Advertisement

Hubballi Riots Case: ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

01:06 AM Oct 14, 2024 | Team Udayavani |

ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧದ ಅಭಿಯೋಜನೆ ವಾಪಸ್‌ ಪಡೆಯಲು ಸರಕಾರ ನಿರ್ಧರಿಸಿರುವುದನ್ನು ಖಂಡಿಸಿ ಸೋಮವಾರ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲು ನಿರ್ಧರಿಸಿದ್ದು, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ನಡೆಯಲಿದೆ.

Advertisement

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕರು ಸಭೆ ನಡೆಸಿ ರಾಜ್ಯಾದ್ಯಂತ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್‌. ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷರಾದ ಎಸ್‌. ಹರೀಶ್‌, ಸಪ್ತಗಿರಿ ಗೌಡ, ಸಿ.ಕೆ. ರಾಮಮೂರ್ತಿ ಮೊದಲಾದವರು ಭಾಗವಹಿಸಲಿದ್ದಾರೆ.

ಈ ಪ್ರಕರಣ ಬಿಜೆಪಿಗೆ ಸೈದ್ಧಾಂತಿಕವಾಗಿ ದೊರೆತ ದೊಡ್ಡ ಅಸ್ತ್ರವಾಗಿದ್ದು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುತ್ತದೆ. ಜತೆಗೆ ಪ್ರಕರಣವನ್ನು ಅಭಿಯೋಜನೆಯಿಂದ ಕೈ ಬಿಟ್ಟಿರುವುದನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರುವುದಕ್ಕೂ ನಿರ್ಧರಿಸಲಾಗಿದೆ.

ಶಾಸಕರ ಮನವಿ ಸ್ವೀಕರಿಸದೆ ಸಿಎಂ ದುರಹಂಕಾರ: ಜೋಶಿ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ ದಾಳಿ ಪ್ರಕರಣ ತನಿಖೆಯನ್ನು ಎನ್‌ಐಎ ನಡೆಸುತ್ತಿದ್ದು ಅದನ್ನು ಹಿಂಪಡೆಯಬಾರದು ಎಂದು ಆಗ್ರಹಿಸಿ ಬಿಜೆಪಿ ಶಾಸಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಮುಂದಾದರೆ ಅವಕಾಶ ನೀಡದೆ ಮುಖ್ಯಮಂತ್ರಿ ದುರಹಂಕಾರ ವರ್ತನೆ ತೋರಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ಮುಖ್ಯಮಂತ್ರಿ ಭದ್ರತೆ ನೆಪದಲ್ಲಿ ಪೊಲೀಸರು ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ತಡೆದಿದ್ದಾರೆ. ರಾಜ್ಯ ಸರಕಾರದ ನಿರ್ಧಾರ ವಿರೋಧಿಸಿ ಮನವಿ ಸಲ್ಲಿಸುವುದು ತಪ್ಪೇ? ಹಿಂದೆ ಹಲವು ಸಿಎಂಗಳಿಗೆ ಮನವಿ ಸಲ್ಲಿಸಲಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಪಕ್ಷವಾಗಿದ್ದ ಕಾಂಗ್ರೆಸ್‌ನವರು ಮನವಿ ಸಲ್ಲಿಸಿದ್ದಾರೆ. ಆದರೆ ಸಿದ್ದರಾಮಯ್ಯ ದುರಂಹಕಾರ ತೋರಿದ್ದಾರೆ. ಸಿಎಂ ಮನವಿ ಸ್ವೀಕರಿಸದಿದ್ದರೆ ಭಯೋತ್ಪಾದಕರಿಗೆ ಬೆಂಬಲವಾಗಿದ್ದಾರೆ ಎಂದರ್ಥ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next