ಹುಬ್ಬಳ್ಳಿ: ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಕುರಿತು ಜಾಗೃತಿ ಹಾಗೂ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಶಿಬಿರ ಆಯೋಜಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ಭವಾನಿ ನಗರದ ಅವರ ನಿವಾಸದ ಮುಂಭಾಗದಲ್ಲಿ ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಚಿಕಿತ್ಸೆ ಪಡೆದವರೊಂದಿಗೆ ದೀಪಾವಳಿ ಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಯುಷ್ಮಾನ್ ಭಾರತ ಜಗತ್ತಿನಲ್ಲೇ ದೊಡ್ಡ ಆರೋಗ್ಯ ಯೋಜನೆಯಾಗಿದೆ. ದೇಶದಲ್ಲಿ ಈಗಾಗಲೇ ಸುಮಾರು 50 ಲಕ್ಷ ಜನರು ಈ ಯೋಜನೆಯಡಿ ಚಿಕಿತ್ಸೆ ಪಡೆದಿದ್ದು, ಸುಮಾರು 7,901 ಕೋಟಿ ರೂ. ಚಿಕಿತ್ಸಾ ವೆಚ್ಚ ಭರಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಬಡವರೂ ಕೂಡ ಚಿಕಿತ್ಸೆ ಪಡೆಯುವಂತಹ ಯೋಜನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ನೋಂದಣಿಯಾಗಬೇಕಿದೆ.
ಜಿಲ್ಲೆಯಲ್ಲಿ 13 ಲಕ್ಷ ಜನರಿಗೆ ಕಾರ್ಡ್ ನೀಡಬೇಕಾಗಿದ್ದು, 2,66,315 ಜನರಿಗೆ ಮಾತ್ರ ಕಾರ್ಡ್ ನೀಡಲಾಗಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಈ ಯೋಜನೆ ಕುರಿತು ಜಾಗೃತಿ ಹಾಗೂ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ವಿಶೇಷ ಶಿಬಿರ ಆಯೋಜಿಸಬೇಕು ಎಂದರು.
ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ದಾರರು ಈ ಯೋಜನೆ ಪಡೆಯಬಹುದಾಗಿದೆ. ಬಿಪಿಎಲ್ ಕಾರ್ಡ್ ದಾರರಿಗೆ 5 ಲಕ್ಷ ರೂ. ಎಪಿಎಲ್ ಕಾರ್ಡ್‌ದಾರರಿಗೆ 1.5 ಲಕ್ಷ ರೂ. ವರೆಗೆ ಚಿಕಿತ್ಸೆ ವೆಚ್ಚ ಭರಿಸಲಾಗುವುದು. ಈ ಯೋಜನೆ ಪ್ರತಿಯೊಬ್ಬರಿಗೂ ತಲುಪಬೇಕು ಎನ್ನುವ ಕಾರಣಕ್ಕೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಪ್ರಧಾನ ಮಂತ್ರಿಗಳು ಸೂಚಿಸಿದ ಮೇರೆಗೆ ಆಯೋಜನೆ ಮಾಡಿದ್ದು, ಪ್ರತಿಯೊಂದು ವಾರ್ಡು ಹಾಗೂ ಗ್ರಾಮಗಳಲ್ಲಿ ಶಿಬಿರ ಆಯೋಜಿಸಿ ಕಾರ್ಡ್ ದೊರೆಯುವಂತೆ ಮಾಡಬೇಕು ಎಂದು
ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಯಶವಂತ ಮಾತನಾಡಿ, ಜಿಲ್ಲೆಯಲ್ಲಿ 9,635 ಫಲಾನುಭವಿಗಳು ಇದರ ಲಾಭ ಪಡೆದಿದ್ದು, ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಿಗೆ ಯೋಜನೆಯಡಿ 33 ಕೋಟಿ ರೂ. ಪಾವತಿಸಲಾಗಿದೆ. ಈ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರಕಾರಿ ಆಸ್ಪತ್ರೆಯಿಂದ ಶಿಫಾರಸು ಕಡ್ಡಾಯವಾಗಿರುತ್ತದೆ.
ಇಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆದ ನಂತರ ಇಲ್ಲದ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುವುದು. ಫಲಾನುಭವಿಗಳು ಕಡ್ಡಾಯವಾಗಿ ಶಿಫಾರಸು ಪತ್ರ ಪಡೆದ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು. ಈ ಯೋಜನೆಗೆ ನೋಂದಣಿ ಮಾಡಲು ಜಿಲ್ಲೆಯಲ್ಲಿ 102
ಕೇಂದ್ರಗಳಿದ್ದು, ಇನ್ನಷ್ಟು ಹೆಚ್ಚಿಸುವ ಚಿಂತನೆ ನಡೆದಿದೆ. ಯಾರಾದರೂ ಶಿಬಿರ ಆಯೋಜಿಸಲು ಮುಂದೆ ಬಂದರೆ ಎಲ್ಲಾ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಬಿಜೆಪಿ ಮುಖಂಡರಾದ ನಾಗೇಶ ಕಲಬುರ್ಗಿ, ಸುಧೀರ್ ಸರಾಫ್, ಡಾ| ಮಹೇಶ ನಾಲವಾಡ, ಡಿ.ಕೆ. ಚವ್ಹಾಣ, ಮಲ್ಲಿಕಾರ್ಜುನ ಸಾವಕಾರ, ಶಿವಾನಂದ ಮುತ್ತಣ್ಣವರ ಇನ್ನಿತರರಿದ್ದರು.