Advertisement

ವರ್ಚಸ್ಸು ವೃದ್ಧಿ-ಪಾರದರ್ಶಕತೆ ಮಂತ್ರ 

10:28 AM May 29, 2022 | Team Udayavani |

ಹುಬ್ಬಳ್ಳಿ: ಮಹಾನಗರ ಪಾಲಿಕೆ ಮಹಾಪೌರ ಸ್ಥಾನದ ಆಯ್ಕೆಯಲ್ಲಿ ಧಾರವಾಡಕ್ಕೆ ಆದ್ಯತೆ ನೀಡುವ ಮೂಲಕ ಬಿಜೆಪಿ ನಾಯಕರು, ಧಾರವಾಡದಲ್ಲಿ ಎದ್ದಿರುವ ಪ್ರತ್ಯೇಕ ಮಹಾನಗರ ಪಾಲಿಕೆ ಕೂಗು ಶಮನಕ್ಕೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

Advertisement

ಜತೆಗೆ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಾಲಿಕೆ ಆಡಳಿತ ವರ್ಚಸ್ಸು ಹೆಚ್ಚಿಸುವ, ಪಾರದರ್ಶಕ ಆಡಳಿತ ನೀಡಬೇಕೆಂದು ನೂತನ ಮಹಾಪೌರರಿಗೆ ಪಕ್ಷದ ನಾಯಕರು ಸ್ಪಷ್ಟ ಕಿವಿಮಾತು ಹೇಳಿದ್ದಾರೆ ಎನ್ನಲಾಗುತ್ತಿದೆ.

ಮಹಾಪೌರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಬಿಜೆಪಿಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪೈಪೋಟಿ ಏರ್ಪಟ್ಟಿತ್ತಾದರೂ ಅಂತಿಮವಾಗಿ ಧಾರವಾಡದಿಂದ ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ, ಹುಬ್ಬಳ್ಳಿಯಿಂದ ವೀರಣ್ಣ ಸವಡಿ, ಶಿವು ಮೆಣಸಿನಕಾಯಿ ಅವರ ಹೆಸರುಗಳು ಮುನ್ನೆಲೆಯಲ್ಲಿದ್ದವು.

ಎಲ್ಲ ಮಗ್ಗಲುಗಳೊಂದಿಗೆ ಚರ್ಚಿಸಿ ಬಿಜೆಪಿ ನಾಯಕರು ಅಂತಿಮವಾಗಿ ಧಾರವಾಡಕ್ಕೆ ಅವಕಾಶ ನೀಡಬೇಕೆಂಬ ಅನಿಸಿಕೆಯಡಿ ಈರೇಶ ಅಂಚಟಗೇರಿ ಅವರಿಗೆ ಮಹಾಪೌರ ಗೌನ್‌ ಧರಿಸುವ ಅವಕಾಶ ಕಲ್ಪಿಸಿದ್ದಾರೆ.

ಪೈಪೋಟಿ ಮಧ್ಯ ಅವಕಾಶ: ಮಹಾಪೌರ ಸ್ಥಾನಕ್ಕೆ ಯಾರನ್ನು ಅಭ್ಯರ್ಥಿಯಾಗಿಸುವುದು ಎಂಬ ಚಿಂತನೆ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಶುಕ್ರವಾರ ರಾತ್ರಿ ಪಕ್ಷದ ಪಾಲಿಕೆ ಸದಸ್ಯರ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಿದ್ದು, ಸದಸ್ಯರು ತಮ್ಮದೇ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಹೆಚ್ಚಿನ ಸದಸ್ಯರು ವೀರಣ್ಣ ಸವಡಿ ಅವರಿಗೆ ಮತ್ತೂಂದು ಅವಕಾಶ ನೀಡಬೇಕೆಂದು ಸಲಹೆ ನೀಡಿದರು ಎನ್ನಲಾಗುತ್ತಿದೆ.

Advertisement

ಸದಸ್ಯರಿಂದ ಸಂಗ್ರಹಿಸಿದ ಮಾಹಿತಿ ವರದಿಯನ್ನು ಪಕ್ಷದ ನಾಯಕರಿಗೆ ನೀಡಲಾಗಿದ್ದು, ಜಿಲ್ಲಾಮಟ್ಟದ ಕೋರ್‌ ಕಮಿಟಿ ಸಭೆಯಲ್ಲಿ ಮಹಾಪೌರ ಸ್ಥಾನವನ್ನು ಯಾರಿಗೆ ನೀಡಬೇಕು, ರಾಜಕೀಯವಾಗಿ ಇದರಂದಾಗಬಹುದಾದ ಪ್ರಯೋಜನ-ಲಾಭಗಳ ಕುರಿತಾಗಿಯೂ ಸುದೀರ್ಘ‌ ಚರ್ಚೆ ನಡೆದಿದೆ. ಧಾರವಾಡ ಎಂದು ಬಂದಾಗ ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದ್ದರೆ, ಹುಬ್ಬಳ್ಳಿಗೆ ಬಂದಾಗ ವೀರಣ್ಣ ಸವಡಿ ಹಾಗೂ ಶಿವು ಮೆಣಸಿನಕಾಯಿ ಹೆಸರು ಕೇಳಿಬಂದಿವೆ.

ವೀರಣ್ಣ ಸವಡಿ ಅವರಿಗೆ ಹಲವು ಸದಸ್ಯರು ಬೆಂಬಲ ಸೂಚಿಸಿದ್ದರೂ ಈಗಾಗಲೇ ಅವರು ಒಮ್ಮೆ ಮಹಾಪೌರರಾಗಿದ್ದು, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರಕ್ಕೆ ಮಹಾಪೌರ ಸ್ಥಾನ ಸೇರಿದಂತೆ ಕೆಲ ಅವಕಾಶಗಳನ್ನು ನೀಡಲಾಗಿದೆ. ಇದೀಗ ಮತ್ತೂಮ್ಮೆ ಅವರಿಗೆ ನೀಡುವ ಬದಲು ಬೇರೆಯರಿಗೆ ಅವಕಾಶ ಕಲ್ಪಿಸಿದರಾಯಿತು ಎಂಬ ಅಭಿಪ್ರಾಯ ಕೋರ್‌ ಕಮಿಟಿಯಲ್ಲಿ ವ್ಯಕ್ತವಾಯಿತು ಎನ್ನಲಾಗಿದೆ.

ಕೋರ್‌ ಕಮಿಟಿಯಲ್ಲಿ ನಾಯಕರ ನಡುವಿನ ಚರ್ಚೆಯಲ್ಲಿ ಅಂತಿಮವಾಗಿ ಈ ಬಾರಿಯ ಮಹಾಪೌರ ಸ್ಥಾನವನ್ನು ಧಾರವಾಡಕ್ಕೆ ನೀಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಈರೇಶ ಅಂಚಟಗೇರಿ ಹಾಗೂ ವಿಜಯಾನಂದ ಶೆಟ್ಟಿ ಅವರ ನಡುವಿನ ಪೈಪೋಟಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಟ್ಟಾ ಬೆಂಬಲಿಗರಾಗಿರುವ ಈರೇಶ ಅಂಚಟಗೇರಿ ಅವರ ತೂಕ ಹೆಚ್ಚುವ ಮೂಲಕ ಮಹಾಪೌರ ಸ್ಥಾನ ಪಡೆದುಕೊಂಡಿದ್ದಾರೆ. ಒಂದು ವೇಳೆ ವಿಜಯಾನಂದ ಶೆಟ್ಟಿ ಏನಾದರೂ ಅವಕಾಶ ಪಡೆದಿದ್ದರೆ ಹು-ಧಾ ಬಂಟರ ಸಮಾಜಕ್ಕೊಂದು ಅವಕಾಶ ನೀಡಿದಂತಾಗುತ್ತಿತ್ತು.

ಹೇಳಿಕೊಳ್ಳಲಾಗದ ಸ್ಥಿತಿ! ಕೋರ್‌ ಕಮಿಟಿ ತೀರ್ಮಾನದಿಂದ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಸ್ಥಾನಕ್ಕೆ ಒಬಿಸಿ ಎ ಪ್ರವರ್ಗದವರಿಗೆ ಅವಕಾಶ ಸಿಕ್ಕಿರುವ ಬಗ್ಗೆ ಕೆಲ ಆಕಾಂಕ್ಷಿಗಳಿಗೆ ನೋವಿದ್ದರೂ ಬಹಿರಂಗ ಹೇಳಿಕೊಳ್ಳಲು ಸಾಧ್ಯವಾಗದ ಸ್ಥಿತಿ ಇದೆ. ಇನ್ನು ಒಂದಿಬ್ಬರು ಪ್ರವರ್ಗದಲ್ಲಿ ಬರುವ ಮುಂದಿನ ಮಹಾಪೌರ ಸ್ಥಾನದ ಆಕಾಂಕ್ಷಿಗಳಲ್ಲಿ ಪೈಪೋಟಿ ತಗ್ಗಿದ ಸಣ್ಣ ಖುಷಿ ತರಿಸಿದೆ ಎಂದು ಹೇಳಲಾಗುತ್ತಿದೆ.

ವಿಧಾನಸಭೆ ಚುನಾವಣೆ ದೃಷ್ಠಿಕೋನ: ಕಳೆದ ಮೂರು ವರ್ಷಗಳಿಂದ ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವ ಇಲ್ಲದೆ ಮಹಾನಗರ ಪಾಲಿಕೆ ಹಲವು ಸಮಸ್ಯೆಗಳಿಗೆ ಸಿಲುಕುವಂತಾಗಿದ್ದು, ಜನಮುಖೀ ಆಡಳಿತಕ್ಕೆ ಒತ್ತು ನೀಡಿ ಪಾಲಿಕೆ ವರ್ಚಸ್ಸು ಹೆಚ್ಚಿಸಬೇಕು. ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಉತ್ತಮ ಆಡಳಿತ ನೀಡಬೇಕೆಂದು ನೂತನ ಮಹಾಪೌರರಿಗೆ ಬಿಜೆಪಿ ನಾಯಕರು ಸ್ಪಷ್ಟ ಸಂದೇಶ ನೀಡಿದ್ದಾರೆ.

ಮುಂದಿನ 8-10 ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಕಳೆದ ಬಾರಿ ಪಾಲಿಕೆ ಸದಸ್ಯರ ಬಗೆಗಿನ ಆಡಳಿತ ವಿರೋಧಿ ಅಲೆ ಪಕ್ಷಕ್ಕೆ ಅಲ್ಲಲ್ಲಿ ಹಿನ್ನಡೆ ಉಂಟು ಮಾಡುವಂತೆ ಮಾಡಿದ್ದು, ಪಾಲಿಕೆ ಚುನಾವಣೆಯಲ್ಲಿಯೂ ಇದರ ಪ್ರಭಾವ ದೊಡ್ಡ ಪ್ರಮಾಣದಲ್ಲಿ ತನ್ನದೇ ಕೆಲಸ ಮಾಡಿದೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯಲ್ಲಿ ಪಕ್ಷಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಯತ್ನಗಳು ನಡೆಯಬೇಕು.

ಮುಖ್ಯವಾಗಿ ಪಾಲಿಕೆ ಸದಸ್ಯರು ನಿಯಮ ಮೀರುವ ಕೆಲಸ-ಕಾರ್ಯಗಳಿಗೆ ಒತ್ತಡ ತರುವ, ಪ್ರಭಾವ ಬೀರುವ ಯತ್ನಕ್ಕೆ ಮುಂದಾದರೆ ಅದಕ್ಕೆ ಮಣಿಯದೆ ಗಟ್ಟಿತನ ತೋರುವ ಮೂಲಕ ಪಾರದರ್ಶಕತೆ ಎತ್ತಿ ಹಿಡಿಬೇಕು ಎಂದು ಸಲಹೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಅಧಿಕಾರಕ್ಕೆ ಬರುವ ಮುನ್ನವೇ ಕೆಲ ಸದಸ್ಯರು ತಮ್ಮದೇ ಆಟ ಶುರುವಿಟ್ಟುಕೊಂಡಿರುವ ಮಾಹಿತಿ ಪಡೆದಿರುವ ಬಿಜೆಪಿ ನಾಯಕರು ಇಂತಹ ಕಿವಿಮಾತುಗಳನ್ನು ನೂತನ ಮಹಾಪೌರರಿಗೆ ನೀಡಿದ್ದಾರೆ ಎನ್ನಲಾಗಿದ್ದು, ಇದು ಎಷ್ಟರಮಟ್ಟಿಗೆ ಅನುಷ್ಠಾನಗೊಳ್ಳಲಿದೆ, ಪಕ್ಷದ ವರ್ಚಸ್ಸು ಹೆಚ್ಚಳಕ್ಕೆ ಯಾವ ಕೊಡುಗೆ ಕೊಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಅಂತಿಮ ಕ್ಷಣದವರೆಗೆ ಪೈಪೋಟಿ: ಮಹಾಪೌರ ಸ್ಥಾನದ ನಾಲ್ವರು ಪ್ರಮುಖ ಆಕಾಂಕ್ಷಿಗಳಲ್ಲಿ ಬಿಜೆಪಿ ಹಿರಿಯ ಸದಸ್ಯ ಶಿವು ಮೆಣಸಿನಕಾಯಿ ಕೂಡ ಒಬ್ಬರಾಗಿದ್ದರು. ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದು, ಅಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸಲು ಶಿವು ಮೆಣಸಿನಕಾಯಿಗೆ ಮಹಾಪೌರ ಸ್ಥಾನದ ಅವಕಾಶ ನೀಡಬೇಕೆಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂದಿತ್ತು ಎನ್ನಲಾಗಿದೆ. ಶಿವು ಮೆಣಸಿನಕಾಯಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಕ್ಷೇತ್ರದಲ್ಲಿ ಪಕ್ಷಕ್ಕೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಶ್ರಮಿಸಲಿದ್ದಾರೆ ಎಂಬ ಅನಿಸಿಕೆ ವ್ಯಕ್ತವಾದರೂ, ಕೋರ್‌ ಕಮಿಟಿ ಅಂತಿಮವಾಗಿ ಈ ಬಾರಿ ಧಾರವಾಡಕ್ಕೆ ಮಹಾಪೌರ ಸ್ಥಾನ ನೀಡಬೇಕೆಂಬ ಸ್ಪಷ್ಟ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಮೆಣಸಿನಕಾಯಿ ಅವರಿಗೆ ಹಿನ್ನಡೆ ಆಯಿತು ಎಂದು ಹೇಳಲಾಗುತ್ತಿದೆ.     

„ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next