ಹುಬ್ಬಳ್ಳಿ: ಇಲ್ಲಿಯ ವೀರಾಪುರ ಓಣಿಯ ಯುವತಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ತನಿಖೆ ಸಿಐಡಿಗೆ ವಹಿಸಬೇಕು ಹಾಗೂ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮನವಿ ಮಾಡಿದರು.
ಮೃತ ಅಂಜಲಿ ನಿವಾಸಕ್ಕೆ ಶನಿವಾರ ಭೇಟಿಕೊಟ್ಟು, ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಹಾಗೂ ವಿಶೇಷವಾಗಿ ಹುಬ್ಬಳ್ಳಿ- ಧಾರವಾಡದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುವುದು ಒಳ್ಳೆಯದಲ್ಲ. ಅಪರಾಧ ಕೃತ್ಯಗಳಲ್ಲಿ ತೊಡಗುವ ಯುವಕರ ಮನಸ್ಥಿತಿ ಎಂತಹದ್ದು ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೃಹ ಸಚಿವರು ಸದ್ಯದಲ್ಲೇ ನಗರಕ್ಕೆ ಭೇಟಿ ನೀಡಲಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ನಿರ್ಲಕ್ಷ್ಯ ವಹಿಸಿದ ಪೊಲೀಸರನ್ನು ಅಮಾನತು ಸಹ ಮಾಡಲಾಗಿದೆ. ವಿಪಕ್ಷದಲ್ಲಿರುವ ಬಿಜೆಪಿ ನಾಯಕರು ಅವರ ಕೆಲಸ ಮಾಡುತ್ತಿದ್ದಾರೆ. ಸರ್ಕಾರವನ್ನು ವಿರೋಧಿಸುವುದು ಅವರ ಕೆಲಸ ಎಂದರು.
ಡ್ರಗ್ಸ್ ಮಾರಾಟ ರಾಜ್ಯ ಅಷ್ಟೇ ಅಲ್ಲ ದೇಶಾದ್ಯಂತ ನಡೆಯುತ್ತಿದೆ. ಇಂತಹ ಪ್ರಕರಣದಲ್ಲಿ ಭಾಗಿಯಾಗುವವರ ಬಗ್ಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮಕೈಗೊಳ್ಳುತ್ತೇವೆ. ಶ್ರೀರಾಮ ಸೇನೆ ಮಹಿಳೆಯರ ಆತ್ಮರಕ್ಷಣೆ ಮಾಡುತ್ತಿರುವುದು ಒಳ್ಳೆಯದು. ಆದರೆ ತ್ರಿಶೂಲ ದೀಕ್ಷೆ ನೀಡುವ ಹಾಗೂ ಪಡೆಯುವವರಿಗೆ ಬಿಟ್ಟ ವಿಚಾರ. ಇದಕ್ಕೆ ನಾನು ಉತ್ತರಿಸಲ್ಲ. ಕಾನೂನು ಪ್ರಕಾರ ನೀಡದಾಗದಿದ್ದರೆ ಖಂಡಿತವಾಗಿ ನಿಲ್ಲಿಸುತ್ತೇವೆ ಎಂದರು.
ಅಂಜಲಿ ಕುಟುಂಬ ಬಡತನದಲ್ಲಿದೆ. ಅವರಿಗೆ ಸರ್ಕಾರದ ಪರಿಹಾರ ನೀಡುತ್ತದೆ. ಏನು ಪರಿಹಾರ ಕೊಡಲಿದೆ ಎಂಬುವುದು ನಾನು ಹೇಳುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಸಚಿವರು ಸಂತೋಷ ಲಾಡ್ ಫೌಂಡೇಶನ್‌ದಿಂದ ಅಂಜಲಿ ಕುಟುಂದವರಿಗೆ 2ಲಕ್ಷ ರೂ.ಗಳ ಆರ್ಥಿಕ ಸಹಾಯ ಮಾಡಿದರು.