Advertisement
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಅಂತಿಮ ಮುದ್ರೆ ಬೀಳುವುದು ಬಾಕಿ ಇದೆ.
Related Articles
Advertisement
ನಾಮಪತ್ರಗಳು ಹಿಂಪಡೆದ ನಂತರದಲ್ಲಿಯೇ ಸ್ಪರ್ಧಾ ಕಣದ ಅಂತಿಮ ಹಾಗೂ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಅಲ್ಲಿಗೆ ನಾಮಪತ್ರ ಹಿಂತೆಗೆಕೊಂಡ ನಂತರ ಮತದಾನಕ್ಕೆ ಉಳಿದಿರುವುದು ಕೇವಲ 8 ದಿನ ಮಾತ್ರವಾಗಿದ್ದು, ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದೆ. ಟಿಕೆಟ್ ಗಿಟ್ಟಿಸಿಕೊಳ್ಳುವುದು ಒಂದು ಸಾಹಸವಾದರೆ, ಬಂಡಾಯ ಇಲ್ಲವೆ ಗೆಲುವಿಗೆ ಅಡ್ಡಿಯಾಗಬಹುದಾದ ಸ್ಪರ್ಧಾಳುಗಳನ್ನು ಕಣದಿಂದ ಹಿಂದಕ್ಕೆ ಸರಿಸುವುದು ಮತ್ತೂಂದು ರೀತಿ ಕಸರತ್ತು. ನಾಮಪತ್ರ ಹಿಂಪಡೆದ ನಂತರದಲ್ಲಿ ಕೇವಲ ಎಂಟು ದಿನಗಳಲ್ಲಿಯೇ ನಡೆಯುವ ಮತದಾನಕ್ಕೆ ಗೆಲುವು ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಚಾರ, ಮನವೊಲಿಕೆ ಇನ್ನಿತರೆ ತಂತ್ರಗಾರಿಕೆ ಕೈಗೊಳ್ಳಬೇಕಿದೆ.
ರಾಜಕೀಯ ಪಕ್ಷಗಳಿಗೆ ಸಂದಿಗ್ಧ ಸ್ಥಿತಿ: ಪಾಲಿಕೆ ಚುನಾವಣೆ ಘೋಷಣೆ ಕೆಲವೊಂದು ರಾಜಕೀಯ ಪಕ್ಷಗಳಿಗೆ ಒಂದಿಷ್ಟು ಸಂದಿಗ್ಧ ಸ್ಥಿತಿ ನಿರ್ಮಾಣ ಮಾಡಿದೆ ಎಂದೇ ಹೇಳಬಹುದು. ಅಭ್ಯರ್ಥಿಗಳ ಆಯ್ಕೆ, ಬಂಡಾಯ ಶಮನ, ಇನ್ನೊಂದು ಪಕ್ಷಕ್ಕೆ ಹಾರುವವರನ್ನು ತಡೆಯುವುದು ಇನ್ನಿತರೆ ಕಾರ್ಯಗಳಿಗೆ ರಾಜಕೀಯ ಪಕ್ಷಗಳಿಗೆ ಅವಕಾಶ ನೀಡದ ರೀತಿಯಲ್ಲಿ ಚುನಾವಣೆ ಆಯೋಗ ದಿನಾಂಕ ನಿಗದಿ ಮಾಡಿದೆ. ಪಾಲಿಕೆಯ ಎಲ್ಲ 82 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯ ಮಾಡಬೇಕಿದೆ. ಈಗಾಗಲೇ ಪಾಲಿಕೆ ಸದಸ್ಯರಾಗಿದ್ದವರಿಗೆ ಕೆಲ ವಾರ್ಡ್‌ಗಳು ಮೀಸಲಾತಿ ಕಾರಣದಿಂದ ಕೈ ತಪ್ಪಿವೆ. ಅಲ್ಲಿ ಹೊಸಬರಲ್ಲಿ ಯಾರನ್ನು ಕಣಕ್ಕಿಳಿಸಬೇಕೆಂಬುದು ಒಂದು ಕಡೆಯಾದರೆ, ವಾರ್ಡ್ ಕಳೆದುಕೊಂಡ ಕೆಲವರಿಗೆ ಎಲ್ಲಿ ಅವಕಾಶ ಮಾಡಿ ಕೊಡಬೇಕೆಂಬ ಸವಾಲು ಮತ್ತೂಂದು ಕಡೆಯದ್ದಾಗಿದೆ. ಪಾಲಿಕೆ ಚುನಾವಣೆ ತಯಾರಿ ವಿಚಾರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಹಾಗೂ ಆಮ್‌ಆದ್ಮಿ ಪಕ್ಷ ಪಕ್ಷಗಳು ತಮ್ಮದೇ ತಯಾರಿಯಲ್ಲಿ ತೊಡಗಿವೆ.
ಪಾಲಿಕೆ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ, ಮತದಾರರ ಸಂಪರ್ಕ ವಿಚಾರದಲ್ಲಿ ಬಿಜೆಪಿ ಈಗಾಗಲೇ ಹಲವು ತಯಾರಿ ಕೈಗೊಂಡಿದೆ ಎನ್ನಬಹುದು. ಪಾಲಿಕೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಬೂತ್ ಕಮಿಟಿ, ಪ್ರೇಜ್ ಪ್ರಮುಖರು, ಪಂಚರತ್ನ ಸಮಿತಿ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರದ ಸದಸ್ಯರನ್ನು ನೇಮಕ ಮಾಡಿದೆ. 3-5 ವಾರ್ಡ್‌ಗೆ ಒಂದು ಮಹಾಶಕ್ತಿ ಕೇಂದ್ರ ಇದ್ದು, 4-6 ವಾರ್ಡ್‌ಗೆ ಒಂದು ಶಕ್ತಿ ಕೇಂದ್ರ ಇರುತ್ತದೆ. ಪ್ರತಿ ಬೂತ್‌ಗೆ 12 ಜನರು ಸದಸ್ಯರಿದ್ದು, ಪಂಚರತ್ನ ಸಮಿತಿಯಲ್ಲಿ 5 ಜನ ಇರುತ್ತಾರೆ. ಅದೇ ರೀತಿ 30-60 ಜನರ ಮತದಾರರಿಗೆ ಒಬ್ಬರು ಪೇಜ್ ಪ್ರಮುಖರನ್ನು ನೇಮಿಸಲಾಗಿದೆ.
ಬೂತ್ ಕಮಿಟಿ ಹಾಗೂ ಪಂಚರತ್ನ ಸಮಿತಿ ಪೇಜ್ ಪ್ರಮುಖರಿಗೆ ಕಾರ್ಯಗಳನ್ನು ಸೂಚಿಸುವುದು, ಪರಿಶೀಲನೆ ಕಾರ್ಯ ಮಾಡಲಿದೆ. ಬಿಜೆಪಿಯಲ್ಲಿಯೂ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದು, ಒಂದೊಂದು ವಾರ್ಡ್‌ಗೆ 4-8 ಜನರು ಪೈಪೋಟಿ ಹೆಚ್ಚಿದೆ. ಕಾಂಗ್ರೆಸ್ ಪಕ್ಷ ಪಾಲಿಕೆ ಚುನಾವಣೆಗೆ ಸಿದ್ಧವಿರುವುದಾಗಿ ಹೇಳಿಕೊಂಡಿದ್ದು, ಈಗಾಗಲೇ ಹಲವು ಸಭೆಗಳನ್ನು ಕೈಗೊಂಡಿದೆ. ಆದರೆ ವಾರ್ಡ್ ಮೀಸಲು ವಿಚಾರದಲ್ಲಿ ಚುನಾವಣೆ ವಿಳಂಬವಾಗಬಹುದೆಂಬ ಚಿಂತನೆ ಅನೇಕ ಕಾಂಗ್ರೆಸ್ಸಿಗರದ್ದಾಗಿತ್ತು. ಕಾಂಗ್ರೆಸ್ ಪಕ್ಷ ಈಗಾಗಲೇ 4-5 ಸಭೆಗಳನ್ನು ನಡೆಸಿದೆ. ಕಾಂಗ್ರೆಸ್‌ನಲ್ಲೂ ಟಿಕೆಟ್ ಪೈಪೋಟಿ ಹೆಚ್ಚಿದೆ. ಒಂದು ವಾರ್ಡ್‌ಗೆ 4-8 ಜನರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಜೆಡಿಎಸ್ ಪಕ್ಷ ಪಾಲಿಕೆ ನಿಟ್ಟಿನಲ್ಲಿ ಇತ್ತೀಚೆಗೆ ಸಭೆ ನಡೆಸಿದ್ದು, ಎಲ್ಲ 82 ವಾರ್ಡ್‌ಗಳಿಗೆ ಸ್ಪರ್ಧಿಸುವುದಾಗಿ ಹೇಳಿದೆ. ಜೆಡಿಎಸ್‌ನಲ್ಲಿ ಟಿಕೆಟು ಪೈಪೋಟಿಗಿಂತ ಸ್ಪರ್ಧಿಸುವವರನ್ನು ಪಕ್ಷ ಎದುರು ನೋಡುವ ಸ್ಥಿತಿ ಇದೆ ಎಂದು ಹೇಳಲಾಗುತ್ತಿದೆ. ಆಮ್ ಆದ್ಮಿ ಪಕ್ಷ ಈಗಾಗಲೇ ಚುನಾವಣೆ ತಯಾರಿ ಶುರುವಿಟ್ಟುಕೊಂಡಿದೆ. ವಾರ್ಡ್‌ವಾರು ಕಚೇರಿ ಉದ್ಘಾಟನೆ, ಅಭ್ಯರ್ಥಿಗಳನ್ನು ಗುರುತಿಸುವಿಕೆ, ಸಮಸ್ಯೆಗಳ ಆಲಿಸುವಿಕೆ, ಆಕಾಂಕ್ಷಿಗಳೊಂದಿಗೆ ಸಂವಾದ ಇನ್ನಿತರೆ ಕಾರ್ಯ ಕೈಗೊಂಡಿದೆ.