Advertisement

ಹುಬ್ಬಳ್ಳಿ: ಕನ್ನಡದ ಬಗ್ಗೆ ಕೀಳರಿಮೆ ಬೇಡ: ಮಂಜಮ್ಮ ಜೋಗತಿ

05:58 PM Jul 15, 2023 | Team Udayavani |

ಹುಬ್ಬಳ್ಳಿ: ದೇಶ-ವಿದೇಶದಲ್ಲಿ ಇರುವ ಕನ್ನಡಿಗರು ನಮ್ಮ ಭಾಷೆ ಬಗ್ಗೆ ಹೆಮ್ಮೆ ಹೊಂದಿದ್ದಾರೆ. ಆದರೆ, ಇಲ್ಲಿನ ಕನ್ನಡಿಗರು ಕನ್ನಡದ ಕೀಳರಿಮೆ ಹೊಂದಿದ್ದಾರೆ. ಭಾಷೆಯನ್ನು ಗೌರವಿಸಬೇಕು, ಪ್ರೀತಿಸಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಡಾ| ಮಂಜಮ್ಮ ಜೋಗತಿ ಹೇಳಿದರು.

Advertisement

ಶುಕ್ರವಾರ ಸವಾಯಿ ಗಂಧರ್ವ ಸಭಾಭವನದಲ್ಲಿ ಪ್ರೇಮ್‌ಜಿ ಫೌಂಡೇಶನ್‌ ವತಿಯಿಂದ ಹಮ್ಮಿಕೊಂಡಿದ್ದ “ಉಧೋ ಉಧೋ
ಎಲ್ಲವ್ವ’ ದೇವಿಯ ಕುರಿತ ಜನಪದ ಹಾಡುಗಳು ಹಾಗೂ “ಮಾತಾ’ ಏಕವ್ಯಕ್ತಿ ರಂಗ ಪ್ರಯೋಗಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸಬೇಕು. ಸಂಸ್ಕಾರ, ಸಂಸ್ಕೃತಿ ಕನ್ನಡ ಶಾಲೆಗಳಿಂದ ಬರಲು ಸಾಧ್ಯ. ಆಂಗ್ಲಭಾಷೆ ವ್ಯಾಮೋಹಕ್ಕೆ ಒಳಗಾಗಬಾರದು. ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ನೌಕರಿ ಎನ್ನುವ ಮನಸ್ಥಿತಿಯಿಂದ ಹೊರಬರಬೇಕು.
ಕನ್ನಡ ಭಾಷೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದ ಮಕ್ಕಳ ಆಂಗ್ಲ ಸೇರಿದಂತೆ ಇತರೆ ಭಾಷೆಯ ಮೇಲೆ ಹಿಡಿತ ಸಾಧಿಸುತ್ತಾರೆ. ಕನ್ನಡ ಭಾಷೆಯಲ್ಲಿ ಶಿಕ್ಷಣ ಕಲಿಸಿದರೆ ಮಕ್ಕಳು ಸಂಸ್ಕಾರವಂತರಾಗುತ್ತಾರೆ ಎಂದರು.

ಶಿರಹಟ್ಟಿಯ ಭಾವೈಕ್ಯತೆ ಸಂಸ್ಥಾನ ಪೀಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಮನಸ್ಸು ಚಂಚಲವಾದರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಏಕನಿಷ್ಠೆ ಮನಸ್ಸಿನಿಂದ ಮಾತ್ರ ಯಾವುದನ್ನಾದರೂ ಸಾಧಿಸಬಹುದು. ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಬಗ್ಗೆ ಗಮನಿಸಿದಾಗ ಏಕನಿಷ್ಠೆ ಮನಸ್ಸು ಇದಕ್ಕೆಲ್ಲಾ ಕಾರಣವಾಗಿರುತ್ತದೆ. ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಅವರಿಗೆ ಬೆನ್ನು ತಟ್ಟುವ ಕೆಲಸ ಮಾಡುತ್ತಿರುವ ಪ್ರೇಮ್‌ಜಿ ಫೌಂಡೇಷನ್‌ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರಿಗೆ ಆಷಾಢ ಶುಕ್ರವಾರದ ನಿಮಿತ್ತ ಉಡಿ ತುಂಬಲಾಯಿತು. ಪದ್ಮಶ್ರೀ ಪುರಸ್ಕೃತೆ
ಡಾ| ಮಾತಾ ಮಂಜಮ್ಮ ಜೋಗತಿ ಅವರ ಜೀವನಾಧಾರಿತ “ಮಾತಾ’ ಏಕವ್ಯಕ್ತಿ ರಂಗ ಪ್ರಯೋಗವನ್ನು ಅರುಣಕುಮಾರ ಅವರು
ಪ್ರಸ್ತುತ ಪಡಿಸಿದರು. ಡಾ| ಬೇಲೂರು ರಘುನಂದ ಅವರ ರಂಗಪಠ್ಯ, ವಿನ್ಯಾಸ, ನಿರ್ದೇಶನವಿತ್ತು. ಸವಿತಕ್ಕಾ ಅವರು ಹಾಡುಗಳನ್ನು ಪ್ರಸ್ತುತಪಡಿಸಿದರು.

Advertisement

ಪತ್ರಕರ್ತ ಲೋಚನೇಶ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಮೇಯರ್‌ ವೀಣಾ ಬರದ್ವಾಡ, ಗಾಯಕಿ ಸವಿತಕ್ಕಾ, ಡಾ| ರಾಮಚಂದ್ರ ಕಾರಟಗಿ, ಡಾ| ವಿಜಯ ಮಹಾಂತೇಶ ಪೂಜಾರ, ಆನಂದ ಗೋನಾಳ, ರಮೇಶ ಮಹಾದೇವಪ್ಪನವರ, ವಿ.ಎಂ.ಹಿರೇಮಠ, ಪ್ರೇಮಾ ಹೂಗಾರ, ಫೌಂಡೇಶನ್‌ನ ಸಂಸ್ಥಾಪಕ ಗುರುರಾಜ ಹೂಗಾರ, ಎಚ್‌.ಎಸ್‌.ಕಿರಣ ಇನ್ನಿತರರಿದ್ದರು.

ತೃತೀಯಲಿಂಗಿ ಮಕ್ಕಳನ್ನು ಕೀಳಾಗಿ ಕಾಣಬೇಡಿ. ಮನೆಬಿಟ್ಟು ಹೊರಗೆ ಹಾಕಬೇಡಿ. ಅವರಿಗೆ ಮನೆಯಲ್ಲಿಟ್ಟು ವಿದ್ಯಾಭ್ಯಾಸ ಕೊಡಿ. ಅವರು ಉತ್ತಮ ಬದುಕು ಕಟ್ಟಿಕೊಳ್ಳುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ತೃತೀಯ ಲಿಂಗಿಗಳು ಸಾಧನೆ ಮಾಡಿದ್ದಾರೆ. ವಿದ್ಯಾಭ್ಯಾಸದ ಕೊರತೆಯಿಂದ ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಯಲ್ಲಿ ಕೆಲವರು ತೊಡಗುತ್ತಿದ್ದಾರೆ. ಆರಂಭದಲ್ಲಿ ಅವರಿಗೆ ಪ್ರೀತಿ, ಗೌರವ ನೀಡಿದರೆ ಒಳ್ಳೆಯ ಪ್ರಜೆಯಾಗಿ ಬಾಳುತ್ತಾರೆ.
*ಡಾ| ಮಂಜಮ್ಮ ಜೋಗತಿ, ಪದ್ಮಶ್ರೀ ಪುರಸ್ಕೃತೆ

ಜಾನಪದ ಕಲೆಯಲ್ಲಿ ನಮ್ಮ ಸಂಸ್ಕೃತಿ ಅಡಗಿದೆ. ಜನಪದ ಹಾಡುಗಳಲ್ಲಿ ಇರುವ ಒಳ ತಿರುಳನ್ನು ಅರಿತುಕೊಂಡರೆ ನಮ್ಮ ಪೂರ್ವತನ ತಿಳಿಯುತ್ತದೆ. ನಮ್ಮ ಜಾನಪದ ಕಲೆ, ಹಾಡುಗಳಿಗೆ ಮತ್ತೊಂದು ಸಾಟಿಯಾಗಲಾರದು. ಅದರೆ ಅವುಗಳನ್ನು ಆಲಿಸುವವರ ಕೊರತೆಯಿಂದ ಮರೆಯಾಗುತ್ತಿವೆಯೇ ಹೊರತು ತಮ್ಮ ಅಸ್ತಿತ್ವ ಕಳೆದುಕೊಂಡಿಲ್ಲ.
*ವಿಎಸ್‌ವಿ ಪ್ರಸಾದ, ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next