Advertisement

ವರ್ಗಾವಣೆ ದಂಧೆಗೆ ನಕಲಿ ಸಹಿ!

11:14 AM Feb 07, 2019 | Team Udayavani |

ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ಅಕ್ರಮ ವರ್ಗಾವಣೆ ಸದ್ದು ಜೋರಾಗಿದ್ದು, ಮುಖ್ಯ ಸಂಚಾರ ವ್ಯವಸ್ಥಾಪಕರ ಸಹಿಯನ್ನೇ ನಕಲು ಮಾಡಿ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಅಧಿಕಾರಿಗಳು ಪೊಲೀಸ್‌ ತನಿಖೆಗೆ ನೀಡಲು ಚಿಂತನೆ ನಡೆಸಿದ್ದಾರೆ.

Advertisement

ವರ್ಗಾವಣೆ ದಂಧೆಯ ಕರಾಳ ಛಾಯೆ ಕೇಂದ್ರ ಕಚೇರಿಯಿಂದ ಹಿಡಿದು ಘಟಕಗಳವರೆಗೂ ಹಬ್ಬಿಕೊಂಡಿದ್ದು, 60 ಲಕ್ಷಕ್ಕೂ ಹೆಚ್ಚು ಹಣ ಹರಿದಾಡಿದೆ ಎನ್ನುವ ಅಂಶ ಹೊರಬಿದ್ದಿದೆ. ಈ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯನ್ನು ಸಂಸ್ಥೆಯ ಭದ್ರತಾ ಮತ್ತು ಜಾಗೃತ ದಳ ನಡೆಸುತ್ತಿದ್ದು, ಅಧಿಕಾರಿಗಳ ತಂಡ ಕೆಲ ಮಹತ್ವದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ ಎನ್ನಲಾಗಿದೆ. ಮುಖ್ಯ ಸಂಚಾರ ವ್ಯವಸ್ಥಾಪಕರ ಸಹಿ ನಕಲು ಮಾಡಿ 98 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಆಗಿರುವುದರಿಂದ ಪ್ರಕರಣವನ್ನು ಪೊಲೀಸ್‌ ತನಿಖೆಗೆ ವಹಿಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಚಾಲಕ ಹಾಗೂ ನಿರ್ವಾಹಕರ ವರ್ಗಾವಣೆಯಾಗಿರುವುದರಿಂದ ಘಟಕಗಳಲ್ಲಿನ ಕೆಲ ಸಿಬ್ಬಂದಿ ದಂಧೆಯಲ್ಲಿ ಶಾಮೀಲಾಗಿರುವುದನ್ನು ತಳ್ಳಿ ಹಾಕುವಂತಿಲ್ಲ. ವರ್ಗಾವಣೆ ಬಯಸಿದ ವಿಭಾಗ, ಘಟಕದ ಆಧಾರದ ಮೇಲೆ ದರಪಟ್ಟಿ ಮಾಡಿಕೊಂಡಿದ್ದಾರೆ. ಹೀಗಾಗಿ ಒಂದೊಂದು ವರ್ಗಾವಣೆಗೆ 30-60 ಸಾವಿರ ರೂ. ಕೈ ಬದಲಿಸಿದೆ. ಏಜೆಂಟ್ಗಿರಿ ಮಾಡಿದ ಸಿಬ್ಬಂದಿ ಒಂದಿಷ್ಟು ಉಳಿಸಿಕೊಂಡು ಮಿಕ್ಕಿದ ಸಿಂಹಪಾಲು ಕೇಂದ್ರ ಕಚೇರಿಯ ವರ್ಗಾವಣೆ ದಂಧೆಕೋರರಿಗೆ ರವಾನೆಯಾಗಿದೆ ಎನ್ನಲಾಗಿದೆ.

ಎಂಡಿಯನ್ನೇ ಯಾಮಾರಿಸಿದರೆ?: ವರ್ಗಾವಣೆ ಯಿಂದ ಹಿಡಿದು ಪ್ರತಿಯೊಂದು ಮಹತ್ವದ ನಿರ್ಧಾರಗಳು ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ಹಾಗೂ ಅವರ ಅಂಕಿತದ ಮೇರೆಗೆ ನಡೆಯುತ್ತದೆ. ಹೀಗಿರುವಾಗ ಈ ಅವ್ಯವಹಾರ ನಡೆಸಿರುವ ಪಟಾಲಂ ಎಂಡಿಯವರನ್ನೇ ಯಾಮಾರಿಸಿದರೆ ಎನ್ನುವ ಚರ್ಚೆ ಸಂಸ್ಥೆಯಲ್ಲಿ ನಡೆಯುತ್ತಿದೆ. ಎಂಡಿ ರಾಜೇಂದ್ರ ಚೋಳನ್‌ ಅವರು ಬಿಆರ್‌ಟಿಎಸ್‌ಗೆ ಹೆಚ್ಚು ಒತ್ತು ನೀಡಿರುವುದು ಇಂತಹ ಅಕ್ರಮ ಕಾರ್ಯಗಳಿಗೆ ಹಾಲೆರೆದಂತಾಗಿದೆ. ಐದಾರು ವರ್ಗಾವಣೆ ಆದೇಶವಾದರೂ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರುವಲ್ಲಿ ಅವರ ಆಪ್ತ ಶಾಖೆ ನಿರ್ಲಕ್ಷ್ಯ ವಹಿಸಿದೆಯಾ ಅಥವಾ ಇವರ ಪಾತ್ರವೇನು ಎನ್ನುವ ಅನುಮಾನ ಮೂಡಿದೆ.

ಎಚ್ಚೆತ್ತು ವರ್ಗಾವಣೆ: ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ನಕಲಿ ಸಹಿ ಮಾಡಿದ ಆರೋಪದಡಿ ಕೆಲವು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಆಯಕಟ್ಟಿನ ಜಾಗದಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದ್ದು, ಕೇಂದ್ರ ಕಚೇರಿಯ ಸಂಚಾರ ವಿಭಾಗ ಹಲವು ಬದಲಾವಣೆಗೆ ಸಾಕ್ಷಿಯಾಗಿದೆ. ಪ್ರಾಮಾಣಿಕ ತನಿಖೆ ಹಾಗೂ ಸಾಕ್ಷಿಗಳನ್ನು ನಾಶಪಡಿಸದಂತೆ ಕಾಪಾಡುವ ನಿಟ್ಟಿನಲ್ಲಿ ಇನ್ನೂ ಕೆಲವು ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ.

Advertisement

ಮೇಲ್ಮಟ್ಟಕ್ಕೆ ಕಪ್ಪ ಮುಟ್ಟಿಲ್ಲ: ವರ್ಗಾವಣೆಗೆ ಸಂಬಂಧಿಸಿದಂತೆ ಇಲಾಖೆ ಜನಪ್ರತಿನಿಧಿಯೊಬ್ಬರಿಗೆ ನಿರ್ದಿಷ್ಟ ಕಪ್ಪ ಮುಟ್ಟದಿರುವ ಹಿನ್ನೆಲೆಯಲ್ಲಿ ಈ ಹಗರಣ ಹೊರಬಿದ್ದಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಅವರು ಸೂಚಿಸಿದ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದ ಸಿಬ್ಬಂದಿ ವರ್ಗಾವಣೆಯಾಗಿದೆ. ಈ ಕಪ್ಪ ಮುಟ್ಟದಿರುವ ಕಾರಣಕ್ಕೆ ವರ್ಗಾವಣೆ ಅವ್ಯವಹಾರ ಬಹಿರಂಗವಾಗಿದ್ದು, ಇಲಾಖೆ ಹಂತದ ತನಿಖೆಗೆ ಆದೇಶಿಸಲಾಗಿದೆ ಎನ್ನಲಾಗಿದೆ.

ವರ್ಗಾವಣೆ ನೀತಿಗೆ ಬೆಲೆಯಿಲ್ಲ
ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ವರ್ಗಾವಣೆ ದಂಧೆ ಸದ್ದಿಲ್ಲದೆ ನಡೆಯುತ್ತಿತ್ತು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಎಸಿ ವರ್ಗಾವಣೆ ನೀತಿ ಜಾರಿಗೆ ತರುವ ಮೂಲಕ ಬೇಕಾಬಿಟ್ಟಿ ವರ್ಗಾವಣೆಗೆ ಕಡಿವಾಣ ಹಾಕಲಾಯಿತು. ವರ್ಷದಲ್ಲಿ ಒಮ್ಮೆ ಸಾರ್ವತ್ರಿಕ ವರ್ಗಾವಣೆ ವ್ಯವಸ್ಥೆ ಜಾರಿಗೆ ತರಲಾಗಿತ್ತಾದರೂ ಈ ವರ್ಗಾವಣೆ ದಂಧೆಕೋರರು ಕಸದ ಬುಟ್ಟಿಗೆ ಎಸೆದು ವರ್ಗಾವಣೆ ದಂಧೆ ಶುರು ಮಾಡಿಕೊಂಡಿದ್ದರ ಪರಿಣಾಮ ಸಂಸ್ಥೆಯ ಘನತೆ ಬೀದಿ ಪಾಲಾಗಿದೆ.

ವರ್ಗಾವಣೆಯಲ್ಲಿ ಒಂದಿಷ್ಟು ಅವ್ಯವಹಾರ ನಡೆದಿದೆ ಎನ್ನುವ ಅಂಶ ಗೊತ್ತಾಗುತ್ತಿದ್ದಂತೆಯೇ ಇಲಾಖಾ ತನಿಖೆಗೆ ಆದೇಶಿಸಿದ್ದೇನೆ. ಸಂಸ್ಥೆಯ ಭದ್ರತಾ ಮತ್ತು ಜಾಗೃತ ದಳ ಹಿರಿಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಅಗತ್ಯಬಿದ್ದರೆ ಪ್ರಕರಣವನ್ನು ಪೊಲೀಸ್‌ ತನಿಖೆಗೆ ವಹಿಸುತ್ತೇನೆ.
•ರಾಜೇಂದ್ರ ಚೋಳನ್‌,
ವ್ಯವಸ್ಥಾಪಕ ನಿರ್ದೇಶಕ, ವಾಯವ್ಯ ಸಾರಿಗೆ ಸಂಸ್ಥೆ 

ನಕಲಿ ಸಹಿ ಮಾಡಿ ವರ್ಗಾವಣೆ ಮಾಡಿದ್ದಾರೆ ಎನ್ನುವ ಆರೋಪ ಕ್ರಿಮಿನಲ್ ಪ್ರಕರಣವಾಗಿದೆ. ಸಂಸ್ಥೆಯ ಭದ್ರತಾ ಸಿಬ್ಬಂದಿ ಹೇಳಿಕೆ, ಪ್ರತಿ ಹೇಳಿಕೆ ಸೇರಿದಂತೆ ಒಂದು ಹಂತದವರೆಗೆ ಮಾತ್ರ ತನಿಖೆ ಮಾಡಲು ಮಾತ್ರ ಸಾಧ್ಯ. ಹೀಗಾಗಿ ಪ್ರಕರಣವನ್ನು ಪೊಲೀಸ್‌ ತನಿಖೆಗೆ ಒಳಪಡಿಸುವುದರಿಂದ ಇಡೀ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ. 
• ಡಾ| ಕೆ.ಎಸ್‌. ಶರ್ಮಾ,
 ಕಾರ್ಮಿಕ ಹೋರಾಟಗಾರ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next