Advertisement

14 ರೈಲ್ವೇ ನಿಲ್ದಾಣಗಳಿಗೆ ತೆರಳಲು ಕೋವಿಡ್‌ ಕೇರ್‌ ಸೆಂಟರ್‌ ಸಜ್ಜು

03:33 PM May 08, 2020 | Naveen |

ಹುಬ್ಬಳ್ಳಿ: ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆಂದು ಭಾರತೀಯ ರೈಲ್ವೆ ಸಚಿವಾಲಯ ಸೂಚನೆ ಮೇರೆಗೆ ನೈರುತ್ಯ ರೈಲ್ವೆ ವಲಯ ಒಟ್ಟು 320 ರೈಲ್ವೆ ಬೋಗಿಗಳನ್ನು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಿದ್ದು, ಎಲ್ಲ ಬೋಗಿಗಳು ಆಯಾ ವಲಯ ವ್ಯಾಪ್ತಿಗೆ ತೆರಳಲು ಮುಂದಾಗಿವೆ.

Advertisement

ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆ ಮೇರೆಗೆ ರೂಪಿಸಲಾಗಿದೆ. ರೈಲ್ವೆ ಮಂಡಳಿ ನೈರುತ್ಯ ರೈಲ್ವೆ ವಲಯಕ್ಕೆ 312 ಕೋವಿಡ್‌ ಕೇರ್‌ ಸೆಂಟರ್‌ ರೂಪನೆಗೆ ಸೂಚಿಸಿತ್ತು. ಆದರೆ, 320 ಸೆಂಟರ್‌ ಗಳನ್ನು ತಯಾರಿಸಲಾಗಿದೆ. ರಾಜ್ಯ ಸರಕಾರದ ಬೇಡಿಕೆಯಂತೆ ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಕೆಯಾಗುವ ಸರ್ವ ಸನ್ನದ್ಧ ಬೋಗಿಗಳನ್ನು ನೀಡಲಾಗುತ್ತದೆ. ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ರಾಜ್ಯದ 14 ರೈಲ್ವೆ ನಿಲ್ದಾಣಗಳಿಗೆ ಈ ವಿಶೇಷ ಬೋಗಿಗಳನ್ನು ಕಳುಹಿಸಬಹುದಾಗಿದೆ. ಆಯಾ ಜಿಲ್ಲಾಡಳಿತಗಳು ಇವುಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಯಶವಂತಪುರ, ಹರಿಹರ, ಶಿವಮೊಗ್ಗ ನಗರ, ಹೊಸಪೇಟೆ, ಹಾಸನ, ಅರಸಿಕೆರೆ, ಬಾಗಲಕೋಟೆ, ತಾಳಗುಪ್ಪ, ವಿಜಯಪುರ, ಬೆಳಗಾವಿ, ವಾಸ್ಕೋ-ಡ-ಗಾಮ ನಿಲ್ದಾಣಗಳಲಿ ಈ ವಿಶೇಷ ಬೋಗಿಗಳನ್ನು ನಿಲ್ಲಿಸಬಹುದ್ದಾಗಿದ್ದು, ಆಯಾ ನಿಲ್ದಾಣಗಳಿಗೆ ತೆರಳಲು ಇವು ಸಜ್ಜುಗೊಂಡಿವೆ.

ರಾಜ್ಯ ಸರಕಾರ ಬೇಡಿಕೆ ಮೇರೆಗೆ ಮಾತ್ರ ವಲಯ ವ್ಯಾಪ್ತಿಯ 14 ರೈಲ್ವೆ ನಿಲ್ದಾಣಗಳಲ್ಲಿ ಯಾವುದಕ್ಕೆ ಹೇಳಿದರೆ ಅಲ್ಲಿಗೆ ವಿಶೇಷ ಬೋಗಿಗಳನ್ನು ಕಳುಹಿಸಲಾಗುತ್ತದೆ. ಆಯಾ ಜಿಲ್ಲಾಡಳಿತಗಳು ಸೂಚನೆ ಮೇರೆಗೆ ಇವುಗಳನ್ನು ಕಳುಹಿಸಲಾಗುತ್ತದೆ. ಜತೆಗೆ ಸರಕಾರ ಬೇಡಿಕೆ ಸಲ್ಲಿಸಿದಲ್ಲಿ, ತುರ್ತು ಸ್ಥಿತಿಯಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಜತೆಗೆ ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಯಶವಂತಪುರಕ್ಕೆ ವೈದ್ಯಕೀಯ ಸಿಬ್ಬಂದಿ ನೀಡಲು ನೈರುತ್ಯ ರೈಲ್ವೆ ವಲಯ ಸಿದ್ಧ ಇದ್ದು, ಇನ್ನುಳಿದ ನಿಲ್ದಾಣಗಳಿಗೆ ರಾಜ್ಯ ಸರಕಾರವೇ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿದೆ. ಬೋಗಿಗೆ ಆರ್‌ಪಿಎಫ್ ಭದ್ರತೆ ಒದಗಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ವಲಯ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next