ಹುಬ್ಬಳ್ಳಿ: ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಅಥವಾ ಇಲಾಖೆ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಾನವ ಹಕ್ಕುಗಳ ನ್ಯಾಯಿಕ ಸದಸ್ಯ ನ್ಯಾ| ಕೆ.ಆರ್. ಚಂಗಪ್ಪ ತಿಳಿಸಿದರು.
ಇಲ್ಲಿನ ಸರ್ಕ್ನೂಟ್‌ಹೌಸ್‌ನಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಪ್ರಕರಣ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನವ ಹಕ್ಕುಗಳ ಪ್ರಕರಣಗಳಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರುವಂತಿಲ್ಲ. ಕೆಲ ಜಿಲ್ಲೆಗಳಲ್ಲಿ ಪ್ರಕರಣಗಳನ್ನು ಹಗುರವಾಗಿ ತೆಗೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಆಯೋಗದ ಪ್ರಕರಣಗಳನ್ನು ಕಾಲಮಿತಿಯಲ್ಲಿ ಬಗೆಹರಿಸಿ ನ್ಯಾಯ ಕೊಡುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ನನ್ನ ವ್ಯಾಪ್ತಿಗೆ ಸಂಬಂಧಿಸಿದಂತೆ ಕೇವಲ 30 ದೂರುಗಳು ಮಾತ್ರ ದಾಖಲಾಗಿದ್ದು, ಕೆಲ ದೂರುಗಳಿಗೆ ಅಧಿಕಾರಿಗಳು ಪರಿಹಾರ ನೀಡಿದ್ದಾರೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಹಾಗೂ ಇತರೆ ದೂರುಗಳಲ್ಲಿ ಅಧಿಕಾರಿಗಳ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಯುತ್ತಿದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ದೂರುಗಳ ಸಂಖ್ಯೆ ಕಡಿಮೆಯಿದೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ 13 ದೂರುಗಳು ದಾಖಲಾಗಿವೆ ಎಂದು ವಿವರಿಸಿದರು.
ಹಾಸ್ಟೆಲ್‌ಗಳಲ್ಲಿ ಸಮಸ್ಯೆ: ಜಿಲ್ಲೆಯ ವಿವಿಧ ಇಲಾಖೆ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಪರಿಶೀಲಿಸಿದ್ದೇನೆ. ಅಲ್ಲಿನ ವಿದ್ಯಾರ್ಥಿಗಳು ಕೂಡ ಒಂದಿಷ್ಟು ಸಮಸ್ಯೆಗಳನ್ನು ಹೇಳಿದ್ದಾರೆ. ಜಿಲ್ಲೆಯ ದೇವರಾಜ ಅರಸು ಹಾಸ್ಟೆಲ್‌ವೊಂದರಲ್ಲಿ ಆಹಾರ ಸರಿಯಾಗಿಲ್ಲ ಎಂದು ಲಿಖಿತವಾಗಿ ದೂರು ನೀಡಿದ್ದರು. ಅಲ್ಲಿ ಪರಿಶೀಲಿಸಿದಾಗ ಅಂತಹ ಸಮಸ್ಯೆ ಯಾವುದು ಇಲ್ಲ. ಬಹುತೇಕ ಹಾಸ್ಟೆಲ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸುವಂತೆ ತಿಳಿಸಲಾಗಿದೆ. ಉಣಕಲ್ಲನ ಬುದ್ಧಿಮಾಂದ್ಯ ವಸತಿಗೃಹದಲ್ಲಿ ಆರೈಕೆ ಮಾಡುವ ಸಿಬ್ಬಂದಿ ಸಮಸ್ಯೆ ಕಂಡು ಬಂದಿದ್ದು, ಸುಮಾರು 50 ವಿದ್ಯಾರ್ಥಿಗಳಿಗೆ ತಕ್ಕಂತೆ ಸಿಬ್ಬಂದಿ ನೇಮಿಸಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ತೆರಳಲು ವಾಹನ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಜಿಪಂ ಸಿಇಒ ಡಾ| ಸತೀಶ ಮಾತನಾಡಿ, ಮಾನವ ಹಕ್ಕುಗಳ ಪಾಲನೆ, ಆಯೋಗದ ದೂರುಗಳ ಪರಿಹಾರಕ್ಕೆ ಪೂರಕವಾಗಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧವಿದೆ. ಆಯೋಗ ಸೂಚಿಸುವ ದಿನಾಂಕದಂದು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ದೂರು ಸ್ವೀಕಾರ: ಅಧಿಕಾರಿಗಳ ಸಭೆಯ ನಂತರ ಆಯೋಗದ ಸದಸ್ಯ ಕೆ.ಆರ್. ಚಂಗಪ್ಪ ಸಾರ್ವಜನಿಕರಿಂದ ದೂರು ಸ್ವೀಕರಿಸಿದರು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ಸಲ್ಲಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರು, ಎಸ್ಪಿ ಜಿ. ಸಂಗೀತಾ, ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಕಾರಾಗೃಹ ಜಿಲ್ಲಾ ಅಧೀಕ್ಷಕಿ ಆರ್.ಅನಿತಾ, ಪಾಲಿಕೆ ಅಪರ ಆಯುಕ್ತ ಅಜೀಜ್ ದೇಸಾಯಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.