ವರದಿ: ಬಸವರಾಜ ಹೂಗಾರ
ಹುಬ್ಬಳ್ಳಿ: ನಗರ ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲೂಕು ಭಾಗಗಳಲ್ಲಿ ಉತ್ತಮ ಮಳೆಯ ಪರಿಣಾಮ ಶೇ.95 ಬಿತ್ತನೆಯಾಗಿದ್ದು, ಇದೀಗ ರೈತರು ಮತ್ತೆ ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಎಲ್ಲೆಲ್ಲಿ ಎಷ್ಟು ಬಿತ್ತನೆ: ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 30,356 ಹೆಕ್ಟೇರ್‌ನಲ್ಲಿ 27, 268 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ನಗರ ತಾಲೂಕು ವ್ಯಾಪ್ತಿಯಲ್ಲಿ 9,754 ಹೆಕ್ಟೇರ್ ಪ್ರದೇಶದಲ್ಲಿ 7,587 ಹೆಕ್ಟೇರ್ ಬಿತ್ತನೆ ಮಾಡಲಾಗಿದ್ದು, ಒಟ್ಟು 40,110 ಹೆಕ್ಟೇರ್ ಪ್ರದೇಶದಲ್ಲಿ 34,855 ಹೆಕ್ಟೇರ್‌ನಲ್ಲಿ ವಿವಿಧ ಬೆಳೆ ಬಿತ್ತನೆ ಮಾಡಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ ಹೆಸರು 6013, ಶೇಂಗಾ 3,025, ಸೋಯಾಬೀನ್ 5,234, ಹತ್ತಿ 9,658, ಉದ್ದು 195 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ನಗರ ತಾಲೂಕು ಪ್ರದೇಶದಲ್ಲಿ ಹೆಸರು 945, ಶೇಂಗಾ 1,015, ಸೋಯಾಬೀನ್ 3,458, ಹತ್ತಿ 960, ಉದ್ದು 364 ಹೆಕ್ಟೇರ್ ಬಿತ್ತನೆಯಾಗಿದೆ. ಇನ್ನುಳಿದಂತೆ ಇತರೆ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.
ಮಳೆ ಪ್ರಮಾಣ: ಮೇ ಹಾಗೂ ಜೂನ್ ಆರಂಭದಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ವಾಡಿಕೆಯಂತೆ ಮೇ ತಿಂಗಳಲ್ಲಿ ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 121.3 ಮಿಮೀ ಮಳೆಯಾಗಬೇಕಿತ್ತು, ಆದರೆ 221 ಮಿಮೀ ಮಳೆಯಾಗಿದೆ. ಜೂನ್ ತಿಂಗಳ ಆರಂಭದಲ್ಲಿ 85.4 ಮಿಮೀ ಮಳೆಯಾಗಬೇಕಿತ್ತು, ಆದರೆ 153.9 ಮಿಮೀ ಮಳೆಯಾಗಿದೆ. ನಗರ ತಾಲೂಕಿನಲ್ಲಿ ಮೇ ತಿಂಗಳಲ್ಲಿ 139 ಮಿಮೀ ಮಳೆಯಾಗಬೇಕಿತ್ತು, 250 ಮಿಮೀ ಮಳೆಯಾಗಿದೆ. ಜೂನ್ ಆರಂಭದಲ್ಲಿ 78.7 ಮಿಮೀ ಮಳೆಯಾಗಬೇಕಿತ್ತು, ಆದರೆ 110.4 ಮಿಮೀ ಮಳೆಯಾಗಿದೆ. ಭೂಮಿಯ ತೇವಾಂಶಕ್ಕೆ ಇದು ಸಹಕಾರಿಯಾಗಿದೆ.
ಬಿತ್ತನೆ ಬೀಜಕ್ಕಿಲ್ಲ ಕೊರತೆ: ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬಿತ್ತನೆ ಬೀಜಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಹುಬ್ಬಳ್ಳಿ, ಛಬ್ಬಿ, ಶಿರಗುಪ್ಪಿ ಹಾಗೂ ಬಿಡನಾಳ ಗ್ರಾಮದಲ್ಲಿ ಬಿತ್ತನೆ ಬೀಜ ದೊರಕುವಂತೆ ವ್ಯವಸ್ಥೆ ಮಾಡಲಾಗಿತ್ತು. ಶಿರಗುಪ್ಪಿ ರೈತ ಸಂಪರ್ಕ ಕೇಂದ್ರದ ಅಧೀನದಲ್ಲಿ ಕುಸುಗಲ್ಲ, ಛಬ್ಬಿ ಅಧೀನದಲ್ಲಿನ ಅಂಚಟಗೇರಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ತೆರೆಯುವ ಮೂಲಕ ರೈತರಿಗೆ ಬೇಕಾದಷ್ಟು ಬಿತ್ತನೆ ಬೀಜ ಹಾಗೂ ಗೊಬ್ಬರ ವಿತರಣೆ ಮಾಡಲಾಗಿದೆ. ಹುಬ್ಬಳ್ಳಿ ಕೃಷಿ ಇಲಾಖೆ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಈ ವರ್ಷ ಸೋಯಾಬೀನ್ 2,857 ಕ್ವಿಂಟಲ್ ಸಂಗ್ರಹ ಮಾಡಲಾಗಿದ್ದು, ಅದರಲ್ಲಿ 2,855 ಕ್ವಿಂಟಲ್ ರೈತರಿಗೆ ನೀಡಲಾಗಿದೆ. ಹೆಸರು 3,016 ಕ್ವಿಂಟಲ್ ಸಂಗ್ರಹದಲ್ಲಿ 3,005 ಕ್ವಿಂಟಲ್ ವಿತರಣೆ ಮಾಡಲಾಗಿದೆ. ಉದ್ದು, 36.6 ಕ್ವಿಂಟಲ್ ಸಂಗ್ರಹದಲ್ಲಿ 36.5 ಕ್ವಿಂಟಲ್, ಶೇಂಗಾ 154.2 ಕ್ವಿಂಟಲ್ ಸಂಗ್ರಹದಲ್ಲಿ 143.1 ಕ್ವಿಂಟಲ್ ವಿತರಣೆಯಾಗಿದೆ.
ಗೋವಿನ ಜೋಳ 277.28 ಕ್ವಿಂಟಲ್ ಸಂಗ್ರಹದಲ್ಲಿ 196.22 ಕ್ವಿಂಟಲ್, ತೊಗರಿ 2.4 ಕ್ವಿಂಟಲ್‌ನಲ್ಲಿ 2.4 ಕ್ವಿಂಟಲ್ ರೈತರಿಗೆ ವಿತರಣೆ ಮಾಡಲಾಗಿದೆ. ಎಲ್ಲ ಬಿತ್ತನೆ ಬೀಜಗಳು ಸೇರಿ ಒಟ್ಟು 3,629 ಕ್ವಿಂಟಲ್ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದ್ದು, ಅದರಲ್ಲಿ 3533 ಕ್ವಿಂಟಲ್‌ವಿತರಣೆ ಮಾಡಲಾಗಿದೆ.