ಹುಬ್ಬಳ್ಳಿ: ಸ್ಟಾರ್ ಏರ್ ಕಂಪನಿಯ ಹುಬ್ಬಳ್ಳಿ-ಹಿಂಡನ್(ದೆಹಲಿ) ನಡುವೆ ವಿಮಾನಯಾನ ಬುಧವಾರ ಆರಂಭಗೊಂಡಿತು. ಈ ವಿಮಾನ ಹುಬ್ಬಳ್ಳಿ-ಹಿಂಡನ್ ನಡುವೆ ವಾರದಲ್ಲಿ ಮೂರು ದಿನ ಸಂಚರಿಸಲಿದೆ.
ಸ್ಟಾರ್ ಏರ್ ಕಂಪನಿಯು ಸಂಜಯ ಘೋಡಾವತ್ ಸಮೂಹದ ಭಾಗವಾಗಿದ್ದು, ಸಮೂಹದ ಮುಖ್ಯಸ್ಥ ಸಂಜಯ ಘೋಡಾವತ್ ಬುಧವಾರ ನೂತನ ವಿಮಾನಯಾನಕ್ಕೆ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿ-ಹಿಂಡನ್ ವಿಮಾನ ಹುಬ್ಬಳ್ಳಿಯಿಂದ ಬುಧವಾರ, ಗುರುವಾರ ಹಾಗೂ ಶನಿವಾರ ಸಂಚರಿಸುತ್ತದೆ. ಉಡಾನ್ ಯೋಜನೆಯಡಿ ಈ ವಿಮಾನಯಾನ ಕೈಗೊಳ್ಳಲಾಗುತ್ತಿದ್ದು, ಹುಬ್ಬಳ್ಳಿಯಿಂದ ದೆಹಲಿಗೆ 3,999 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ ಎಂದರು.
ಹುಬ್ಬಳ್ಳಿ-ಹಿಂಡನ್ (ದೆಹಲಿ) ವಿಮಾನ ಹುಬ್ಬಳ್ಳಿಯಿಂದ ಮಧ್ಯಾಹ್ನ 1.05ಕ್ಕೆ ಹೊರಡಲಿದ್ದು, 2 ತಾಸು 40 ನಿಮಿಷಗಳ ಅವಧಿಯಲ್ಲಿ ದೆಹಲಿಯನ್ನು ತಲುಪಲಿದೆ. ಸದ್ಯ ವಾರದಲ್ಲಿ ಮೂರು ದಿನ ಸಂಚರಿಸುವ ಈ ವಿಮಾನ ಮುಂದಿನ 2-3 ತಿಂಗಳಲ್ಲಿ ವಾರದ ಏಳು ದಿನಗಳಲ್ಲೂ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು, ತಿರುಪತಿ, ಮುಂಬೈ ಇನ್ನಿತರ ಕಡೆ ಸಂಚಾರ ಕೈಗೊಳ್ಳಲಾಗುತ್ತಿದೆ. ವಿಮಾನಗಳಲ್ಲಿ ಸದ್ಯಕ್ಕೆ ಶೇ.75ರಷ್ಟು ಸೀಟುಗಳು ಭರ್ತಿಯಾಗುತ್ತಿವೆ ಎಂದರು.
ಶೀಘ್ರ ಅಂತಾರಾಷ್ಟ್ರೀಯ ಸೇವೆ: ಸ್ಟಾರ್‌ಏರ್ ಕಂಪನಿ ಸದ್ಯ 50 ಆಸನಗಳ ಅತ್ಯಾಧುನಿಕ ಎರಡು ವಿಮಾನಗ ಳನ್ನು ಹೊಂದಿದೆ. 2020ರ ಜನವರಿಯೊಳಗೆ ಇನ್ನೂ 3 ಹೊಸ ವಿಮಾನ ಖರೀದಿಸಲಾಗುತ್ತಿದ್ದು, ಇನ್ನಷ್ಟು ಸ್ಥಳಗಳಿಗೆ ವಿಮಾನ ಸಂಚಾರ ಕೈಗೊಳ್ಳಲಾಗುವುದು. ಕಂಪನಿ ವಿಮಾನಗಳು ಗಂಟೆಗೆ 800 ಕಿ.ಮೀ. ಕ್ರಮಿ ಸುವ ಸಾಮರ್ಥ್ಯ ಹೊಂದಿವೆ. ಇತರೆ ಯಾವುದೇ ಏರ್‌ಬೋಯಿಂಗ್ ವಿಮಾನಗಳು ಈ ಸಾಮರ್ಥ್ಯ ಹೊಂದಿಲ್ಲ. ಮುಂದಿನ ದಿನಗಳಲ್ಲಿ 160 ಆಸನಗಳ ಏರ್‌ಕ್ರಾಫ್ಟ್ ಖರೀದಿ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭಿಸುವ ಚಿಂತನೆಯಿದೆ.
ಈ ಸೇವೆ ಆರಂಭಿಸಬೇಕಾದರೆ ಕಂಪನಿ 20 ವಿಮಾನಗಳನ್ನು ಹೊಂದಿರಬೇಕು ಎಂಬ ನಿಯಮವಿದೆ. ಮುಂದಿನ ಎರಡು ವರ್ಷಗಳಲ್ಲಿ ಅದನ್ನು ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಿಂದ ಹಿಂಡನ್(ದೆಹಲಿ)ವಿಮಾನಕ್ಕೆ ದೆಹಲಿಗೆ ತೆರಳಲು ಟಿಕೆಟ್ ಕಾಯ್ದಿ ರಿಸಿದ ಮೊದಲ ಗ್ರಾಹಕರಾದ ಹುಬ್ಬಳ್ಳಿಯ ವಿಜಯ ಕುಮಾರ ಡೊಳ್ಳಿ ಹಾಗೂ ವಿಜಯಪುರ ಜಿಲ್ಲೆ ಇಂಡಿಯ ಅನಂತ ಜೈನ್‌ರನ್ನು ಸಂಜಯ ಘೋಡಾವತ್ ಅಭಿನಂದಿಸಿದರು. ಸ್ಟಾರ್ ಏರ್ ಕಂಪನಿ ಅಧಿಕಾರಿಗಳು ಇದ್ದರು.
ಬೆಂಗಳೂರು-ಕಲಬುರಗಿ ಸಂಚಾರಕ್ಕೆ ಮೋದಿ ಚಾಲನೆ: ಇನ್ನು 15 ದಿನಗಳಲ್ಲಿ ಬೆಂಗಳೂರು -ಕಲಬುರಗಿ ಹಾಗೂ ಕಲಬುರಗಿ-ತಿರುಪತಿ ವಿಮಾನಯಾನಕ್ಕೆ ಚಾಲನೆ ನೀಡಲಾಗುವುದು. ಈ ವಿಮಾನಯಾ ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಬೆಳಗಾವಿ-ಇಂದೋರ್ ವಿಮಾನ ಆರಂಭಿಸಲಾಗುತ್ತಿದ್ದು, ಸ್ಲಾಟ್ ದೊರೆತರೆ ಹುಬ್ಬಳ್ಳಿ-ಪುಣೆ ನಡುವೆಯೂ ವಿಮಾನಯಾನ ಆರಂಭಿಸಲಾಗುವುದು ಎಂದು ಸಂಜಯ ಘೋಡಾವತ್ ತಿಳಿಸಿದರು.