ಹುಬ್ಬಳ್ಳಿ: ಕಾಂಗ್ರೆಸ್ ಹಾಗು ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಘಟನೆ ಮಂಗಳವಾರ ಮಧ್ಯಾಹ್ನ ಇಲ್ಲಿನ ಹೋಟೆಲ್ ಒಂದರ ಆವರಣದಲ್ಲಿ ನಡೆಯಿತು.
ಜೆಡಿಎಸ್ ನಿಂದ ಇಲ್ಲಿನ ಖಾಸಗಿ ಹೊಟೇಲ್ ನಲ್ಲಿ ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರದ ಪ್ರಮುಖರ ಸಭೆ ಹಾಗೂ ಕೋರ್ ಕಮಿಟಿ ಸಭೆ ಕರೆಯಲಾಗಿತ್ತು.
ಕೋರ್ ಕಮಿಟಿ ಮುಗಿಸಿ ಕುಮಾರಸ್ವಾಮಿ ಹೊರ ಬಂದು ಸಭೆಗೆ ಹೋಗುವ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಅನೀಲ ಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಜ್ವಲ್ ರೇವಣ್ಣ ವಿರುದ್ಧ ಘೋಷಣೆ ಕೂಗಲಾಗಿದೆ.
ಈ ವೇಳೆ ತೋಳೆರಿಸಿದ ರೀತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರತ್ತ ಆಗಮಿಸಿದ ಕುಮಾರಸ್ವಾಮಿ ಅವರನ್ನು ಮುಖಂಡರು ತಡೆದಿದ್ದಾರೆ. ನಂತರ ಸಭೆಯಲ್ಲಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹೊರ ಬರುತ್ತಿದ್ದಂತೆಯೇ ತೀವ್ರ ವಾಗ್ವಾದ ನಡೆದಿದೆ.
ಒಂದು ಹಂತದಲ್ಲಿ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ನಡುವೆ ತಳ್ಳಾಟ, ಪರಸ್ಪರ ಹೊಡೆದಾಟ ನಡೆದಿದೆ. ಕಡಿಮೆ ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ತಳ್ಳಿದರಲ್ಲದೆ, ಕೆಲವರು ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಜೆಡಿಎಸ್ ನಾಯಕರಾದ ಸಾ.ರಾ.ಮಹೇಶ, ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪನಾಯಕ ಆಕ್ರೋಶದಿಂದ ಕಾಂಗ್ರೆಸ್ ಕಾರ್ಯಕರ್ತರತ್ತ ನುಗ್ಗಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಎರಡು ಕಡೆಯವರನ್ನು ತಡೆಯಲು ಬೆವರುಳಿಸಬೇಕಾಯಿತು.
ಕೊನೆಗೆ ಪೊಲೀಸರು ಕಾಂಗ್ರೆಸ್ ನವರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಹೊರ ಕಳುಹಿಸಿದರು.