Advertisement

ನೆರೆ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ನೆರವು

12:31 PM Aug 22, 2019 | Naveen |

ಬಸವರಾಜ ಹೂಗಾರ
ಹುಬ್ಬಳ್ಳಿ:
ಪ್ರವಾಹ, ಮಳೆಯಿಂದ ಮನೆ ಸೋರಿಕೆ ಹಾಗೂ ಕುಸಿತದಿಂದ ಪುಸ್ತಕಗಳು ಹಾಳಾಗಿದ್ದು, ಪುಸ್ತಕ ಕಳೆದುಕೊಂಡ ವಿದ್ಯಾರ್ಥಿಗಳ ನೆರವಿಗೆ ಶಿಕ್ಷಣ ಇಲಾಖೆ ಧಾವಿಸಿದ್ದು, ವಿವಿಧೆಡೆ ಹೆಚ್ಚುವರಿಯಾಗಿ ಉಳಿದ ಪಠ್ಯಪುಸ್ತಕಗಳನ್ನು ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

Advertisement

ಪ್ರವಾಹ ಹಾಗೂ ಮಳೆಯಿಂದ ಮಕ್ಕಳ ಪಠ್ಯಪುಸ್ತಕ, ನೋಟ್ಬುಕ್‌, ಪ್ರೊಜೆಕ್ಟ್ ಮಾದರಿಗಳು ಹಾಗೂ ಲೇಖನಿ ಸಾಮಗ್ರಿಗಳು ಹಾಳಾದ ವಿಷಯವನ್ನರಿತ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ, ಪಠ್ಯಪುಸ್ತಕಗಳನ್ನು ಪೂರೈಸಲಾಗುವುದು ಎಂದು ಸ್ಪಷ್ಪಪಡಿಸಿದೆ. ಹೆಚ್ಚುವರಿ ಪುಸ್ತಕಗಳನ್ನು ಅವಶ್ಯವಿರುವ ನೆರೆಪೀಡಿತ ಪ್ರದೇಶಗಳಿಗೆ ರವಾನಿಸಲು ಕ್ರಮ ಕೈಗೊಂಡಿದೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ವಿಭಾಗದಿಂದ ಹೆಚ್ಚುವರಿ ಪುಸ್ತಕಗಳು ಎಷ್ಟಿವೆ ಎಂಬುದನ್ನು ಮಾಹಿತಿ ಸಂಗ್ರಹಿಸಲಾಗಿದ್ದು, ಡಿಡಿಪಿಐ ಆದೇಶದಂತೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಮಕ್ಕಳಿಗೆ ಈ ಪುಸ್ತಕ ನೀಡಲಾಗುತ್ತದೆ.

ಶಹರ ವಿಭಾಗ: ಹುಬ್ಬಳ್ಳಿ ಶಹರ ವಿಭಾಗದಲ್ಲಿ ಸುಮಾರು 16,935 ಪುಸ್ತಕಗಳು ಹೆಚ್ಚುವರಿಯಾಗಿ ಉಳಿದಿವೆ. ಶಹರ ವಿಭಾಗದ 12 ಕ್ಲಸ್ಟರ್‌ಗಳಲ್ಲಿ ವಿವಿಧ ಶಾಲೆಗಳಿಂದ ಸುಮಾರು 5,490 ವಿವಿಧ ಪುಸ್ತಕಗಳ ಬೇಡಿಕೆ ಇದೆ. ಬೇಡಿಕೆಯಷ್ಟು ಪುಸ್ತಕಗಳನ್ನು ಪೂರೈಸಿ, ಉಳಿದ ಪಠ್ಯಪುಸ್ತಕಗಳನ್ನು ನವಲಗುಂದ ತಾಲೂಕಿನ ಕೆಲ ನೆರೆಪೀಡಿತ ಗ್ರಾಮಗಳಿಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿನ ಶಾಲಾವಾರು ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳನ್ನು ಕಳುಹಿಸಲಾಗುತ್ತದೆ. ಅಲ್ಲಿಗೆ ಕಳುಹಿಸಿದ ನಂತರವೂ ಉಳಿದ ಪಠ್ಯಪುಸ್ತಕಗಳನ್ನು ಪ್ರವಾಹ ಪೀಡಿತ ಪಕ್ಕದ ಜಿಲ್ಲೆಗಳಿಗೆ ಕಳಹಿಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಗ್ರಾಮೀಣ ವಿಭಾಗ: ಹುಬ್ಬಳ್ಳಿ ಗ್ರಾಮೀಣ ತಾಲೂಕು ವಿಭಾಗದಲ್ಲಿ ಸುಮಾರು 11,500 ಕ್ಕೂ ಹೆಚ್ಚು ಪುಸ್ತಕಗಳು ಹೆಚ್ಚುವರಿಯಾಗಿ ಉಳಿದಿವೆ. ಅದರಲ್ಲಿ ಹೆಬಸೂರ ಶಾಲೆಗೆ ಸುಮಾರು 600 ಸೇರಿದಂತೆ ವಿವಿಧ ಗ್ರಾಮಗಳ ಶಾಲೆಗಳ ಬೇಡಿಕೆಗೆ ತಕ್ಕಂತೆ ಪುಸ್ತಕ ಕಳುಹಿಸಲಾಗುವುದು. ಹಂಚಿಕೆ ನಂತರವೂ ಉಳಿಯುವ ಪಠ್ಯಪುಸ್ತಕಗಳನ್ನು ಬೇರೆ ತಾಲೂಕು ಹಾಗೂ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತದೆ.

Advertisement

ಶಹರ ವಿಭಾಗದಲ್ಲಿ ಶಿಕ್ಷಣ ಇಲಾಖೆಯಿಂದ ನಗರದ ಎಲ್ಲ ಶಾಲೆಗಳಿಗೆ ಹಂಚಿಕೆ ಮಾಡಲೆಂದೇ ಸಾವಿರಾರು ಪುಸ್ತಕಗಳು ಬಂದಿವೆ. ಈಗಾಗಲೇ ಶಹರ ಮಟ್ಟದ ಎಲ್ಲ ಶಾಲೆಗಳಿಗೆ ಪುಸ್ತಕ ವಿತರಿಸುವ ಕಾರ್ಯ ಮುಕ್ತಾಯಗೊಂಡಿದ್ದು, ಹೆಚ್ಚುವರಿಯಾಗಿ ಉಳಿದ ಪುಸ್ತಕಗಳನ್ನು ಬೇಡಿಕೆಯಂತೆ ಹಂಚಿಕೆ ಮಾಡಿ, ಉಳಿಯುವ ಪುಸ್ತಕಗಳನ್ನು ನವಲಗುಂದ ತಾಲೂಕು ಹಾಗೂ ನೆರೆ ಜಿಲ್ಲೆಗಳಿಗೆ ರವಾನಿಸಲಾಗುವುದು.
ದ್ಯಾಮಣ್ಣ ಈರಗಾರ,
ಶಹರ ವಿಭಾಗದ ಶಿಕ್ಷಣ ಸಂಯೋಜಕರು.

ಶಿಕ್ಷಣ ಇಲಾಖೆಯಿಂದ ಸೂಚನೆ ಬಂದಿದ್ದು, ಹೆಚ್ಚುವರಿ ಪುಸ್ತಕಗಳನ್ನು ಬೇಡಿಕೆ ಹೊರತು ಪಡಿಸಿ ಉಳಿಯುವ ಪುಸ್ತಕಗಳನ್ನು ನೆರೆ ಪೀಡಿತ ಪ್ರದೇಶಗಳಿಗೆ ರವಾನಿಸಲಾಗುವುದು. ಉಳಿಯುವ ಪುಸ್ತಕಗಳನ್ನು ನೆರೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶ‌ ಮಕ್ಕಳಿಗೆ ರವಾನಿಸಲಾಗುವುದು.
ಎಸ್‌.ಎನ್‌.ಬಶೆಟ್ಟಿಯವರ,
ಗ್ರಾಮೀಣ ಶಿಕ್ಷಣ ಸಂಯೋಜಕ

Advertisement

Udayavani is now on Telegram. Click here to join our channel and stay updated with the latest news.

Next