Advertisement

ಕಿತ್ತೂರು ರಾಣಿ ಚೆನ್ನಮ್ಮ ಮೈದಾನ’ಹೆಸರು: ಆಕ್ಷೇಪದ ಅರ್ಜಿ ವಾಪಸ್‌

11:34 PM Mar 20, 2023 | Team Udayavani |

ಬೆಂಗಳೂರು: ಹುಬ್ಬಳ್ಳಿಯ ಈದ್ಗಾ ಮೈದಾನದ ಹೆಸರನ್ನು “ಕಿತ್ತೂರು ರಾಣಿ ಚೆನ್ನಮ್ಮ ಮೈದಾನ’ ಎಂದು ಬದಲಾಯಿಸಲು ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಕೈಗೊಂಡಿದ್ದ ನಿರ್ಣಯವನ್ನು ರದ್ದುಪಡಿಸಲು ಕೋರಿ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆಯಲಾಗಿದೆ.

Advertisement

ಈ ಕುರಿತು ಉಡುಪಿ ಜಿಲ್ಲೆಯ ಹುಸೇನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ| ಪಿ.ಬಿ. ವರಾಲೆ ಮತ್ತು ನ್ಯಾ. ಅಶೋಕ್‌ ಎಸ್‌. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಉಲ್ಲೇಖೀಸಿರುವ ಅಂಶಗಳನ್ನು ಪರಿಶೀಲಿಸಿದ ಬಳಿಕ, ಈದ್ಗಾ ಮೈದಾನದ ಹೆಸರನ್ನು “ಕಿತ್ತೂರು ರಾಣಿ ಚೆನ್ನಮ್ಮ ಮೈದಾನ’ ಎಂದು ಬದಲಾಯಿಸಲು ಪಾಲಿಕೆ 2022ರ ಆ.25ರಂದು ನಿರ್ಣಯ ಕೈಗೊಂಡಿದೆ. ಈ ಸಂಬಂಧ 2023ರ ಫೆ.8ರಂದು ಸಾರ್ವಜನಿಕರ ಆಕ್ಷೇಪಣೆ ಕೋರಲಾಗಿದೆ. ಅದರಂತೆ ಅರ್ಜಿದಾರರು ಸಹ ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ ಈ ಆಕ್ಷೇಪಣೆ ಮೇಲೆ ಪಾಲಿಕೆಯು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅದಕ್ಕೂ ಮುನ್ನವೇ ಈ ಅರ್ಜಿ ಸಲ್ಲಿಸಲಾಗಿದೆ. ಆದ್ದರಿಂದ ಈ ಅರ್ಜಿಯು “ಅಪಕ್ವ’ವಾಗಿದೆ ಎಂದು ಅಭಿಪ್ರಾಯಪಟ್ಟಿತು.

ಒಂದೊಮ್ಮೆ ಪಾಲಿಕೆ ಆಕ್ಷೇಪಣೆಗೆ ವ್ಯತಿರಿಕ್ತವಾಗಿ ನಿರ್ಣಯ ಕೈಗೊಂಡರೆ ಅರ್ಜಿದಾರರು ಆಗ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸಲಹೆ ನೀಡಿತು. ಇದನ್ನು ಒಪ್ಪಿದ ಅರ್ಜಿದಾರರು ಅರ್ಜಿಯನ್ನು ಹಿಂಪಡೆಯುವುದಾಗಿ ಹೇಳಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿತು.

ಹುಬ್ಬಳ್ಳಿಯ ಈದ್ಗಾ ಮೈದಾನವು ಧಾರ್ಮಿಕ ಗುಣಲಕ್ಷಣ ಹೊಂದಿದೆ. ಬಹಳ ಹಿಂದಿನಿಂದಲೂ ರಂಜಾನ್‌ ಮತ್ತು ಬಕ್ರೀದ್‌ ಹಬ್ಬಗಳಂದು ಅರ್ಜಿದಾರರು ಸೇರಿದಂತೆ ಇಸ್ಲಾಂ ಸಮುದಾಯದವರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಇದರಿಂದಲೇ ಈ ಜಾಗವನ್ನು ತೆರೆದ ಪ್ರದೇಶವಾಗಿ ನಿರ್ವಹಣೆ ಮಾಡಲಾಗುತ್ತದೆ. ಆದರೆ, ಈದ್ಗಾ ಮೈದಾನದ ಹೆಸರನ್ನು ಕಿತ್ತೂರು ರಾಣಿ ಚೆನ್ನಮ್ಮ ಮೈದಾನ’ ಎಂದು ಬದಲಾಯಿಸಲು ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ 2022ರ ಆ.25ರಂದು ನಿರ್ಣಯ ಕೈಗೊಂಡಿದೆ. ಆದರೆ, ಸಾರ್ವಜನಿಕ ಪ್ರದೇಶ ಅದರಲ್ಲೂ ಧಾರ್ಮಿಕ ಗುಣಲಕ್ಷಣ ಹೊಂದಿರುವ ಜಾಗದ ಹೆಸರನ್ನು ಹೀಗೆ ಏಕಪಕ್ಷೀಯವಾಗಿ ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಪಾಲಿಕೆಯ ನಿರ್ಣಯ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next