Advertisement

ಕಾಸಿಗಾಗಿಸುದ್ದಿ-ಸುಳ್ಳುಪ್ರಚಾರದತ್ತ ಜಿಲ್ಲಾಡಳಿತದಿಂದತೀವ್ರನಿಗಾ:ಡಿಸಿ

10:12 AM Mar 15, 2019 | Team Udayavani |

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷ, ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವ, ಸುಳ್ಳು ಸುದ್ದಿಗಳನ್ನು ಹರಡುವ ಸಾಮಾಜಿಕ ಜಾಲ ತಾಣ ನಿಯಂತ್ರಣ ಸವಾಲಿನ ಕೆಲಸವಾಗಿದೆ. ಇದರ ತಡೆ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

Advertisement

ಮಿನಿ ವಿಧಾನಸೌಧದ ಸಭಾಭವನದಲ್ಲಿ ಜಿಲ್ಲಾಡಳಿತ, ಹುಬ್ಬಳ್ಳಿ ತಹಶೀಲ್ದಾರ್‌ ಕಚೇರಿ, ವಾರ್ತಾ-ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಅವಳಿ ನಗರ ಮಾಧ್ಯಮ ಪ್ರತಿನಿಧಿಗಳಿಗೆ ಗುರುವಾರ ಏರ್ಪಡಿಸಿದ್ದ ಮಾಧ್ಯಮ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹೆಚ್ಚು ಹರಡುತ್ತವೆ. ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಪರ ಪ್ರಚಾರ ಮಾಡುವುದರ ಮೇಲೆಯೂ ನಿಗಾ ಇರಿಸಲಾಗುವುದು. ಮತದಾನದ 48 ಗಂಟೆ ಮೊದಲು ಯಾವುದೇ ರೀತಿಯ ಪ್ರಚಾರಕ್ಕೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿಯೂ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿರಿಸಲಾಗುವುದು, ನಿಯಮ ಉಲ್ಲಂಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಚುನಾವಣೆ ನಡೆಯುವ ನಿಟ್ಟಿನಲ್ಲಿ ಮಾಧ್ಯಮದ ಪಾತ್ರ ಅತ್ಯಂತ ಮುಖ್ಯವಾಗಿದೆ. ಸುಳ್ಳು ಹಾಗೂ ಪೇಯ್ಡ ಸುದ್ದಿಗಳನ್ನು ಪ್ರಕಟಿಸದಂತೆ ಚುನಾವಣಾ ಆಯೋಗ ಹಲವು ನಿರ್ದೇಶನಗಳನ್ನು ನೀಡಿದೆ. ಜಾಹೀರಾತು ಪ್ರಕಟಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ, ಜಾಹೀರಾತು ಪ್ರಕಟಣೆ ಮುನ್ನ ಪೂರ್ವಾನುಮತಿ ಸರ್ಟಿಫಿಕೇಟ್‌ ಪಡೆಯಬೇಕು. ಅದು ಅಭ್ಯರ್ಥಿಯ ವೆಚ್ಚದ ಲೆಕ್ಕಕ್ಕೆ ಸೇರಬೇಕಾಗಿದೆ. ಒಂದು ವೇಳೆ ಪೂರ್ವಾನುಮತಿ ಪಡೆಯದೆ ಜಾಹಿರಾತು ಪ್ರಕಟಿಸಿದಲ್ಲಿ ಅಂತಹ ಅಭ್ಯರ್ಥಿಗೆ ನೋಟಿಸ್‌ ನೀಡಿ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು. ಪಕ್ಷ ಇಲ್ಲವೆ ವ್ಯಕ್ತಿ ಕುರಿತಾಗಿ ಪ್ರಭಾವ ಬೀರುವ ನಿಟ್ಟಿನಲ್ಲಿ ಸುದ್ದಿ ಬರೆಯುವ, ವಿಶ್ಲೇಷಿಸುವ ಸುದ್ದಿ-ಲೇಖನಗಳ ಬಗ್ಗೆ ಎಂಸಿಎಂಸಿ ಕಮಿಟಿ ನಿಗಾ ವಹಿಸಲಿದೆ. ಕಾಸಿಗಾಗಿ ಸುದ್ದಿ ಎಂಬುದು ಖಾತ್ರಿಯಾದರೆ ಅದರ ವೆಚ್ಚವನ್ನು ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುತ್ತದೆ. ಅಲ್ಲದೆ, ಅಂತಹ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ಕುರಿತಾಗಿ ಕೇಂದ್ರ ಚುನಾವಣಾ ಆಯೋಗದ ಮೂಲಕ ಭಾರತೀಯ ಪ್ರಸ್‌ ಕೌನ್ಸಿಲ್‌ ಹಾಗೂ ನ್ಯಾಷನಲ್‌ ಬ್ರಾಡ್‌ಕಾಸ್ಟಿಂಗ್‌ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಯಾವುದೇ ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸಿದ ವಿಡಿಯೋ, ಆಡಿಯೋಗಳನ್ನು ಪ್ರಚಾರ ಮಾಡುವ ವಿಚಾರದಲ್ಲೂ ನಿಗಾ ವಹಿಸಲಾಗುವುದು. ವಿದ್ಯುನ್ಮಾನ ಮತಯಂತ್ರಗಳು ಮತದಾನ ವೇಳೆ ತೊಂದರೆ ಉಂಟು ಮಾಡದ ನಿಟ್ಟಿನಲ್ಲಿ ಈಗಾಗಲೇ ಒಂದು ಬಾರಿ ಅವುಗಳನ್ನು ತಪಾಸಣೆ ನಡೆಸಲಾಗಿದೆ. ಅಭ್ಯರ್ಥಿಗಳ ಹೆಸರು, ಚಿನ್ಹೆ ಅಳವಡಿಕೆ ವೇಳೆಯೂ ಮತ್ತೂಮ್ಮೆ ಪರಿಶೀಲನೆ ನಡೆಸಲಾಗುವುದು ಎಂದರು.

Advertisement

ಜಿಪಂ ಸಿಇಒ ಡಾ| ಸತೀಶ ಮಾತನಾಡಿ, ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಒಂದು ಸುತ್ತಿನ ವಿದ್ಯುನ್ಮಾನ ಮತಯಂತ್ರಗಳ ಜಾಗೃತಿ ಕಾರ್ಯ ಕೈಗೊಳ್ಳಲಾಗಿದ್ದು, ವಿವಿ ಪ್ಯಾಟ್‌ ಸಮೇತ ಇನ್ನೊಂದು ಹಂತದಲ್ಲಿ ಜಾಗೃತಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ಸುರೇಶ ಹಿಟ್ನಾಳ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ, ಪಾಲಿಕೆ ಆಯುಕ್ತ ಶಕೀಲ ಅಹ್ಮದ್‌, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಇನ್ನಿತರರಿದ್ದರು. ಲೋಕಸಭಾ ಚುನಾವಣೆಯ ಧಾರವಾಡ ಜಿಲ್ಲೆ ಚುನಾವಣಾ ಹಿನ್ನೋಟ ಮಾಹಿತಿ ಹೊತ್ತಿಗೆಯನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. 

ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1,835 ಮತದಾನ ಕೇಂದ್ರಗಳಿದ್ದು, ಅತ್ಯಂತ ಕಡಿಮೆ ಮತದಾನವಾದ 20 ಕೇಂದ್ರಗಳನ್ನು ಗುರುತಿಸಲಾಗಿದೆ. ಅಲ್ಲಿ ಹಾಸ್ಯ ಕಾರ್ಯಕ್ರಮ ಆಯೋಜನೆ ಮಾಡಿ ಮತದಾನ ಹೆಚ್ಚಳಕ್ಕೆ ಜಾಗೃತಿ ಮೂಡಿಸಲಾಗುತ್ತದೆ.
 ಡಾ| ಸತೀಶ, ಜಿಪಂ ಸಿಇಒ

ಜಿಲ್ಲೆಯಲ್ಲಿ ಒಟ್ಟು 23 ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದ್ದು, ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ. ಅನುಮಾನ ಬಂದಲ್ಲಿ ದ್ವಿಚಕ್ರ ವಾಹನಗಳನ್ನೂ ತಪಾಸಣೆ ಮಾಡಲಾಗುವುದು. 50 ಸಾವಿರ ರೂ. ವರೆಗೆ ಹಣ ಸಾಗಣೆಗೆ ಅಭ್ಯಂತರವಿಲ್ಲ. ಅದಕ್ಕಿಂತ ಹೆಚ್ಚಿನ ಹಣ ಸಾಗಿಸುತ್ತಿದ್ದರೆ ಸೂಕ್ತ ದಾಖಲಾತಿ ಹಾಗೂ ಪರವಾನಗಿ ಇರಬೇಕು.
 ಎಂ.ಎನ್‌. ನಾಗರಾಜ,
 ಮಹಾನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next