Advertisement

ಹುಬ್ಬಳ್ಳಿ: ಗಾರ್ಮೆಂಟ್‌ನಲ್ಲಿ ತೆರೆದುಕೊಳ್ಳುತ್ತಿವೆ ದೊಡ್ಡ ಅವಕಾಶಗಳು-ಜೋಶಿ

02:30 PM Jul 08, 2024 | Team Udayavani |

■ ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಭಾರತ ಮುಂಬರುವ ದಿನಗಳಲ್ಲಿ ಪ್ರಪಂಚದ ಬಹುಪಾಲು ದೇಶಗಳಿಗೆ ಸಿದ್ಧ ಉಡುಪುಗಳನ್ನು ಪೂರೈಸುವ ದೇಶವಾಗಲಿದ್ದು, ಆಗ ಹೊಲಿಗೆ ಕಲಿತ ಮಹಿಳೆಯರಿಗೆ ದೊಡ್ಡ ಅವಕಾಶ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಇಲ್ಲಿನ ಕೇಶ್ವಾಪುರ ಕುಸುಗಲ್ಲ ರಸ್ತೆಯ ಶ್ರೀನಿವಾಸ ಗಾರ್ಡನ್‌ದಲ್ಲಿ ಗ್ರಾಮ ವಿಕಾಸ ಫೌಂಡೇಶನ್‌ ಹಾಗೂ ಇತರೆ ಕಂಪನಿಗಳ
ಸಿಎಸ್‌ಆರ್‌ ಅನುದಾನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಮತ್ತು ಯಂತ್ರ ವಿತರಣೆ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತ ಜವಳಿ ಉದ್ಯಮದಲ್ಲಿ ಜಗತ್ತಿನಲ್ಲಿ ಮುಂಚೂಣಿಯಲ್ಲಿದೆ. ದೊಡ್ಡ ಪ್ರಮಾಣದಲ್ಲಿ ಸಿದ್ಧ ಉಡುಪುಗಳನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದು, ಇದರಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಎರಡು ಇಲ್ಲವೆ ಮೂರನೇ ಸ್ಥಾನಕ್ಕೆ ಬರಲಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಯಿಂದ ಗಾರ್ಮೆಂಟ್‌ನಲ್ಲಿ ದೊಡ್ಡ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದರು.

ಧಾರವಾಡಕ್ಕೆ ಎರಡು, ಮೂರು ಗಾರ್ಮೆಂಟ್‌ ಕಂಪನಿಗಳು ಬರಲು ಉತ್ಸುಕತೆ ತೋರಿವೆ. ನೀವು ಸಹ ಗಾರ್ಮೆಂಟ್‌ ಕಂಪನಿ
ಮಾಲೀಕರಾಗಲು ಮುಂದಾಗಬೇಕು. ಅದಕ್ಕೆ ಪ್ರಯತ್ನ, ಪರಿಶ್ರಮ ಮತ್ತು ಕೌಶಲ ಅಗತ್ಯ. ಆಗ ನೀವೇ ಉದ್ಯೋಗದಾತ ರಾಗಬಹುದು ಎಂದರು.

ಗ್ರಾಮ ವಿಕಾಸ ಫೌಂಡೇಶನ್‌ ಅಡಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ 14 ಕೇಂದ್ರಗಳಲ್ಲಿ 11,040 ಮಹಿಳೆಯರಿಗೆ
ತರಬೇತಿ ನೀಡಲಾಗಿದೆ. ಅವರಲ್ಲಿ 3,695 ಜನರು ವಿವಿಧೆಡೆ ಉದ್ಯೋಗ ಪಡೆದಿದ್ದಾರೆ.  3,700 ಮಹಿಳೆಯರಿಗೆ ಉಚಿತ ಹೊಲಿಗೆ
ಯಂತ್ರ ವಿತರಿಸಲಾಗುತ್ತಿದ್ದು, ತರಬೇತಿಯಲ್ಲಿ ಮಹಿಳೆಯರು ಸಿದ್ಧಪಡಿಸಿದ 22,080 ಸಿದ್ಧ ಉಡುಪುಗಳನ್ನು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಹು-ಧಾ. ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ 2-3 ಹೊಲಿಗೆ ತರಬೇತಿ ಕೇಂದ್ರ
ಆರಂಭಿಸಲಾಗುವುದು ಎಂದರು.

Advertisement

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಅಡುಗೆ ಮನೆಗಷ್ಟೇ ಸೀಮಿತವಾಗಿದ್ದ ಮಹಿಳೆಯರು ಇದೀಗ ಸ್ವಾವಲಂಬಿಯಾಗಿ ಬದುಕು ನಡೆಸುತ್ತಿದ್ದಾರೆ.. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸುವ ಮೂಲಕ ಅವರ ಸಬಲೀಕರಣಕ್ಕೆ ಮುಂದಾಗಿದ್ದಾರೆ. ಕಂಪ್ಯೂಟರ್‌ ಕಲಿಕೆಗೆ ಒತ್ತು ಕೊಡಬೇಕೆನ್ನುವ ಬೇಡಿಕೆ ಕೇಳಿ ಬರುತ್ತಿದೆ.

ಸಚಿವರ ಜತೆ ಸೇರಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಮಹಿಳೆಯರಿಗೆ ಕಂಪ್ಯೂಟರ್‌ ಕಲಿಕೆ ತರಬೇತಿ ನೀಡಲು ಯೋಜನೆ
ರೂಪಿಸಲಾಗುವುದು. ಗ್ರಾಮ ವಿಕಾಸ ಫೌಂಡೇಶನ್‌ದಿಂದ ಹು-ಧಾ. ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲೂ ಹೊಲಿಗೆ ತರಬೇತಿ
ಕೇಂದ್ರಗಳನ್ನು ಸ್ಥಾಪಿಸಬೇಕು ಎಂದರು.

ಹೊಲಿಗೆ ಯಂತ್ರಗಳ ವಿತರಣೆ:ಟಾಟಾ ಸ್ಟೀಲ್‌, ಜೆಎಸ್‌ಡಬ್ಲ್ಯು ಫೌಂಡೇಷನ್‌, ಜೆಕೆ ಸಿಮೆಂಟ್‌, ರ್ಯಾಮೊ ಸಿಮೆಂಟ್‌, ಓರಿಯಂಟ್‌ ಸಿಮೆಂಟ್‌, ಮೈ ಹೋಮ್‌ ಗ್ರುಪ್‌, ಎನ್‌ಎಲ್‌ಸಿ ಇಂಡಿಯಾ ಲಿ. ಕಂಪನಿಯ ಸಿಎಸ್‌ಆರ್‌ ನಿಧಿಯಿಂದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಗ್ರಾಮ ವಿಕಾಸ ಫೌಂಡೇಶನ್‌ದ ಜಗದೀಶ ನಾಯಕ ಪ್ರಾಸ್ತಾವಿಕ
ಮಾತನಾಡಿದರು.

ನಾನು ಸಹ ಸಾಮಾನ್ಯ ಕುಟುಂಬದಿಂದ ಬಂದವ. ನನಗೆ ಈ ಬಾರಿಯ ಚುನಾವಣೆಯಲ್ಲಿ ಕೆಲ ಕಡೆ ಕಡಿಮೆ ಮತಗಳು ಬಂದಿರಬಹುದು. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ. ಆದರೆ ನೀವು ನನಗೆ ಸತತವಾಗಿ ಐದು ಬಾರಿ ಆರಿಸಿ ಕಳುಹಿಸಿದ್ದೀರಿ. ನಿಮ್ಮ ಋಣ ತೀರಿಸುವೆ. ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸುವುದರಿಂದ ರಾಜಕೀಯ ಲಾಭ ಸಿಗಲ್ಲ.

*ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next