹುಬ್ಬಳ್ಳಿ: ಮೋಜಿಗಾಗಿ ಮಾಡಿದ ವಿಡಿಯೋ ಚಾಲಕ ಹಾಗೂ ನಿರ್ವಾಹಕರ ಸೇವೆಗೆ ಕುತ್ತು ತಂದೊಡ್ಡಿದೆ. ಬಸ್ ಮೇಲ್ಛಾವಣಿ ಸೋರದಿದ್ದರೂ ಕೊಡೆ ಹಿಡಿದು ಬಸ್ ಚಾಲನೆ ಮಾಡಿದ ವಾಯವ್ಯ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ಅದನ್ನು ಚಿತ್ರೀಕರಣ ಮಾಡಿದ ನಿರ್ವಾಹಕಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಚಾಲಕ ಹನುಮಂತ ಕಿಲ್ಲೇದಾರ ಹಾಗೂ ನಿರ್ವಾಹಕಿ ಎಚ್.ಅನಿತಾ ಅಮಾನತಾದವರು. ಮೇ 23ರಂದು ಉಪ್ಪಿನಬೆಟಗೇರಿ-ಧಾರವಾಡ ಮಾರ್ಗದಲ್ಲಿ ಬಸ್ ಹೋಗುತ್ತಿರುವಾಗ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಬಸ್‌ನ ವಾಸ್ತವತೆ ಕುರಿತು ವರದಿ ನೀಡಲು ವಿಭಾಗೀಯ ತಾಂತ್ರಿಕ ಶಿಲ್ಪಿಗೆ ಸೂಚಿಸಿದ್ದಾರೆ. ಅಧಿಕಾರಿಗಳು ವಾಹನ ತಪಾಸಣೆ ಮಾಡಿ, ಚಾಲಕ ಕುಳಿತುಕೊಳ್ಳುವ ಸ್ಥಳ ಅಥವಾ ಇತರೆ ಯಾವುದೇ ಭಾಗದಲ್ಲಿ ಮಳೆಯಿಂದ ಬಸ್ ಮೇಲ್ಛಾವಣಿ ಸೋರುತ್ತಿರಲಿಲ್ಲ ಎನ್ನುವ ಪರಿಶೀಲನಾ ವರದಿ ಸಲ್ಲಿಸಿದ್ದರು.
ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ಮನರಂಜನೆಗಾಗಿ ವಿಡಿಯೋ ಮಾಡಿದ್ದಾರೆ. ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರ ಯಾವುದೇ ದೂರು ದಾಖಲು ಮಾಡಿಲ್ಲ. ಇನ್ನೂ ಈ ವಿಡಿಯೋ ಕುರಿತು ಚಾಲನಾ ಸಿಬ್ಬಂದಿಯಿಂದ ಸ್ಪಷ್ಟೀಕರಣ ಪಡೆದಾಗ ತಾವು ಮನರಂಜನೆಗಾಗಿ ಚಿತ್ರೀಕರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ವರದಿ ಆಧಾರದ ಮೇಲೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಿಬ್ಬಂದಿಯ ಕರ್ತವ್ಯ ಲೋಪ ಹಾಗೂ ಸಂಸ್ಥೆ ಘನತೆಗೆ ಧಕ್ಕೆಯಾಗುವಂತಹ ಕೆಲಸವಾಗಿದ್ದರಿಂದ ಚಾಲಕ-ನಿರ್ವಾಹಕಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ವಿಡಿಯೋ ಚಿತ್ರೀಕರಣವನ್ನು ಮೇ 23ರಂದು ಮಾಡಿದ್ದಾರೆ. ನಮ್ಮ ಗಮನಕ್ಕೆ 24ರಂದು ಬಂದಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ವಾಹನ ಪರಿಶೀಲನೆಗೆ ಸೂಚಿಸಿದ್ದೆ. ವಾಹನದಲ್ಲಿ ಅಂತಹ ನ್ಯೂನತೆ ಇರಲಿಲ್ಲ ಎಂದು ವರದಿ ನೀಡಿದ್ದಾರೆ. ಚಾಲಕನನ್ನು ಕರೆಯಿಸಿ ವಿಚಾರಿಸಿದಾಗ ಮನರಂಜನೆಗಾಗಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸಿಬ್ಬಂದಿಯ ಕರ್ತವ್ಯ ಲೋಪ ಹಾಗೂ ಸಂಸ್ಥೆ ಘನತೆಗೆ ಧಕ್ಕೆಯಾಗುವಂತಹ ಕೆಲಸವಾಗಿದ್ದರಿಂದ ಇಬ್ಬರನ್ನು ಅಮಾನತು ಮಾಡಲಾಗಿದೆ.
-ಶಶಿಧರ ಚನ್ನಪ್ಪಗೌಡರ, ವಿಭಾಗೀಯ ನಿಯಂತ್ರಣಾಧಿಕಾರಿ, ಧಾರವಾಡ ವಿಭಾಗ
-ಉದಯವಾಣಿ ಸಮಾಚಾರ