ಹುಬ್ಬಳ್ಳಿ: ಮಹಾದಾಯಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಉತ್ಸುಕವಾಗಿದೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಸಹಕಾರ ಕೊಡುತ್ತಿಲ್ಲವೆಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹರಿಹಾಯ್ದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ಯೋಜನೆ ಕಾಮಗಾರಿಗೆ ಪರವಾನಿಗೆ ಸಿಕ್ಕಿದೆ ಎಂದು ಬಿಜೆಪಿಯವರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಆದರೆ ಈಗ ಕೇಂದ್ರ ಸಚಿವ ಭೂಪೇಂದ್ರ ಯಾದವ ಇದಕ್ಕೆ ಸಂಬಂಧಿಸಿದ ಅರ್ಜಿ ತಿರಸ್ಕರಿಸಿದ್ದಾರೆ ಎಂದು ಕಿಡಿಕಾರಿದರು.
ನಾಳೆ ಮಂಡಿಸಲಾಗುವ ಬಜೆಟ್ ಹೊಸ ದಿಕ್ಸೂಚಿ ಆಗಲಿದ್ದು, ಆಶಾದಾಯಕ ವಾಗಿರಲಿದೆ. ಗ್ಯಾರಂಟಿ ಯೋಜನೆಗಳಿಗೆ ಶಕ್ತಿ ತುಂಬಲಿದೆ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಕುರಿತು ಸಮೀಕ್ಷೆ ನಡೆದಿದೆ. ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಬಜೆಟ್ ನಂತರವೇ ನಿಗಮ-ಮಂಡಳಿಗೆ ನೇಮಕ ಮಾಡಲಾಗುವುದು. ಪಕ್ಷದಲ್ಲಿ ಈ ಬಗ್ಗೆ ಯಾರೂ ಅಸಮಾಧಾನಗೊಂಡಿಲ್ಲ ಎಂದರು.